- ಕೊರಚ, ಕೊರಮರನ್ನು ಅಲಮಾರಿ ಪಟ್ಟಿಯಿಂದ ದೂರವಿಡುವ ಹೇಳಿಕೆ ಖಂಡನೀಯ: ಮುಖಂಡರು
- - - ಕನ್ನಡಪ್ರಭ ವಾರ್ತೆ ದಾವಣಗೆರೆಪರಿಶಿಷ್ಟ ಜಾತಿಯ ಅಲೆಮಾರಿ ಪಟ್ಟಿಯಿಂದ ಕೊರಚರನ್ನು ಹೊರಗಿಡಬೇಕೆಂಬ ವಿಧಾನ ಪರಿಷತ್ತು ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಇನ್ನು 15 ದಿನದಲ್ಲಿ ತಮ್ಮ ಹೇಳಿಕೆ ಹಿಂಪಡೆಯಬೇಕು. ಕೊರಚ ಸಮಾಜಕ್ಕೆ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಅಖಿಲ ಕರ್ನಾಟಕ ಕೊರಚರ ಮಹಾಸಂಘದ ಜಿಲ್ಲಾ ಘಟಕ ತಾಕೀತು ಮಾಡಿದೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ, ವಕೀಲ ಎಸ್.ಕುಮಾರ ಅವರು, ಬೆಳಗಾವಿ ಸುವರ್ಣ ಸೌಧದಲ್ಲಿ ಅಧಿವೇಶನದ ವೇಳೆ ಛಲವಾದಿ ನಾರಾಯಣಸ್ವಾಮಿ ಇಂಥ ಹೇಳಿಕೆ ನೀಡಿರುವುದು ಕಡುಮೂರ್ಖತನದಿಂದ ಕೂಡಿದೆ ಎಂದರು.ಕೊರಚ, ಕೊರಮರು ಪರಿಶಿಷ್ಟ ಜಾತಿಯ ಅಲೆಮಾರಿ ಪಟ್ಟಿ(49)ಯಲ್ಲಿ ಬರುವುದಿಲ್ಲ. ಅಷ್ಟೇ ಅಲ್ಲ, ಪರಿಶಿಷ್ಟ ಜಾತಿ ಒಳಮೀಸಲಾತಿ ಪಟ್ಟಿಗೂ ಕೊರಚ, ಕೊರಮರು ಸೇರುವುದಿಲ್ಲ ಎಂದಿದ್ದಾರೆ. ಇಂಥ ಹೇಳಿಕೆಗಳನ್ನು ಸಮಾಜ ತೀವ್ರವಾಗಿ ಖಂಡಿಸುತ್ತದೆ. ಯಾವುದೇ ಆಧಾರವಿಲ್ಲದೇ ಇಂತಹ ಹೇಳಿಕೆ ನೀಡಿ, ಅಲೆಮಾರಿ ಸಮುದಾಯಗಳ ಮಧ್ಯೆ ಜಗಳ ಹಚ್ಚುವ ಕೆಲಸವನ್ನು ಛಲವಾದಿ ನಾರಾಯಣ ಸ್ವಾಮಿ ಮಾಡಿದ್ದಾರೆ. ಕೂಡಲೇ ಅವರು ಹೇಳಿಕೆ ಹಿಂಪಡೆದು, ಸಮಾಜದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಛಲವಾದಿ ನಾರಾಯಣ ಸ್ವಾಮಿ ರಾಜೀನಾಮೆಗೆ ಒತ್ತಾಯಿಸಿ ಕೊರಚರ ಸಮಾಜ ರಾಜ್ಯವ್ಯಾಪಿ ಹೋರಾಟ ನಡೆಸಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಆ ಪಕ್ಷದ ಹಿರಿಯ ನಾಯಕರು ಛಲವಾದಿ ನಾರಾಯಣ ಸ್ವಾಮಿ ಅವರಿಗೆ ಬುದ್ಧಿ ಹೇಳಬೇಕು. ಪರಿಶಿಷ್ಟ ಜಾತಿಯಲ್ಲಿ 51 ಜಾತಿಗಳಿವೆ. ಇದರಲ್ಲಿರುವ ಅಲೆಮಾರಿಗಳಲ್ಲೇ ಅತ್ಯಂತ ನಿಕೃಷ್ಟ ಬದುಕನ್ನು ಇಂದಿಗೂ ಬಾಳುತ್ತಿರುವವರೇ ಕೊರಚರು ಎಂಬುದನ್ನು ನಾರಾಯಣ ಸ್ವಾಮಿಯಂಥವರು ಅರಿಯಲಿ ಎಂದರು.ಕೊರಚರು ಹಗ್ಗ, ಕಣ್ಣಿ, ಕಸ ಪೊರಕೆ ಮಾರಾಟ, ಬುಟ್ಟಿ ಹೆಣೆಯುವುದು, ಹಂದಿ ಸಾಕಾಣಿಕೆ ಇತ್ಯಾದಿ ವೃತ್ತಿಗಳ ನಿರ್ವಹಿಸುತ್ತ ಹೊಟ್ಟೆಪಾಡಿಗೆ ಬದುಕು ಕಟ್ಟಿಕೊಂಡಿದ್ದಾರೆ. ರಾಜ್ಯದಲ್ಲಿ ಸುಮಾರು 2.5 ಲಕ್ಷ ಜನಸಂಖ್ಯೆ ಹೊಂದಿರುವ ಈ ಸಮುದಾಯದ ಬಗ್ಗೆ ಹಗುರವಾಗಿ ಮಾತನಾಡಲು ಹೇಗೆ ಮನಸ್ಸು ಬಂದಿತು ಎಂದು ಕಿಡಿಕಾರಿದರು.
ಸಮಾಜದ ಅಧ್ಯಕ್ಷ ಮಾರಪ್ಪ ಪೈಲ್ವಾನ್ ಮಾತನಾಡಿ, ಛಲವಾದಿ ನಾರಾಯಣಸ್ವಾಮಿ ತಕ್ಷಣ ಹೇಳಿಕೆ ಹಿಂಪಡೆದು, ಬಹಿರಂಗ ಕ್ಷಮೆಯಾಚಿಸಬೇಕು. ಅಲ್ಲದೇ, ಸೂಕ್ತ ಕ್ರಮ ಕೈಗೊಳ್ಳುವಂತೆ ಬಿಜೆಪಿ ರಾಜ್ಯ, ರಾಷ್ಟ್ರೀಯ ನಾಯಕರಿಗೆ ಒತ್ತಾಯಿಸಲಾಗುವುದು ಎಂದರು.ಸಂಘದ ಪದಾಧಿಕಾರಿಗಳಾದ ಎಸ್.ಎಲ್. ಕೊಟ್ರೇಶ, ಮಾಜಿ ಸೈನಿಕರಾದ ಅಜ್ಜಯ್ಯ, ಚಂದ್ರು ಕವಾಡಿ, ಸಂತೋಷ, ಡಿ.ಮಧುಕುಮಾರ, ದುರುಗಪ್ಪ ಇತರರು ಇದ್ದರು.
- - -ಬಾಕ್ಸ್ * ಅಲೆಮಾರಿಗಳ ಪಟ್ಟಿಯಲ್ಲಿ 51 ಸಮುದಾಯ: ಸಿದ್ದೇಶ ಮುಖಂಡ ಎಂ.ಸಿದ್ದೇಶ ಮಾದಾಪುರ ಮಾತನಾಡಿ, ಈ ಹಿಂದಿನ ಅವಧಿಯಲ್ಲಿ ರಾಜ್ಯದ ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಕುರಿತು ರಾಷ್ಟ್ರೀಯ ಕಾನೂನು ಶಾಲೆ ಮತ್ತು ಸಾಮಾಜಿಕ ಚಿಂತಕರನ್ನು ಒಳಗೊಂಡ ತಂಡದ ಮೂಲಕ ಅಧ್ಯಯನ ನಡೆಸಲಾಗಿದೆ. ಪರಿಶಿಷ್ಟ ಜಾತಿಯ ಅಲೆಮಾರಿಗಳ ಪಟ್ಟಿಯಲ್ಲಿ ಕೊರಚ, ಕೊರಮ ಸೇರಿದಂತೆ 51 ಸಮುದಾಯಗಳಿವೆ. ಆದರೆ, 49 ಸಮುದಾಯಗಳೆಂದು ಛಲವಾದಿ ನಾರಾಯಣ ಸ್ವಾಮಿ ಹೇಳಿ, ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಭವಿಷ್ಯದಲ್ಲಿ ನಾರಾಯಣ ಸ್ವಾಮಿ ಚುನಾವಣೆಗೆ ನಿಲ್ಲುವ ಕಡೆಗೆಲ್ಲಾ ತೆರಳಿ, ಅವರ ವಿರುದ್ಧ ಪ್ರಚಾರ ಮಾಡಬೇಕಾದೀತು ಎಂದು ಎಚ್ಚರಿಸಿದರು.
- - - (ಫೋಟೋ ಇದೆ)-25ಕೆಡಿವಿಜಿ1.ಜೆಪಿಜಿ: