ನಗರದಲ್ಲಿ ಹೆಚ್ಚುತ್ತಿರುವ ತಾಪಮಾನದಿಂದ ಹೀಟ್ ಸ್ಟ್ರೋಕ್ ನಂತಹ ಗಂಭೀರ ಪ್ರಕರಣಗಳು ಸಂಭವಿಸದಂತೆ ತಡೆಯಲು ನಗರದ 162 ಇಂದಿರಾ ಕ್ಯಾಂಟಿನ್ ಗಳನ್ನು ಕೂಲಿಂಗ್ ಸೆಂಟರ್‌ಗಳಾಗಿ ಪರಿವರ್ತಿಸಲು ಕ್ರಮ ಕೈಗೊಂಡಿರುವ ಜಿಬಿಎ, ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ 417 ಕೇಂದ್ರಗಳನ್ನು ಆಶ್ರಯ ತಾಣಗಳನ್ನಾಗಿ ಗುರುತಿಸಿ ‘ಶಾಖ-ಆರೋಗ್ಯ ಶಿಷ್ಟಾಚಾರ’ವನ್ನು ಜಾರಿಗೆ ತಂದಿದೆ.
ಬೆಂಗಳೂರು : ನಗರದಲ್ಲಿ ಹೆಚ್ಚುತ್ತಿರುವ ತಾಪಮಾನದಿಂದ ಹೀಟ್ ಸ್ಟ್ರೋಕ್ ನಂತಹ ಗಂಭೀರ ಪ್ರಕರಣಗಳು ಸಂಭವಿಸದಂತೆ ತಡೆಯಲು ನಗರದ 162 ಇಂದಿರಾ ಕ್ಯಾಂಟಿನ್ ಗಳನ್ನು ಕೂಲಿಂಗ್ ಸೆಂಟರ್‌ಗಳಾಗಿ ಪರಿವರ್ತಿಸಲು ಕ್ರಮ ಕೈಗೊಂಡಿರುವ ಜಿಬಿಎ, ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ 417 ಕೇಂದ್ರಗಳನ್ನು ಆಶ್ರಯ ತಾಣಗಳನ್ನಾಗಿ ಗುರುತಿಸಿ ‘ಶಾಖ-ಆರೋಗ್ಯ ಶಿಷ್ಟಾಚಾರ’ವನ್ನು ಜಾರಿಗೆ ತಂದಿದೆ.
ತಾಪಮಾನ ಹೆಚ್ಚಾದಾಗ ಕೈಗೊಳ್ಳಬೇಕಾದ ಕ್ರಮಗಳ ಕುರಿತ ಕೈಪಿಡಿ
ಕೇಂದ್ರ ಕಚೇರಿಯಲ್ಲಿ ಸಿ40 ಸಿಟೀಸ್, ಸೆನ್ಸಿಂಗ್ ಲೋಕಲ್, ಹಸಿರು ದಳ ಹಾಗೂ ಸೆಂಟ್ ಜಾನ್ಸ್ ಮೆಡಿಕಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಸಂತು ಘೋಷ್ ಸಹಯೋಗದಲ್ಲಿ ತಾಪಮಾನ ಹೆಚ್ಚಾದಾಗ ಕೈಗೊಳ್ಳಬೇಕಾದ ಕ್ರಮಗಳ ಕುರಿತ ಹೊರತಂದಿರುವ ಶಿಷ್ಟಾಚಾರ ಕೈಪಿಡಿಯನ್ನು ಜಿಬಿಎ ಆಯುಕ್ತ ಮಹೇಶ್ವರರಾವ್ ಅವರಿಗೆ ನೀಡಿದರು.
ಈ ಶಿಷ್ಟಾಚಾರಗಳು ನೌಕರರು, ಆರೋಗ್ಯ ಸಿಬ್ಬಂದಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ತೀವ್ರ ಶಾಖದ ಅಲೆ ಉಂಟಾಗುವ ಮೊದಲು ಮತ್ತು ನಂತರ ಕೈಗೊಳ್ಳಬೇಕಾದ ನಿರ್ದಿಷ್ಟ ಹಾಗೂ ತುರ್ತು ಕ್ರಮಗಳ ಕುರಿತು ಮಾರ್ಗದರ್ಶನ ನೀಡಲಿವೆ.
ತಾಪಮಾನ 40 ಡಿಗ್ರಿ ಸೆಂಟಿಗ್ರೇಡ್ ತಲುಪುತ್ತಿದ್ದಂತೆ ನಗರದ 417 ಸ್ಥಳಗಳನ್ನು ಸಾರ್ವಜನಿಕರಿಗೆ ತಕ್ಷಣದ ಆಶ್ರಯ ತಾಣಗಳನ್ನಾಗಿ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ಇವುಗಳಲ್ಲಿ 162 ಇಂದಿರಾ ಕ್ಯಾಂಟೀನ್‌ಗಳು, 108 ನಮ್ಮ ಕ್ಲಿನಿಕ್‌ಗಳು, 140 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ 7 ರೆಫರಲ್ ಆಸ್ಪತ್ರೆಗಳೂ ಸೇರಿವೆ.
ತಾಪಮಾನ ಹೆಚ್ಚಳ ಸವಾಲಾಗಿದೆ
ಜಿಬಿಎ ಮುಖ್ಯ ಆಯುಕ್ತ ಮಹೇಶ್ವರರಾವ್ ಮಾತನಾಡಿ, ತಾಪಮಾನ ಹೆಚ್ಚಳ ಸಾರ್ವಜನಿಕ ಆರೋಗ್ಯ ಮತ್ತು ಆಡಳಿತಾತ್ಮಕವಾಗಿ ಪ್ರಮುಖ ಸವಾಲಾಗಿದೆ. ಬಿಕ್ಕಟ್ಟು ಎದುರಾದಾಗ ನಾಗರಿಕರಿಗೆ ಸ್ಪಂದಿಸುವುದು ಪಾಲಿಕೆಯ ಮುಖ್ಯ ಕರ್ತವ್ಯವಾಗಿದೆ. ಈ ಪ್ರೋಟೋಕಾಲ್‌ಗಳನ್ನು ನಗರದ ಎಲ್ಲ ಐದು ನಗರ ಪಾಲಿಕೆಗಳಲ್ಲಿ ಜಾರಿಗೊಳಿಸಲಾಗುತ್ತಿದ್ದು, ಬೆಂಗಳೂರು ಉತ್ತರ ನಗರ ಪಾಲಿಕೆಯಲ್ಲಿ ಕೈಗೊಂಡಿರುವ ಪ್ರಾಯೋಗಿಕ ಯೋಜನೆಗಳನ್ನು ಶೀಘ್ರದಲ್ಲೇ ನಗರದಾದ್ಯಂತ ವಿಸ್ತರಿಸಲಾಗುವುದು ಎಂದರು.
ತಾಪಮಾನ ನಿರ್ವಹಣೆಯ ನಗರದ ನೋಡಲ್ ಅಧಿಕಾರಿ ಹಾಗೂ ಉತ್ತರ ಪಾಲಿಕೆ ಆಯುಕ್ತ ಪೊಮ್ಮಲ ಸುನಿಲ್ ಕುಮಾರ್ ಮಾತನಾಡಿ, ವಿಪತ್ತು ನಿರ್ವಹಣಾ ಇಲಾಖೆಯ ಬೆಂಬಲದೊಂದಿಗೆ, ಉತ್ತರ ನಗರ ಪಾಲಿಕೆ ತೀವ್ರ ಶಾಖ ಪೀಡಿತ ಪ್ರದೇಶಗಳಲ್ಲಿ ನೂತನ ಹವಾಮಾನ ಮೇಲ್ವಿಚಾರಣಾ ಕೇಂದ್ರಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು. ಇವು ನಿಖರ ಮುನ್ಸೂಚನೆ ಹಾಗೂ ದತ್ತಾಂಶ ಸಂಗ್ರಹಣೆಗೆ ನೆರವಾಗಲಿವೆ ಎಂದು ಹೇಳಿದರು.
