ಜಿಲ್ಲೆಯಲ್ಲಿ ಐಜಿಪಿ, ಎಸ್ಪಿ ಅಕ್ರಮ ಜೂಜಾಟ ಮಟ್ಟ ಹಾಕಲಿ

KannadaprabhaNewsNetwork |  
Published : Oct 28, 2026, 01:30 AM IST
27ಕೆಡಿವಿಜಿ1, 2, 3-ಚನ್ನಗಿರಿ ಕಾಂಗ್ರೆಸ್ ಶಾಸಕ ಬಸವರಾಜ ವಿ.ಶಿವಗಂಗಾ. | Kannada Prabha

ಸಾರಾಂಶ

ದಾವಣಗೆರೆ ಜಿಲ್ಲಾದ್ಯಂತ ಇಸ್ಪೀಟ್‌, ಅಂದರ್ ಬಾಹರ್ ಇಸ್ಪೀಟ್‌, ಅನಧಿಕೃತ ಕ್ಲಬ್‌ಗಳ ಹಾವಳಿ ಹೆಚ್ಚಾಗಿದ್ದು, ಮಟ್ಕಾ, ಇಸ್ಪೀಟ್ ಜೂಜಾಟ ದಂಧೆ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಎಸ್‌ಪಿ ಕಚೇರಿ ಎದುರು ನಾನೇ ಪ್ರತಿಭಟನೆಗೆ ಕೂರುತ್ತೇನೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಆಪ್ತ ಬಳಗದ ಚನ್ನಗಿರಿ ಕಾಂಗ್ರೆಸ್ ಶಾಸಕ ಬಸವರಾಜ ವಿ. ಶಿವಗಂಗಾ ಎಚ್ಚರಿಸಿದ್ದಾರೆ.

- ಸಿಎಂ-ಗೃಹ ಸಚಿವ-ಡಿಜಿಪಿಗೂ ಮನವಿ ಮಾಡುವೆ: ಶಾಸಕ ಬಸವರಾಜ ಶಿವಗಂಗಾ- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಜಿಲ್ಲಾದ್ಯಂತ ಇಸ್ಪೀಟ್‌, ಅಂದರ್ ಬಾಹರ್ ಇಸ್ಪೀಟ್‌, ಅನಧಿಕೃತ ಕ್ಲಬ್‌ಗಳ ಹಾವಳಿ ಹೆಚ್ಚಾಗಿದ್ದು, ಮಟ್ಕಾ, ಇಸ್ಪೀಟ್ ಜೂಜಾಟ ದಂಧೆ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಎಸ್‌ಪಿ ಕಚೇರಿ ಎದುರು ನಾನೇ ಪ್ರತಿಭಟನೆಗೆ ಕೂರುತ್ತೇನೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಆಪ್ತ ಬಳಗದ ಚನ್ನಗಿರಿ ಕಾಂಗ್ರೆಸ್ ಶಾಸಕ ಬಸವರಾಜ ವಿ. ಶಿವಗಂಗಾ ಎಚ್ಚರಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಸ್ಪೀಟ್‌, ಮಟ್ಕಾ ಸೇರಿದಂತೆ ಜೂಜಾಟ ದಂಧೆ ಮಟ್ಟ ಹಾಕುವಂತೆ ಎಸ್ಪಿ, ಐಜಿಪಿ, ಡಿಜಿಪಿಗೂ ಪತ್ರ ಬರೆದಿದ್ದೇನೆ. ಆ ಪತ್ರಗಳಿಗೆ ಸಹಿ ಹಾಕಿ ಎಲ್ಲರಿಗೂ ಕಳಿಸುತ್ತಿದ್ದೇನೆ ಎಂದರು.

ಇಡೀ ಜಿಲ್ಲಾದ್ಯಂತ ಅಂದರ್ ಬಾಹರ್ ಸೇರಿದಂತೆ ಇಸ್ಪೀಟ್ ದಂಧೆ ವ್ಯಾಪಕವಾಗಿ ಹರಡಿದೆ, ಅನಧಿಕೃತ ಕ್ಲಬ್‌ಗಳ ಹಾವಳಿಯೂ ಹೆಚ್ಚಾಗಿದೆ. ಇಂತಹ ಜೂಜಾಟದ ದಂಧೆಗೆ ಕುಟುಂಬಗಳು ಬೀದಿಗೆ ಬೀಳುತ್ತಿವೆ. ಮನೆ, ಮಕ್ಕಳು, ಕುಟುಂಬಗಳು ಹಾಳಾಗಿ, ಹಲವಾರು ಕುಟುಂಬಗಳ ಆರ್ಥಿಕ ಪರಿಸ್ಥಿತಿಯೇ ಹದಗೆಟ್ಟ ಬಗ್ಗೆ ತಮ್ಮ ಬಳಿ ಸುಮಾರು ದೂರು ಬಂದಿವೆ ಎಂದು ತಿಳಿಸಿದರು.

ಜೂಜಾಟ ದಂಧೆಯನ್ನು ಮಟ್ಟ ಹಾಕುವಂತೆ ದಾವಣಗೆರೆ ಎಸ್ಪಿ ಜೊತೆಗೂ ಮಾತನಾಡಿದ್ದೆ. ಡಿಜಿ ಸಲೀಂ ಸಾಹೇಬರು, ಐಜಿಪಿ ಎನ್.ಸತೀಶಕುಮಾರ್‌ ಅವರ ಜೊತೆಗೂ ಮಾತನಾಡಿದ್ದೇನೆ. ಆದರೂ, ಜೂಜಾಟದ ಹಾವಳಿ ಹೆಚ್ಚಾಗುತ್ತಿದೆಯೇ ಹೊರತು, ಕಡಿಮೆಯಂತೂ ಆಗಿಲ್ಲ. ಮುಖ್ಯಮಂತ್ರಿ, ಗೃಹ ಮಂತ್ರಿಗಳಿಗೆ ಇಂತಹ ದಂಧೆಗೆ ಅಂತ್ಯ ಹಾಡುವಂತೆ ನಾನು ಮನವಿ ಮಾಡುತ್ತೇನೆ ಎಂದು ಹೇಳಿದರು.

ತಕ್ಷಣವೇ ಪೂರ್ವ ವಲಯದ ಐಜಿಪಿ ಹಾಗೂ ದಾವಣಗೆರೆ ಎಸ್‌ಪಿಯನ್ನು ವಾಪಸ್‌ ಪಡೆಯಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಖುದ್ದಾಗಿ ಐಜಿಪಿ, ಎಸ್‌ಪಿ ಬಂದು ಅಕ್ರಮ ಚಟುವಟಿಕೆಗಳನ್ನು ನಿಲ್ಲಿಸಬೇಕು. ರಾಜ್ಯದ ಜನರ ಆರ್ಥಿಕ ಸಬಲೀಕರಣಕ್ಕೆಂದೇ ನಮ್ಮ ಸರ್ಕಾರ ₹60 ಸಾವಿರ ಕೋಟಿ ಖರ್ಚು ಮಾಡುತ್ತದೆ. ಹೀಗೆ ದಂಧೆ ನಡೆಯುತ್ತಿದ್ದರೆ ನಾವು ಗ್ಯಾರಂಟಿಗಳನ್ನೇ ಕೊಡುವ ಅವಶ್ಯಕತೆ ಇಲ್ಲ. ಹಾಗಾಗಿ, ಅಕ್ರಮ ಜೂಜಾಟದ ದಂಧೆ ತಡೆಯಲು ನಾನು ಅನಿವಾರ್ಯವಾಗಿ ಹೋರಾಟ ಮಾಡಬೇಕಾಗುತ್ತದೆ. ಮೇಲಾಧಿಕಾರಿಗಳು ನಾವು ಹೋರಾಟ ನಡೆಸುವವರೆಗೂ ಕಾಯದೇ ತಕ್ಷಣ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.

ಜಿಲ್ಲಾಮಟ್ಟದ ಅಧಿಕಾರಿಗಳನ್ನು ನಾವ್ಯಾರೂ ಹಾಕಿಸಿಕೊಂಡು ಬರುವುದಿಲ್ಲ. ಜಿಲ್ಲಾದ್ಯಂತ ಎಲ್ಲಿಯೂ ಇಸ್ಪೀಟ್‌ ಸೇರದಂತೆ ಯಾವುದೇ ಜೂಜಾಟದ ದಂಧೆ ನಡೆಯಬಾರದು. ಇನ್ನೊಂದು ಸಲ ಯಾವುದಾದರೂ ಜೂಜಾಟದ ವೀಡಿಯೋ ಬಂದರೆ ಜೂಜಾಟದ ವಿರುದ್ಧ ನಾನೇ ಹೋರಾಟ ಮಾಡುತ್ತೇನೆ. ಎಸ್‌ಪಿ ಕಚೇರಿ ಮುಂದೆ ಸ್ವತಃ ನಾನೇ ಪ್ರತಿಭಟನೆ ನಡೆಸಿ, ಹೋರಾಟ ಮಾಡುತ್ತೇನೆ ಎಂದು ಬಸವರಾಜ ವಿ.ಶಿವಗಂಗಾ ಪುನರುಚ್ಚರಿಸುವ ಮೂಲಕ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸಿದರು.

- - -

-27ಕೆಡಿವಿಜಿ1, 2, 3: ಬಸವರಾಜ ವಿ.ಶಿವಗಂಗಾ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಸನಾಂಬೆಯ ದರ್ಶನಕ್ಕೆ ಸ್ಥಳೀಯರಿಗೆ ಮೊದಲ ಆದ್ಯತೆ ಕೋರಿ ಪ್ರತಿಭಟನೆ
ಕಾನೂನು ಅರಿವು ಪಡೆದು ಹಕ್ಕುಗಳನ್ನು ರಕ್ಷಿಸಿಕೊಳ್ಳಿ: ನ್ಯಾಯಾಧೀಶೆ ಹೇಮಾವತಿ ಕರೆ