ಸಿಎಂ ಸಿದ್ದರಾಮಯ್ಯ ತನಿಖೆ ಎದುರಿಸಿ ಶುದ್ಧರಾಮಯ್ಯ ಆಗಲಿ : ಮಾಜಿ ಸಂಸದ ಮುನಿಸ್ವಾಮಿ

KannadaprabhaNewsNetwork |  
Published : Oct 03, 2024, 01:23 AM ISTUpdated : Oct 03, 2024, 10:37 AM IST
ಬಳ್ಳಾರಿಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಂಸದ ಮುನಿಸ್ವಾಮಿ ಅವರು ಸಿಎಂ ಸಿದ್ಧರಾಮಯ್ಯ ರಾಜಿನಾಮೆಗೆ ಆಗ್ರಹಿಸಿದರು. | Kannada Prabha

ಸಾರಾಂಶ

ಮುಡಾದಲ್ಲಿ ಕೇವಲ 14 ಸೈಟ್ ಗಳು ಮಾತ್ರವಲ್ಲ; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸುಮಾರು ₹5000 ಕೋಟಿ ಹಗರಣವಾಗಿದೆ.

ಬಳ್ಳಾರಿ: 14 ಸೈಟ್‌ಗಳನ್ನು ವಾಪಸ್ ನೀಡಿದಾಕ್ಷಣ ಸಿದ್ದರಾಮಯ್ಯ ಮುಡಾ ಪ್ರಕರಣದ ಆರೋಪದಿಂದ ಮುಕ್ತರಾಗುವುದಿಲ್ಲ. ಸಿಎಂ ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ತನಿಖೆ ಎದುರಿಸಲಿ. ಶುದ್ಧರಾಮಯ್ಯ ಆಗಿ ಹೊರ ಬಂದು ನಿರಾಪರಾಧಿ ಎಂದು ಸಾಬೀತುಪಡಿಸಲಿ ಎಂದು ಕೋಲಾರದ ಮಾಜಿ ಸಂಸದ ಮುನಿಸ್ವಾಮಿ ಆಗ್ರಹಿಸಿದರು.

ಇಲ್ಲಿನ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿದ್ದ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಆರೋಪ ಕೇಳಿ ಬಂದಾಗ ರಾಜೀನಾಮೆಗೆ ಆಗ್ರಹಿಸಿದ್ದರು. ಆದರೆ, ಈಗ ಸಿದ್ದರಾಮಯ್ಯ ವಿರುದ್ಧವೇ ಭ್ರಷ್ಟಾಚಾರದ ಆರೋಪ ಎದುರಾಗಿದೆ. ಈಗೇಕೆ ತಾವು ರಾಜಿನಾಮೆ ನೀಡುವುದಿಲ್ಲ ಎಂದು ಪ್ರಶ್ನಿಸಿದರು.

ಮುಡಾದಲ್ಲಿ ಕೇವಲ 14 ಸೈಟ್ ಗಳು ಮಾತ್ರವಲ್ಲ; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸುಮಾರು ₹5000 ಕೋಟಿ ಹಗರಣವಾಗಿದೆ. ಯಾರಿಂದ ಯಾರಿಗೆ ನಿವೇಶನ ಹಂಚಿಕೆಯಾಗಿದೆ ಎಂಬುವುದನ್ನು ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರ ದಲಿತರಿಗೆ ವಂಚಿಸಿದ್ದಾರೆ. ಶೋಷಿತ ಸಮಾಜದ ಕಲ್ಯಾಣಕ್ಕೆ ಮೀಸಲಾದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಲಾಗಿದೆ. ಗಣೇಶೋತ್ಸವ ಮಾಡಲು ಅನೇಕ ನಿಯಮಗಳನ್ನು ರೂಪಿಸಿದ ಕಾಂಗ್ರೆಸ್ ಸರ್ಕಾರ, ಟಿಪ್ಪು ಸುಲ್ತಾನ್ ಜಯಂತಿಗೆ ಅನುಮತಿ ನೀಡುತ್ತದೆ. ಪ್ಯಾಲೆಸ್ತಿನ್ ಧ್ವಜ ಹಾರಿಸಲಾಗುತ್ತಿದೆ. ಇಂತಹವರಿಗೆ ಯಾವುದೇ ನಿಯಮ, ಕಟ್ಟುಪಾಡುಗಳಿಲ್ಲ. ರಾಜ್ಯದಲ್ಲಿ ಕೋಮು ಗಲಭೆ ನಡೆಯಲು ಕಾಂಗ್ರೆಸ್ ಕಾರಣವಾಗಿದ್ದು, ಕೂಡಲೇ ವಿಧಾನಸಭೆ ವಿಸರ್ಜಿಸಿ ರಾಜ್ಯದ ಜನರ ಎದುರು ಚುನಾವಣೆಗೆ ಹೋಗಬೇಕು ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಶಾಸಕ ಬಸವನಗೌಡ ಯತ್ನಾಳ ಭ್ರಮನಿರಸರಾಗಿದ್ದಾರೆ. ಅವರು ಏನಿದ್ದರೂ ಪಕ್ಷದ ಚೌಕಟ್ಟಿನಲ್ಲಿ ಮಾತನಾಡಬೇಕು. ಬಿಜೆಪಿ ಅವಧಿಯಲ್ಲಿ ಭ್ರಷ್ಟಾಚಾರ ಆಗಿದ್ದರೆ ತನಿಖೆಗೆ ಒಳಪಡಿಸಲಿ. ಎಸ್.ಟಿ. ಸೋಮಶೇಖರ್, ಯತ್ನಾಳ್ ಬಳಿ ಏನಾದರೂ ದಾಖಲೆಗಳಿದ್ದರೆ ಸಿದ್ದರಾಮಯ್ಯ ಅವರಿಗೆ ಕೊಟ್ಟು ತನಿಖೆಗೆ ತಿಳಿಸಲಿ. ಸೋಮಶೇಖರ್ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ. ಎಲೆಕ್ಟ್ರೋಲ್ ಬಾಂಡ್ ವಿಚಾರಣೆ ನಡೆಯುತ್ತಿದ್ದು, ತಪ್ಪು ಎಸಗಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್, ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಮೋಕಾ, ಪಕ್ಷದ ಮುಖಂಡರಾದ ಎಚ್‌.ಹನುಮಂತಪ್ಪ, ಕೆ.ಎಂ.ರಾಮಲಿಂಗಪ್ಪ ಸುದ್ದಿಗೋಷ್ಠಿಯಲ್ಲಿದ್ದರು.

ಬಳ್ಳಾರಿಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಂಸದ ಮುನಿಸ್ವಾಮಿ ಅವರು ಸಿಎಂ ಸಿದ್ಧರಾಮಯ್ಯ ರಾಜೀನಾಮೆಗೆ ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ