ಸಾಗರ : ರಾಜ್ಯ ಉಚ್ಚ ನ್ಯಾಯಾಲಯ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಿನಾಮೆ ನೀಡುವಂತೆ ಒತ್ತಾಯಿಸಿ ಬಿಜೆಪಿ ವತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಚ್.ಹಾಲಪ್ಪ ಮಾತನಾಡಿ, ಮೂಡಾ ಹಗರಣದಲ್ಲಿ ರಾಜ್ಯಪಾಲರು ತನಿಖೆಗೆ ಆದೇಶಿಸಿದ್ದನ್ನು ವಿರೋಧಿಸಿ ನ್ಯಾಯಾಲಯದ ಮೊರೆ ಹೋಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ನ್ಯಾಯಾಲಯದ ಆದೇಶಕ್ಕೆ ತಲೆಬಾಗಿ ರಾಜೀನಾಮೆ ಸಲ್ಲಿಸಿ ವಿಚಾರಣೆ ಎದುರಿಸಬೇಕು. ರಾಜ್ಯಪಾಲರ ನಿರ್ದೇಶನ ವಿರೋಧಿಸಿ, ಬಾಯಿಗೆ ಬಂದಂತೆ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯನವರು, ಈಗ ರಾಜ್ಯಪಾಲರು ತನಿಖೆಗೆ ಆದೇಶಿಸಿದ್ದು, ಸರಿಯಾಗಿದೆ ಎಂದು ನ್ಯಾಯಾಲಯದ ಆದೇಶವು ಬಂದಿದೆ.
ಈಗ ರಾಜೀನಾಮೆ ಸಲ್ಲಿಸಿ ತನಿಖೆ ಎದುರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರಿಕೃಷ್ಣ ಮಾತನಾಡಿ, ಸತ್ಯಹರಿಶ್ಚಂದ್ರನ ತುಂಡು ಎಂಬಂತೆ ಮಾತನಾಡುವ ಸಿಎಂ ಸಿದ್ದರಾಮಯ್ಯನವರು ಸರ್ವಾಧಿಕಾರಿ ಧೋರಣೆ ಅನುಸರಿಸಿ ದೇಶಕ್ಕೆ ತುರ್ತು ಪರಿಸ್ಥಿತಿ ಹೇರಿದ್ದ ಇಂದಿರಾ ಗಾಂಧಿಯವರಂತೆಯೇ ನಡೆದು ಕೊಂಡಿದ್ದಾರೆ. ತಪ್ಪು ಮಾಡದಿದ್ದರೆ ತನಿಖೆಗೆ ಹೆದರುವುದು ಯಾಕೆ? ಅದರಿಂದ ಜನರಿಗೂ ಸತ್ಯ ತಿಳಿಯುತ್ತದೆ. ರಾಜ್ಯದ ಮೂಲೆಮೂಲೆಯಲ್ಲೂ ಜನ ಮಾತನಾಡುತ್ತಿದ್ದಾರೆ.
ಕೂಡಲೇ ಸಿದ್ದರಾಮಯ್ಯನವರು ರಾಜೀನಾಮೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ನಗರ ಅಧ್ಯಕ್ಷ ಗಣೇಶ ಪ್ರಸಾದ್, ಗ್ರಾಮಾಂತರ ಅಧ್ಯಕ್ಷ ದೇವೇಂದ್ರಪ್ಪ, ಡಾ.ರಾಜನಂದಿನಿ ಕಾಗೋಡು, ಕೆ.ಎಸ್.ಪ್ರಶಾಂತ್, ಆರ್.ಶ್ರೀನಿವಾಸ್ ಮಾತನಾಡಿದರು. ಪಕ್ಷದ ಪ್ರಮುಖರಾದ ಮಹಂತೇಶ್, ಶ್ರೀನಿವಾಸ್, ಕೆ. ಸತೀಶ್, ಪ್ರದೀಪ್ ಆಚಾರ್, ಪರಶುರಾಮ್, ಸಂತೋಷ್, ಮೈತ್ರಿ ಪಾಟೀಲ್, ಅರವಿಂದ ರಾಯ್ಕರ್, ರಾಜೇಂದ್ರ ಪೈ, ಮೊದಲಾದವರು ಹಾಜರಿದ್ದರು.‘ಇದು ಮೈಸೂರು ಚಲೋ ಹೋರಾಟಕ್ಕೆ ಸಿಕ್ಕ ಜಯ’
ಮುಡಾ ಹಗರಣದ ಕುರಿತು ಬಿಜೆಪಿ ನಡೆಸಿದ್ದ ಮೈಸೂರು ಚಲೋ ಹೋರಾಟಕ್ಕೆ ಸಿಕ್ಕ ಜಯ ಸಿಕ್ಕಂತಾಗಿದೆ. ಇದರೊಂದಿಗೆ ವಾಲ್ಮಿಕಿ ಅಭಿವೃದ್ಧಿ ನಿಗಮದ ಹಗರಣದಲ್ಲೂ ಮುಖ್ಯಮಂತ್ರಿ ಹಾಗೂ ಸರ್ಕಾರದ ನೇರ ಹಸ್ತಕ್ಷೇಪ ವಿರುವುದು ಸಾರ್ವಜನಿಕವಾಗಿದೆ. ಆಡಳಿತದಲ್ಲಿ ಅರಾಜಕತೆ ಹೆಚ್ಚುತ್ತಿದ್ದು, ಸಿದ್ದರಾಮಯ್ಯ ನವರು ಹಿಂದೂ ವಿರೋಧಿ ನೀತಿ, ಓಲೈಕೆ ರಾಜಕಾರಣ ಮಾಡುತ್ತಿರುವುದು ದುರದೃಷ್ಟಕರ ವಿಚಾರ ಎಂದು ಮಾಜಿ ಸಚಿವ ಹೆಚ್.ಹಾಲಪ್ಪ ಹೇಳಿದರು.