ಕಾಫಿ ತೋಟಗಳ ನಿರ್ವಹಣೆಯ ಡಿಪ್ಲೋಮಾ ತರಗತಿಗಳಿಗೆ (ಡಿಸಿಇಎಂ) ಚಾಲನೆ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಮುಂದಿನ ದಿನಗಳಲ್ಲಿ ಕಾಫಿ ಬೆಳೆಗಾರರು ವಿನೂತನ ತಂತ್ರಜ್ಞಾನ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ವಿ.ಮಂಜುನಾಥ್ ಹೇಳಿದರು.ಸಿಆರ್ ಎಸ್‌ನ ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆಯಲ್ಲಿ ನೂತನವಾಗಿ ಆರಂಭಗೊಂಡಿರುವ ಕಾಫಿ ತೋಟಗಳ ನಿರ್ವಹಣೆಯ ಡಿಪ್ಲೋಮಾ ತರಗತಿಗಳಿಗೆ (ಡಿಸಿಇಎಂ) ಬುಧವಾರ ಚಾಲನೆ ನೀಡಿ ಮಾತನಾಡಿದರು. ಕಾಫಿ ತೋಟಗಳಲ್ಲಿ ಹಲವಾರು ಜನ ವ್ಯವಸ್ಥಾಪಕರು ಇದ್ದಾರೆ. ಆದರೆ ಅವರಿಗೆ ವಿನೂತನ ತಂತ್ರಜ್ಞಾನದೊಂದಿಗೆ ಎಸ್ಟೇಟ್‌ಗಳ ನಿರ್ವಹಣೆ ಮಾಡುವುದು ತಿಳಿದಿಲ್ಲ. ಈ ಹಿನ್ನೆಲೆಯಲ್ಲಿ ಇಂದಿನ ಯುವಜನರಿಗೆ ಕಾಫಿ ತೋಟಗಳ ನಿರ್ವಹಣೆಗೆ ಡಿಪ್ಲೋಮಾ ಕೋರ್ಸು ಗಳನ್ನು ಆರಂಭಿಸಿರುವುದು ಸಮಯೋಚಿತವಾಗಿದೆ ಎಂದರು.
ಇಂತಹ ತರಗತಿಗಳನ್ನು ಯುವಜನರಿಗಾಗಿ ಆರಂಭಿಸಬೇಕೆಂಬುದು ಬಹುದಿನಗಳ ಬೇಡಿಕೆ. ಪ್ರಸ್ತುತ ಆ ಕಾರ್ಯ ನಡೆದಿರುವುದು ಸಂತಸ ತಂದಿದೆ. ಕಾಫಿ ಸಂಶೋಧನಾ ಸಂಸ್ಥೆ ಉತ್ತಮವಾದ ಹೊಸ ತಳಿಗಳ ಸಂಶೋಧನೆ ಮಾಡಿ ಬೆಳೆ ಗಾರರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ. ಹೊಸ ತಳಿಗಳಿಂದ ಹಲವು ಕಾಫಿ ತೋಟಗಳು ಅಭಿವೃದ್ಧಿ ಹೊಂದಿವೆ ಎಂದರು.ಇತ್ತೀಚಿನ ದಿನಗಳಲ್ಲಿ ಮಾನವ-ಕಾಡು ಪ್ರಾಣಿ ಸಂಘರ್ಷ, ಕೂಲಿ ಕಾರ್ಮಿಕರ ಸಮಸ್ಯೆ, ಅರಣ್ಯ ಕಾಯ್ದೆ ಸಮಸ್ಯೆಗಳು ಹಲವು ಇದ್ದು, ಇದರಿಂದಾಗಿ ಹಲವು ಕಾಫಿ ತೋಟಗಳು ಸಂಕಷ್ಟದಲ್ಲಿವೆ. ಈ ಬಗ್ಗೆ ಕಾಫಿ ಮಂಡಳಿ ಗಮನಹರಿಸಬೇಕಿದೆ ಎಂದರು.ಕಾಫಿ ಸಂಶೋಧನಾ ಕೇಂದ್ರದ ಸಂಶೋಧನಾ ನಿರ್ದೇಶಕ ಡಾ.ಸೆಂಥಿಲ್ ಕುಮಾರ್ ಮಾತನಾಡಿ, ಭಾರತದಲ್ಲಿ ಸಿಸಿಆರ್‌ಐ ಭಾರತದಲ್ಲಿರುವ ಅತೀ ಹಳೆಯ ಸಂಶೋಧನಾ ಸಂಸ್ಥೆಯಾಗಿದ್ದು, 100 ವರ್ಷ ಪೂರೈಸಿರುವ ಯಶಸ್ವಿ ಸಂಸ್ಥೆ ಇದು ಎಂಬುದು ಹೆಮ್ಮೆ ವಿಚಾರ. ಅಕ್ಟೋಬರ್‌ನಲ್ಲಿ ಸಂಸ್ಥೆ ಶತಮಾನೋತ್ಸವದ ದೊಡ್ಡ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ಮಾಡಿ ಕೊಂಡಿದೆ. ಇದರ ಸವಿನೆನಪಿಗಾಗಿ ಸಂಶೋಧನಾ ಕೇಂದ್ರದಲ್ಲಿ ಈ ವರ್ಷದಿಂದ 2 ವರ್ಷಗಳ ಡಿಸಿಇಎಂ ಡಿಪ್ಲೋಮಾ ಕೋರ್ಸುಗಳನ್ನು ಆರಂಭಿಸಿದೆ ಎಂದು ಹೇಳಿದರು.ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಕಾಫಿ ತೋಟಗಳನ್ನು ಹೇಗೆ ನಿರ್ವಹಣೆ ಮಾಡಬೇಕು. ಕೂಲಿ ಕಾರ್ಮಿಕರ ನಿರ್ವಹಣೆ, ಗೊಬ್ಬರ, ನೀರಾವರಿಗಳ ಮತ್ತಿತರ ಬಳಕೆ ಬಗ್ಗೆ ಕೋರ್ಸುಗಳಲ್ಲಿ ವಿದ್ಯಾರ್ಥಿಗಳಿಗೆ ತಿಳಿಸಲಾಗುವುದು. ನುರಿತ ಎಸ್ಟೇಟ್ ನಿರ್ವಾಹಕರನ್ನು ತಯಾರು ಮಾಡಬೇಕು ಎಂಬುದೇ ಉದ್ದೇಶ. ಇದು ಕಾಫಿ ಉದ್ಯಮಕ್ಕೆ ಹೊಸ ದಿಕ್ಕು ನೀಡಲಿದೆ. ಎರಡು ವಿಧದಲ್ಲಿ ಕೋರ್ಸುಗಳನ್ನು ಆರಂಭಿಸಲಿದ್ದು, ಒಂದು ವರ್ಷದ ಸರ್ಟಿಫಿಕೇಟ್ ಕೋರ್ಸು ಹಾಗೂ ಎರಡು ವರ್ಷದ ಡಿಪ್ಲೋಮಾ ಇದರಲ್ಲಿ ಇರಲಿದೆ. ಕೋರ್ಸುಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಸ್ಟೈಫಂಡ್ ನೀಡಲಾಗುವುದು ಎಂದು ತಿಳಿಸಿದರು.
ಕಾಫಿ ಬೆಳೆಗಾರ ಎಚ್.ಬಿ. ರಾಜಗೋಪಾಲ್, ಕೇಂದ್ರೀಯ ಕಾಫಿ ಮಂಡಳಿ ಸದಸ್ಯ ಡಾ.ಎಚ್.ಎಸ್.ಕೃಷ್ಣಾನಂದ, ಭಾಸ್ಕರ್ ವೆನಿಲ್ಲಾ, ಸಂಶೋಧನಾ ಕೇಂದ್ರದ ಜಂಟಿ ನಿರ್ದೇಶಕ ಡಾ.ಜೆ.ಎಸ್.ನಾಗರಾಜ್, ಡಾ.ಶಿವಕುಮಾರ್ ಸ್ವಾಮಿ, ಡಾ.ನಂದಗೋಪಾಲ್, ಡಾ.ಸಂತೋಷ್ ರೆಡ್ಡಿ, ಡಾ.ಉಮಾ ಮತ್ತಿತರರು ಹಾಜರಿದ್ದರು.೧೬ಬಿಹೆಚ್‌ಆರ್ ೧:ಬಾಳೆಹೊನ್ನೂರು ಸಮೀಪದ ಸಿಆರ್‌ಎಸ್‌ನ ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆಯಲ್ಲಿ ನೂತನವಾಗಿ ಆರಂಭಗೊಂಡಿರುವ ಕಾಫಿ ತೋಟಗಳ ನಿರ್ವಹಣೆಯ ಡಿಪ್ಲೋಮಾ ತರಗತಿಗಳನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ವಿ.ಮಂಜುನಾಥ್ ಉದ್ಘಾಟಿಸಿದರು. ಡಾ.ಸೆಂಥಿಲ್‌ಕುಮಾರ್, ಎಚ್.ಬಿ.ರಾಜಗೋಪಾಲ್, ಭಾಸ್ಕರ್ ವೆನಿಲ್ಲಾ, ಡಾ.ಎಚ್.ಎಸ್.ಕೃಷ್ಣಾನಂದ ಹಾಜರಿದ್ದರು.