ಸಿಎಂ ಸಿದ್ದರಾಮಯ್ಯ ಕೊಟ್ಟ ಮಾತು ಉಳಿಸಿಕೊಳ್ಳಲಿ: ಜಬ್ಬಾರ ಕಲಬುರಗಿ

KannadaprabhaNewsNetwork | Published : Sep 12, 2024 1:55 AM

ಸಾರಾಂಶ

ಸಿದ್ದರಾಮಯ್ಯ ಅವರು ನಮ್ಮ ಸರ್ಕಾರ ಬಂದ 24 ಗಂಟೆಯೊಳಗಾಗಿ ಮುಸ್ಲಿಂರಿಗೆ ಮೀಸಲಾತಿ ಮುಂದುವರೆಸುವುದಾಗಿ ಹೇಳಿ, ಮಾತು ತಪ್ಪಿದ್ದಾರೆ, ಅದನ್ನು ಉಳಿಸಿಕೊಳ್ಳಬೇಕು.

ಸುದ್ದಿಗೋಷ್ಠಿಯಲ್ಲಿ ಮುಸ್ಲಿಂ ಯುನಿಟಿ ರಾಜ್ಯಾಧ್ಯಕ್ಷ ಆಗ್ರಹ

ಕನ್ನಡಪ್ರಭ ವಾರ್ತೆ ಕೊಪ್ಪಳ

ಮುಸ್ಲಿಂ ಮೀಸಲಾತಿಯನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಿತ್ತು ಹಾಕಿದ್ದರಿಂದ ನಾವೆಲ್ಲ ಶೇ.99ರಷ್ಟು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿದ್ದೇವೆ. ಸಿದ್ದರಾಮಯ್ಯ ಅವರು ನಮ್ಮ ಸರ್ಕಾರ ಬಂದ 24 ಗಂಟೆಯೊಳಗಾಗಿ ಮುಸ್ಲಿಂರಿಗೆ ಮೀಸಲಾತಿ ಮುಂದುವರೆಸುವುದಾಗಿ ಹೇಳಿ, ಮಾತು ತಪ್ಪಿದ್ದಾರೆ, ಅದನ್ನು ಉಳಿಸಿಕೊಳ್ಳಬೇಕು ಎಂದು ಮುಸ್ಲಿಂ ಯುನಿಟಿ ರಾಜ್ಯಾಧ್ಯಕ್ಷ ಜಬ್ಬಾರ ಕಲಬುರಗಿ ಆಗ್ರಹಿಸಿದ್ದಾರೆ.

ನಗರದ ಮೀಡಿಯಾ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೂ ತಂದಿದ್ದೇವೆ, ನಮ್ಮ ಸಮುದಾಯದ ಶಾಸಕರು, ಸಚಿವರ ಗಮನಕ್ಕೂ ತಂದಿದ್ದೇವೆ. ಆದರೂ ನಮಗೆ ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಈಗ ರಾಜ್ಯಾದ್ಯಂತ ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ, ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಹೋರಾಟ ಮಾಡುತ್ತೇವೆ ಎಂದರು.

ಕೂಡಲೇ ಮುಸ್ಲಿಂ ಸಮುದಾಯಕ್ಕೆ 2ಬಿ ಅಡಿಯಲ್ಲಿ ನೀಡಲಾಗುತ್ತಿದ್ದ ಶೇ. 4 ಮೀಸಲಾತಿಯನ್ನು ಮರು ಸ್ಥಾಪಿಸಬೇಕು. ಮರು ಸ್ಥಾಪಿಸುವ ವೇಳೆಯಲ್ಲಿ ಅದರ ಪ್ರಮಾಣವನ್ನು ಶೇ. 8ಕ್ಕೆ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.

ಮುಸ್ಲಿಮರು ಕಾಂಗ್ರೆಸ್ ಬೆಂಬಲಿಸುತ್ತಾರೆ ಎನ್ನುವುದು ಸರಿಯಲ್ಲ. ನಮಗೆ ಅನ್ಯಾಯವಾದರೆ ನಾವು ಸಹಿಸುವುದಿಲ್ಲ. ಈ ಹಿಂದೆ ಯಡಿಯೂರಪ್ಪ ಬಿಜೆಪಿಯಲ್ಲಿದ್ದಾಗ ಶೇ. 30ರಷ್ಟು ಮುಸ್ಲಿಮರು ಬೆಂಬಲಿಸಿದ್ದರು. ಅದರಿಂದಲೇ ಅವರು ಅಧಿಕಾರಕ್ಕೆ ಬಂದಿದ್ದರು. ಆದರೆ, ನಂತರ ಸಿಎಂ ಬದಲಾವಣೆಯಾಗಿ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಮುಸ್ಲಿಮರಿಗೆ ಇದ್ದ ಮೀಸಲಾತಿಯನ್ನು ರದ್ದು ಮಾಡಿದ್ದರಿಂದ ಬಿಜೆಪಿಯನ್ನು ವಿರೋಧಿಸಿ, ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದೇವೆ. ಆದರೆ, ಸಿದ್ದರಾಮಯ್ಯ ಸಿಎಂ ಆಗಿ 16 ತಿಂಗಳಾಗುತ್ತಾ ಬಂದರೂ ಸಹ ಮುಸ್ಲಿಂ ಮೀಸಲಾತಿಯನ್ನು ನೀಡುವ ನಿರ್ಣಯ ಕೈಗೊಳ್ಳುತ್ತಿಲ್ಲ ಎಂದರು.

ಮೆಹಬೂಬ ಸರಖಾವಸ, ನೂರ್ ಅಹ್ಮದ್, ಆಸೀಫ್ ಕರ್ಕಿಹಳ್ಳಿ ಇದ್ದರು.

Share this article