
ನಮಗೇ ನೀರಿಲ್ಲದಿದ್ದಾಗ ತಮಿಳುನಾಡಿಗೆ ಹರಿಸುವುದಾದರೂ ಹೇಗೆ? । ಕರವೇ ನಾರಾಯಣಗೌಡ ಬಣದಿಂದ ಡೀಸಿ ಕಚೇರಿವರೆಗೆ ಪಾಸಯಾತ್ರೆ
ಕರ್ನಾಟಕದಲ್ಲಿ ಬರಗಾಲ ಇದ್ದಾಗಲೂ ತಮಿಳುನಾಡಿಗೆ 4.5 ಟಿಎಂಸಿ ನೀರು ಹರಿಸುವಂತೆ ಆದೇಶ ನೀಡಿರುವ ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವನ್ನು ವಿರೋಧಿಸಿ, ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಜಿಲ್ಲಾಧ್ಯಕ್ಷ ಅರುಣ್ ಕೃಷ್ಣಯ್ಯ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನಗರದ ಟೌನ್‌ಹಾಲ್ ಮುಂಭಾಗದಲ್ಲಿ ಸಮಾವೇಶಗೊಂಡ ನೂರಾರು ಕರವೇ ಕಾರ್ಯಕರ್ತರು, ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಅಶೋಕ ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪಾದಯಾತ್ರೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಈ ವೇಳೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ತುಮಕೂರು ಜಿಲ್ಲಾಧ್ಯಕ್ಷ ಅರುಣ್ ಕೃಷ್ಣಯ್ಯ, ರಾಜ್ಯದಲ್ಲಿ ಈ ವರ್ಷದ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದ ಪರಿಣಾಮ ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿನ ಕೊರತೆ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ರಾಜ್ಯದ ರೈತರ ಹಿತಾಸಕ್ತಿ ಹಾಗೂ ಕುಡಿಯುವ ನೀರಿನ ಭದ್ರತೆಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸುವುದು ಅತ್ಯಗತ್ಯವಾಗಿದೆ. ಹಾಗಾಗಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಧಿಕ್ಕರಿಸಬೇಕು. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು ಎಂದು ಆಗ್ರಹಿಸಿದರು.
ಅದೇ ರೀತಿ ಕಬಿನಿ ಜಲಾಶಯಕ್ಕೆ ಸುಮಾರು 12,೦೦೦-15,೦೦೦ ಕ್ಯುಸೆಕ್ಸ್ ಒಳಹರಿವು ಇದ್ದರೂ,10,೦೦೦-14,೦೦೦ ಕ್ಯುಸೆಕ್ಸ್ ಹೊರಹರಿವು ನಡೆಯುತ್ತಿದ್ದು, ಅದರಲ್ಲಿ 8,000-11,೦೦೦ ಕ್ಯುಸೆಕ್ಸ್ ನೀರು ಕಾವೇರಿ ಮೂಲಕ ತಮಿಳುನಾಡಿನ ಕಡೆ ಹರಿಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕರ್ನಾಟಕದ ಜಲಾಶಯಗಳಲ್ಲಿರುವ ನೀರನ್ನು ರಾಜ್ಯದ ಜನರ ಕುಡಿಯುವ ನೀರು, ರೈತರ ಕೃಷಿ ಹಾಗೂ ಭವಿಷ್ಯದ ಅಗತ್ಯಗಳಿಗೆ ಸಂರಕ್ಷಿಸುವುದು ಅತ್ಯಂತ ಅವಶ್ಯಕವಾಗಿದೆ. ಆದ್ದರಿಂದ ಸರ್ಕಾರವು ರಾಜ್ಯದ ಹಿತ ಕಾಪಾಡುವಂತೆ ಮನವಿ ಮಾಡಿದರು.
ಒಂದು ವೇಳೆ ಕರ್ನಾಟಕದ ಹಿತಾಸಕ್ತಿ ಕಡೆಗಣಿಸಿ ತಮಿಳುನಾಡಿಗೆ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಿದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತುಮಕೂರು ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಾಗೂ ಪ್ರಜಾಸತ್ತಾತ್ಮಕ ಹೋರಾಟವನ್ನು ಹಮ್ಮಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಇದರಿಂದ ಉಂಟಾಗುವ ಎಲ್ಲ ಬೆಳವಣಿಗೆಗಳಿಗೆ ಸರ್ಕಾರವೇ ಹೊಣೆಗಾರವಾಗಿರುತ್ತದೆ. ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.