ಮುಡಾ ಪ್ರಕರಣ - ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಿ ತನಿಖೆ ಎದುರಿಸಲಿ : ಶ್ರೀರಾಮುಲು

KannadaprabhaNewsNetwork |  
Published : Sep 28, 2024, 01:31 AM ISTUpdated : Sep 28, 2024, 12:20 PM IST
ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಬಳ್ಳಾರಿಯ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಸಿಎಂ ರಾಜಿನಾಮೆಗೆ ಆಗ್ರಹಿಸಿದರು.  | Kannada Prabha

ಸಾರಾಂಶ

ಮುಡಾ ಪ್ರಕರಣದಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತಿರುವ ಸಿಎಂ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಆಗ್ರಹಿಸಿದ್ದಾರೆ.

ಬಳ್ಳಾರಿ: ಮುಡಾ ಪ್ರಕರಣದಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತಿರುವ ಸಿಎಂ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಆಗ್ರಹಿಸಿದ್ದಾರೆ.

ಪಕ್ಷದ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉನ್ನತ ಹುದ್ದೆಯಲ್ಲಿದ್ದವರನ್ನು ತನಿಖೆ ಮಾಡಲು ಅಧಿಕಾರಿಗಳಿಗೆ ಕಷ್ಟವಾಗುತ್ತದೆ. ನಿಷ್ಪಕ್ಷಪಾತ ತನಿಖೆಗೆ ಆಸ್ಪದವಾಗುವುದಿಲ್ಲ. ಸಿದ್ದರಾಮಯ್ಯ ಕೂಡಲೇ ಮುಖ್ಯಮಂತ್ರಿ ಹುದ್ದೆಯಿಂದ ನಿರ್ಗಮಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ವಾಲ್ಮೀಕಿ ನಿಗಮದ ಸುಮಾರು ₹21ಕೋಟಿಯನ್ನು ಅಕ್ರಮವಾಗಿ ಲೋಕಸಭಾ ಚುನಾವಣೆಗೆ ಬಳಕೆಯಾಗಿದೆ ಎಂದು ತನಿಖಾ ಸಂಸ್ಥೆಗಳಿಂದ ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಸಂಸದ ಈ.ತುಕಾರಾಂ ರಾಜೀನಾಮೆ ನೀಡಬೇಕು. ಸಂಸದ ಸ್ಥಾನವನ್ನು ಅಸಿಂಧುಗೊಳಿಸಲು ಕೋರ್ಟ್‌ ಮೊರೆ ಹೋಗಲು ನಿರ್ಧರಿಸಲಾಗಿದೆ. ಈ ಸಂಬಂಧ ಕಾನೂನು ತಜ್ಞರ ಜೊತೆ ಚರ್ಚಿಸುತ್ತಿರುವೆ ಎಂದರು.

ಸಂಸದ ತುಕಾರಾಂ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕು ಬಾರಿ ಗೆಲುವು ಸಾಧಿಸಿದ್ದು ಸಂತೋಷ ಲಾಡ್‌ ಅವರ ಕೃಪಾಕಟಾಕ್ಷದಿಂದ ಎಂಬುದನ್ನು ಮರೆಯಬಾರದು. ನಮ್ಮ ವಿರುದ್ಧ ಸವಾಲು ಹಾಕುವುದನ್ನು ಬಿಟ್ಟು ಸ್ವಂತ ಶಕ್ತಿಯಿಂದ ಗೆದ್ದು ಬರಲಿ. ವಾಲ್ಮೀಕಿ ನಿಗಮದಲ್ಲಿ ಅಷ್ಟೊಂದು ದೊಡ್ಡ ಹಗರಣ ನಡೆದರೂ ತುಕಾರಾಂ ಯಾವುದೇ ಧ್ವನಿ ಎತ್ತಲಿಲ್ಲ. ಇದೀಗ ನನ್ನ ವಿರುದ್ಧ ಸವಾಲು ಹಾಕುತ್ತಿದ್ದಾರೆ. ನಿಗಮದ ಹಣದಿಂದ ಗೆದ್ದು ಬಂದವರು ನನ್ನ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ಪಾದಯಾತ್ರೆಯ ಬಗ್ಗೆ ನಿರ್ಧಾರವಾಗಿಲ್ಲ:

ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣ ಹಿನ್ನೆಲೆಯಲ್ಲಿ ಪಾದಯಾತ್ರೆ ನಡೆಸುವ ವಿಚಾರ ಪಕ್ಷದಿಂದ ಯಾವುದೇ ನಿರ್ಧಾರ ಕೈಗೊಂಡಿಲ್ಲ. ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯವಾದರೆ ರಕ್ತ ಸಂಬಂಧಿಗಳಾದರೂ ಬಿಡುವುದಿಲ್ಲ. ಬಳ್ಳಾರಿ ಜಿಲ್ಲೆಯ ಬಗ್ಗೆ ಇಲ್ಲಿನ ಶಾಸಕರು, ಸಂಸದರಿಗೆ ಯಾವುದೇ ಕಾಳಜಿ ಇಲ್ಲ. ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪರಿಪರಿಯಾಗಿ ಬೇಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.

ಸಂಡೂರು ಉಪ ಚುನಾವಣೆಯಲ್ಲಿ ನೀವು ಸ್ಪರ್ಧಿಸುತ್ತಿರಾ? ಎಂಬ ಪತ್ರಕರ್ತರ ಪ್ರಶ್ನೆಗೆ, ಉಪ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಶ್ರೀರಾಮುಲು ಖಚಿತಪಡಿಸಿದರು.

ತುಕಾರಾಂ ಸಂಡೂರಿಗೆ ಸೀಮಿತ:

ವಿಧಾನಪರಿಷತ್ ಸದಸ್ಯ ವೈ.ಎಂ.ಸತೀಶ್ ಮಾತನಾಡಿ, ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆ ಯಾವುದೇ ಟೆಂಡರ್ ಕರೆಯದೇ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗುತ್ತಿದೆ. ಸಂಸದ ಈ.ತುಕಾರಾಂ ಪ್ರೋಟೋಕಾಲ್ ಪ್ರಕಾರ ಜನಪ್ರತಿನಿಧಿಗಳನ್ನು ಆಹ್ವಾನಿಸದೇ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡುತ್ತಿದ್ದಾರೆ. ಸಂಸದರಾಗಿದ್ದೂ ಸಂಡೂರು ಶಾಸಕರಂತೆ ವರ್ತಿಸುತ್ತಿದ್ದಾರೆ. ಅವರು ಸಂಸದರು ಎಂಬುದನ್ನು ಮರೆತು ಸಂಡೂರಿಗೆ ಮಾತ್ರ ಸೀಮಿತವಾಗಿದ್ದಾರೆ ಎಂದು ಟೀಕಿಸಿದರು.

ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕಾ, ಮುಖಂಡರಾದ ಓಬಳೇಶ್, ಮಲ್ಲೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!