ಸ್ವಚ್ಛತೆ ಪ್ರತಿದಿನದ ಬದುಕಿನ ಭಾಗವಾಗಲಿ: ಡಿಸಿ

KannadaprabhaNewsNetwork |  
Published : Oct 03, 2026, 02:00 AM IST
ಹುಬ್ಬಳ್ಳಿಯ ತೋಳನಕೆರೆ ಆವರಣದಲ್ಲಿ ಹು-ಧಾ ಮಹಾನಗರ ಪಾಲಿಕೆ ವತಿಯಿಂದ ಬೃಹತ್ ಸ್ವಚ್ಛತಾ ಅಭಿಯಾನ ಹಾಗೂ ಫಾಗಿಂಗ್ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. | Kannada Prabha

ಸಾರಾಂಶ

ಮಹಾತ್ಮ ಗಾಂಧಿ ಅವರು ನೈರ್ಮಲ್ಯಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು. ಸ್ವಚ್ಛತೆ ಪಾಲಿಕೆಯೊಂದರ ಜವಾಬ್ದಾರಿಯಲ್ಲ; ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಅದು ಮನೆಯಿಂದಲೇ ಆರಂಭವಾಗಬೇಕು.

ಹುಬ್ಬಳ್ಳಿ:

ಸ್ವಚ್ಛತೆ ಎಂಬುದು ಒಂದು ದಿನಕ್ಕೆ ಸೀಮಿತವಾದ ಕಾರ್ಯಕ್ರಮವಲ್ಲ. ಪ್ರತಿ ದಿನದ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮನೋಭಾವವಾಗಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಹೇಳಿದರು.

ಅವರು ಇಲ್ಲಿನ ವಿದ್ಯಾನಗರದ ತೋಳನಕೆರೆ ಆವರಣದಲ್ಲಿ ಹು-ಧಾ ಮಹಾನಗರ ಪಾಲಿಕೆ ವತಿಯಿಂದ ಮಹಾತ್ಮ ಗಾಂಧಿ ಹಾಗೂ ಲಾಲ್‌ ಬಹದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಬೃಹತ್ ಸ್ವಚ್ಛತಾ ಅಭಿಯಾನ ಹಾಗೂ ಫಾಗಿಂಗ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಹಾತ್ಮ ಗಾಂಧಿ ಅವರು ನೈರ್ಮಲ್ಯಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು. ಸ್ವಚ್ಛತೆ ಪಾಲಿಕೆಯೊಂದರ ಜವಾಬ್ದಾರಿಯಲ್ಲ; ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಅದು ಮನೆಯಿಂದಲೇ ಆರಂಭವಾಗಬೇಕು. ಹಸಿ ಕಸ, ಒಣ ಕಸ, ಸ್ಯಾನಿಟರಿ ಹಾಗೂ ವಿಶೇಷ ಕಾಳಜಿಯ ತ್ಯಾಜ್ಯವನ್ನು ಪ್ರತ್ಯೇಕಿಸಿ ಪೌರಕಾರ್ಮಿಕರಿಗೆ ಹಸ್ತಾಂತರಿಸಬೇಕು. ಎಲ್ಲೆಂದರಲ್ಲಿ ಕಸ ಎಸೆಯದೆ, ತ್ಯಾಜ್ಯ ಉತ್ಪಾದನೆ ಕಡಿಮೆ ಮಾಡಬೇಕು. ಮರುಬಳಕೆ ಹಾಗೂ ಪುನರ್‌ಉತ್ಪಾದನೆಗೆ ಆದ್ಯತೆ ನೀಡಬೇಕು ಎಂದರು.

ಇದೇ ವೇಳೆ ನಟಿ ಮಯೂರಿ ಅವರಿಗೆ ಪಾಲಿಕೆಯ ನೂತನ ಸ್ವಚ್ಛತಾ ರಾಯಭಾರಿ ಪ್ರಮಾಣಪತ್ರ ನೀಡಲಾಯಿತು. ಬಳಿಕ ಮಾತನಾಡಿದ ಅವರು, ಮನಸ್ಸು, ಮನೆ ಹಾಗೂ ನಗರದ ಜತೆಗೆ ನಮ್ಮ ಸುತ್ತಲಿನ ಪರಿಸರವೂ ಸ್ವಚ್ಛವಾಗಿರಬೇಕು. ಇನ್ನೊಬ್ಬರ ಮೇಲೆ ದೂರುವ ಬದಲು ಪೌರಕಾರ್ಮಿಕರೊಂದಿಗೆ ಕೈಜೋಡಿಸಿ ನಗರ ಸ್ವಚ್ಛತೆಗೆ ಸಹಕರಿಸಬೇಕು. ನಗರದ ಸ್ವಚ್ಛತೆಗೆ ತಮ್ಮಿಂದಾದ ಎಲ್ಲ ಸಹಕಾರ ನೀಡುವುದಾಗಿ ಹೇಳಿದರು.

ಬಾಲನಟಿ ಶಾರ್ವರಿ ಮಾತನಾಡಿ, ಇನ್ನೊಬ್ಬರು ಕಸ ಹಾಕುತ್ತಾರೆಂದು ನಾವೂ ಹಾಕಿದರೆ ನಗರವೇ ಕಸದ ರಾಶಿಯಾಗುತ್ತದೆ. ಪೌರಕಾರ್ಮಿಕರೊಂದಿಗೆ ಸಾರ್ವಜನಿಕರೂ ಸ್ವಚ್ಛತೆ ಕಾಪಾಡಿದರೆ ಅದುವೇ ಭೂಮಿತಾಯಿಗೆ ಸಲ್ಲಿಸುವ ದೊಡ್ಡ ಸೇವೆ ಎಂದರು.

ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಅಧ್ಯಕ್ಷತೆ ವಹಿಸಿದ್ದರು. ಪ್ರೊಬೆಷನರಿ ಅಧಿಕಾರಿ ಸುಪ್ರಿಯಾ, ಉಪ ಆಯುಕ್ತರಾದ ಅನುರಾಧ ವಸ್ತ್ರದ, ವಿಜಯಕುಮಾರ ಆರ್., ಮುಖ್ಯ ಲೆಕ್ಕಾಧಿಕಾರಿ ಶಂಕರಾನಂದ ಬನಶಂಕರಿ, ಕಾರ್ಯನಿರ್ವಾಹಕ ಅಭಿಯಂತರ ಸಂತೋಷಕುಮಾರ ಯರಂಗಳ್ಳಿ, ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ ಸೇರಿದಂತೆ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ, ಪೌರಕಾರ್ಮಿಕರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು. ಬಳಿಕ ಶ್ರಮದಾನ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಪ್ಪಳ ಜಿಲ್ಲೆಯ 11 ಗ್ರಾಮಗಳಿಗೆ ಗಾಂಧಿ ಪುರಸ್ಕಾರ
ಜೀವನ ಚೈತನ್ಯಕ್ಕೆ ಗಾಂಧೀಜಿ ಆದರ್ಶ ಬೇಕು