ಹಾಸನಾಂಬೆ ಹಾಸನದ ಗ್ರಾಮ ದೇವತೆಯಾಗಿದ್ದು, ಸ್ಥಳೀಯ ನಿವಾಸಿಗಳಿಗೆ ದೇವಿಯ ದರ್ಶನ ಪಡೆಯಲು ಆದ್ಯತೆ ನೀಡುವುದು ಜಿಲ್ಲಾಡಳಿತದ ಜವಾಬ್ದಾರಿಯಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ಸಂದರ್ಭದಲ್ಲಿ ಹಾಸನದ ಜನರೇ ದರ್ಶನದಿಂದ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗಬಾರದು.
ಕನ್ನಡಪ್ರಭ ವಾರ್ತೆ ಹಾಸನ
ಹಾಸನಾಂಬೆ ಜಾತ್ರಾ ಮಹೋತ್ಸವದಲ್ಲಿ ಹಾಸನ ತಾಲೂಕಿನ ಸ್ಥಳೀಯ ಭಕ್ತರಿಗೆ ಪ್ರತ್ಯೇಕ ಸಮಯದಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಬೇಕು, ಸಿದ್ದೇಶ್ವರ ಸ್ವಾಮಿ ದೇವಸ್ಥಾನದ ಬಾಗಿಲು ಮುಚ್ಚಬಾರದು ಹಾಗೂ ಭಕ್ತರಿಗೆ ಕುಂಕುಮ ಮತ್ತು ಹೂವು ವಿತರಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ವಿವಿಧ ಹಿಂದೂಪರ ಮತ್ತು ಧಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.ಹಾಸನಾಂಬ, ಸಿದ್ದೇಶ್ವರ ಸ್ವಾಮಿ ಪುಣ್ಯಕ್ಷೇತ್ರ ಸೇವಾ ಸಮಿತಿ, ವರ್ತಕರ ಸಂಘ, ಅರ್ಚಕರ ಸಂಘ ಸೇರಿ ವಿವಿಧ ಸಂಘ- ಸಂಸ್ಥೆಗಳ ಪ್ರತಿನಿಧಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಜಾತ್ರಾ ಮಹೋತ್ಸವದ ನಿರ್ವಹಣೆ ಹಾಗೂ ಗುತ್ತಿಗೆ ಪ್ರಕ್ರಿಯೆಯಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂದು ಪ್ರತಿಭಟನಾಕಾರರು ಆರೋಪಿಸಿ, ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಸುಭಾಷ್ ವೃತ್ತ, ಕಸ್ತೂರಬಾ ರಸ್ತೆ ಹಾಗೂ ಗಾಂಧಿಬಜಾರ್ ರಸ್ತೆಯ ಮೂಲಕ ಸಾಗಿ ಎನ್.ಆರ್. ವೃತ್ತ ತಲುಪಿತು. ಅಲ್ಲಿ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು ಮಾನವ ಸರಪಳಿ ನಿರ್ಮಿಸಿ, ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಹಾಸನಾಂಬೆ ಜಾತ್ರಾ ಮಹೋತ್ಸವದ ಹೆಸರಿನಲ್ಲಿ ಭಕ್ತರಿಂದ ಹಣ ವಸೂಲಿ ಮಾಡುವ ಮೂಲಕ ಲೂಟಿ ನಡೆಸಲಾಗುತ್ತಿದೆ ಎಂದು ಆರೋಪಿಸಿದರು. ವರ್ತಕರು ಸ್ವಯಂಪ್ರೇರಿತರಾಗಿ ಅಂಗಡಿ- ಮುಂಗಟ್ಟುಗಳನ್ನು ಮುಚ್ಚಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ. ಗೌಡ ಮಾಧ್ಯಮದೊಂದಿಗೆ ಮಾತನಾಡಿ, ಹಾಸನಾಂಬೆ ಹಾಸನದ ಗ್ರಾಮ ದೇವತೆಯಾಗಿದ್ದು, ಸ್ಥಳೀಯ ನಿವಾಸಿಗಳಿಗೆ ದೇವಿಯ ದರ್ಶನ ಪಡೆಯಲು ಆದ್ಯತೆ ನೀಡುವುದು ಜಿಲ್ಲಾಡಳಿತದ ಜವಾಬ್ದಾರಿಯಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ಸಂದರ್ಭದಲ್ಲಿ ಹಾಸನದ ಜನರೇ ದರ್ಶನದಿಂದ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದರು. ಸ್ಥಳೀಯರಿಗೆ ಅನುಕೂಲ ಕಲ್ಪಿಸಲು ಈಗಿರುವ ೧,೦೦೦ ವಿಶೇಷ ದರ್ಶನದ ಸಮಯವನ್ನು ವಿಭಜಿಸಿ, ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ವಿಶೇಷ ದರ್ಶನಕ್ಕೆ ಅವಕಾಶ ನೀಡಿ, ಮಧ್ಯಾಹ್ನದ ನಂತರ ಸ್ಥಳೀಯರಿಗೆ ದರ್ಶನ ಕಲ್ಪಿಸಬಹುದು. ಇದಕ್ಕಾಗಿ ಹೊಸ ವ್ಯವಸ್ಥೆ ರೂಪಿಸುವ ಬದಲು ಈಗಿರುವ ವ್ಯವಸ್ಥೆಯಲ್ಲಿಯೇ ಸಣ್ಣ ಬದಲಾವಣೆ ಮಾಡಿದರೆ ಸಾಕು. ಹಾಸನ ಜಿಲ್ಲೆಯ ಸ್ಥಳೀಯ ನಿವಾಸಿಗಳನ್ನು ಆಧಾರ್ ಕಾರ್ಡ್ ಮೂಲಕ ಗುರುತಿಸಿ ದರ್ಶನಕ್ಕೆ ಅವಕಾಶ ಕಲ್ಪಿಸಬಹುದು ಎಂದು ಸಲಹೆ ನೀಡಿದರು. ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರು ಸಭೆ ನಡೆಸಿ ಈ ಕುರಿತು ತಕ್ಷಣ ನಿರ್ಧಾರ ಕೈಗೊಳ್ಳಬೇಕು. ಸ್ಥಳೀಯರ ಬೇಡಿಕೆಗೆ ಸ್ಪಂದಿಸಿ ಅಕ್ಟೋಬರ್ ೨೮ರೊಳಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದರೆ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಮಾತನಾಡಿ, ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವವಿದೆ. ಹಿಂದಿನಿಂದಲೂ ಗ್ರಾಮದ ಜನರು ಜಾತಿ- ಭೇದ ಮರೆತು ಗ್ರಾಮ ದೇವತೆಯನ್ನು ಆರಾಧಿಸಿಕೊಂಡು ಬಂದಿದ್ದಾರೆ. ಇದೀಗ ಜಾತ್ರೆ ವಿಶ್ವವಿಖ್ಯಾತಿ ಪಡೆದಿರುವ ಹಿನ್ನೆಲೆಯಲ್ಲಿ ಸ್ಥಳೀಯ ಭಕ್ತರಿಗೆ ದರ್ಶನದ ಆದ್ಯತೆ ದೊರೆಯುವಂತೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಸ್ಥಳೀಯ ನಿವಾಸಿಗಳಿಗೆ ಸಂಜೆ ೩ರಿಂದ ರಾತ್ರಿ ೯ರವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸುವಂತೆ ಸಮಯ ನಿಗದಿಪಡಿಸಬಹುದು. ಆಧಾರ್ ಕಾರ್ಡ್ ಮೂಲಕ ಸ್ಥಳೀಯರನ್ನು ಗುರುತಿಸಿ, ಈಗಿರುವ ದರ್ಶನದ ಸಾಲಿನಲ್ಲಿಯೇ ನಿಗದಿತ ಸಮಯದಲ್ಲಿ ಅವರಿಗೆ ಆದ್ಯತೆ ನೀಡಬಹುದು. ಇದರಿಂದ ಪ್ರತ್ಯೇಕ ಪಾಸ್ ವ್ಯವಸ್ಥೆಯ ಅಗತ್ಯವಿರುವುದಿಲ್ಲ ಹಾಗೂ ಆಡಳಿತಾತ್ಮಕ ತೊಂದರೆಗಳೂ ಕಡಿಮೆಯಾಗಲಿವೆ ಎಂದು ಸಲಹೆ ನೀಡಿದರು.
ಸ್ಥಳೀಯರ ಧಾರ್ಮಿಕ ಭಾವನೆಗಳಿಗೆ ಗೌರವ ನೀಡುವುದರ ಜೊತೆಗೆ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ದರ್ಶನ ವ್ಯವಸ್ಥೆ ರೂಪಿಸಬೇಕು. ಜಿಲ್ಲಾಡಳಿತವು ಸಂಘಟನೆಗಳ ಬೇಡಿಕೆಗಳಿಗೆ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮುಖಂಡರು ಒತ್ತಾಯಿಸಿದರು.