ಮಹಿಳೆಯರಿಗೆ ಚೆನ್ನಮ್ಮನ ಜೀವನ ಆದರ್ಶವಾಗಲಿ: ಭಾಗ್ಯವತಿ ಕರೆ

KannadaprabhaNewsNetwork |  
Published : Oct 28, 2026, 01:30 AM IST
ಚಿತ್ರ 27ಬಿಡಿಆರ್55 | Kannada Prabha

ಸಾರಾಂಶ

ಇಂದಿನ ಯುವತಿಯರು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಈ ಸಾಧನೆಗೆ ಕಿತ್ತೂರು ರಾಣಿ ಚೆನ್ನಮ್ಮ ಜೀವನವೇ ಪ್ರೇರಣಾಶಕ್ತಿಯಾಗಿದೆ ಎಂದು ತಾಲೂಕಿನ ಘೋಡಂಪಳ್ಳಿ ಸರ್ಕಾರಿ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಭಾಗ್ಯವತಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೀದರ್

ಇಂದಿನ ಯುವತಿಯರು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಈ ಸಾಧನೆಗೆ ಕಿತ್ತೂರು ರಾಣಿ ಚೆನ್ನಮ್ಮ ಜೀವನವೇ ಪ್ರೇರಣಾಶಕ್ತಿಯಾಗಿದೆ ಎಂದು ತಾಲೂಕಿನ ಘೋಡಂಪಳ್ಳಿ ಸರ್ಕಾರಿ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಭಾಗ್ಯವತಿ ಹೇಳಿದರು.

ನಗರದ ಬಿವಿಬಿ ಕಾಲೇಜು ರಸ್ತೆಯ ಚೆನ್ನಮ್ಮ ವೃತ್ತದ ಬಳಿ ಮಂಗಳವಾರ ನಡೆದ ಚೆನ್ನಮ್ಮ ಜಯಂತಿ ಉದ್ಘಾಟಿಸಿ ಮಾತನಾಡಿ, ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಮಹಿಳೆಯರಿಗೆ ಚೆನ್ನಮ್ಮಳ್ಳಂತಹ ಆದರ್ಶ ಮತ್ತೊಬ್ಬರು ಸಿಗಲಾರರು. ಚೆನ್ನಮ್ಮನ ಬದುಕೇ ಸ್ತ್ರೀ ಸಬಲೀಕರಣದ ನಿಜವಾದ ಪಾಠ. ಮಹಿಳೆಯರಲ್ಲಿ ಅಪಾರ ಶಕ್ತಿ, ಸಾಮರ್ಥ್ಯವಿದೆ. ಅದನ್ನು ಹೇಗೆ ಬಳಸಿಕೊಳ್ಳಲಾಗುತ್ತದೆ ಎಂಬುದರ ಮೇಲೆ ದೇಶದ ಅಭಿವೃದ್ಧಿ ಅಲವಂಬಿಸಿದೆ ಎಂಬ ಸ್ವಾಮಿ ವಿವೇಕಾನಂದರ ಮಾತು ಹಿಂದೆಂದಿಗಿಂತಲೂ ಈಗ ಬಹಳ ಪ್ರಸ್ತುತವೆನಿಸುತ್ತದೆ ಎಂದರು.

ಬಸವನಗರ ಮಹಿಳಾ ಮಂಡಳ ಅಧ್ಯಕ್ಷೆ ರತ್ನಾ ಪಾಟೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಚೆನ್ನಮ್ಮ ಸ್ತ್ರೀಯಾಗಿ, ತಾಯಿಯಾಗಿ, ರಾಜಮಾತೆಯಾಗಿ ಮಾಡಿದಂಥ ಕಾರ್ಯ ಅವಿಸ್ಮರಣೀಯ. ದತ್ತು ಪುತ್ರನ ಹಕ್ಕು ಪ್ರಶ್ನಿಸಿದ ಬ್ರಿಟಿಷರ ವಿರುದ್ಧ ಜೀವದ ಹಂಗು ತೊರೆದು ನಿಂತಿರುವುದು ಕೇವಲ ತಾಯಿಯ ಹೋರಾಟವಲ್ಲ, ಅದು ದೇಶದ ಅಸ್ಮಿತೆ, ಗೌರವದ ಹೋರಾಟವಾಗಿತ್ತು ಎಂದರು.

ಜಯಂತಿ ಸಮಿತಿ ಸಂಚಾಲಕ ರೇವಣಸಿದ್ದಪ್ಪ ಜಲಾದೆ ಮಾತನಾಡಿ, ಸರ್ವರಿಗೂ ಸ್ಫೂರ್ತಿ ತುಂಬಲು ಇಲ್ಲಿನ ವೃತ್ತದಲ್ಲಿ ರಾಣಿ ಚೆನ್ನಮ್ಮಳ ಭವ್ಯ ಕಂಚಿನ ಪ್ರತಿಮೆ ಸ್ಥಾಪಿಸಲು ನಿರ್ಧರಿಸಲಾಗಿದೆ. ದಾನಿಗಳ ನೆರವಿನಿಂದ ಹಣ ಸಂಗ್ರಹಿಸಿ ಆದಷ್ಟು ಬೇಗ ಪ್ರತಿಮೆ ಸ್ಥಾಪನೆ ಕೆಲಸಕ್ಕೆ ಚಾಲನೆ ನೀಡಲಾಗುವುದು ಎಂದರು.

ನಗರದ ಬಸವೇಶ್ವರ ವೃತ್ತದಿಂದ ಚೆನ್ನಮ್ಮ ವೃತ್ತದವರೆಗಿನ ಮಾರ್ಗಕ್ಕೆ ಐದು ವರ್ಷ ಹಿಂದೆ ಜಿಲ್ಲಾಡಳಿತ ಚೆನ್ನಮ್ಮ ಮಾರ್ಗ ಎಂದು ಹೆಸರಿಟ್ಟು ಅನುಮೋದನೆ ಸಹ ನೀಡಿದೆ. ಪಾಲಿಕೆಯವರು ಸೂಕ್ತ ಸ್ಥಳದಲ್ಲಿ ಈ ಕುರಿತು ಫಲಕ ಹಾಕಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ವಿನೋದ ಅಪ್ಪೆ ಮಾತನಾಡಿ, ಚೆನ್ನಮ್ಮ ವೃತ್ತದಲ್ಲಿ ಸಂಚಾರ ದಟ್ಟಣೆ ಅತಿಯಾಗಿದ್ದು, ಇಲ್ಲಿ ಟ್ರಾಫಿಕ್ ಸಿಗ್ನಲ್ ಆರಂಭಿಸುವ ಅಗತ್ಯವಿದೆ. ಚೆನ್ನಮ್ಮ ಉದ್ಯಾನ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಎನ್‌ಜಿಒ ಗೃಹ ನಿರ್ಮಾಣ ಸಹಕಾರ ಸಂಘ ಅಧ್ಯಕ್ಷ ಬಾಲಾಜಿ ಬಿರಾದಾರ, ಜಯಂತಿ ಸಮಿತಿ ಅಧ್ಯಕ್ಷ ಶರಣಪ್ಪ ಹೋತಪೇಟ, ಮಹಾನಗರಪಾಲಿಕೆ ಸದಸ್ಯರಾದ ಸಂತೋಷಿ ಅರುಣಕುಮಾರ, ಪ್ರೀತಿ ರಾಜೇಶ ಪಪ್ಪು, ಪ್ರಮುಖರಾದ ರಾಜಶೇಖರ ಪಾಟೀಲ್, ಬಲಭೀಮ ಬೆಟ್ಟದ, ಭಾರತಿ ವಸ್ತ್ರದ, ಸುನೀತಾ ಭಾಲ್ಕೆ, ಚಿತ್ರನಟಿ ನೇಹಾ ಬಸವರಾಜ ಮೂಲಗೆ, ಸಂಗಮೇಶ ಮೋರ್ಗಿ ಇತರರಿದ್ದರು.

ಶರಣಯ್ಯ ಸ್ವಾಮಿ ಸ್ವಾಗತಿಸಿ, ವೀಣಾ ಮಾಶೆಟ್ಟಿ ನಿರೂಪಿಸಿ, ಸಂಜನಾ ಪಾಟೀಲ್ ವಂದಿಸಿದರು.

ಇದೇ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ ಡಾ.ದೇವಿಕಾ ಅಶೋಕಕುಮಾರ ನಾಗೂರೆ, ಡಾ.ಎ.ಸಿ.ಲಲಿತಮ್ಮ ಹಾಗೂ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಉಪನ್ಯಾಸಕಿ ವಿದ್ಯಾವತಿ ಹಿರೇಮಠ ಅವರಿಗೆ "ಕಿತ್ತೂರು ರಾಣಿ ಚೆನ್ನಮ್ಮ " ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಫೋನ್‌ಇನ್‌ನಲ್ಲಿ ಕಸದ ಸಮ್ಯಸ್ಯೆಗಳದ್ದೇ ಸದ್ದು!
ಎಸ್‌ಐಆರ್‌ನಿಂದಾಗಿ ಬೆಂಗಳೂರಿನಲ್ಲಿ 46.88 ಲಕ್ಷ ಮತದಾರರ ಹೆಸರುಗಳು ಡಿಲೀಟ್ । ರಾಜಧಾನಿಯಲ್ಲಿ ಬರೀ 59 ಲಕ್ಷ ಮತದಾರರು