ಶಿಗ್ಗಾಂವಿ: ಜಾನಪದವನ್ನು ಗಟ್ಟಿಗೊಳಿಸಲು ರಚನಾತ್ಮಕ ಕಾರ್ಯ ನಡೆಯಬೇಕಿದೆ. ಈ ಹೊಣೆಗಾರಿಕೆ ಪ್ರಾಧ್ಯಾಪಕರ ಹೆಗಲ ಮೇಲಿದೆ. ಈ ನಿಟ್ಟಿನಲ್ಲಿ ಸಂಶೋಧನೆ, ಯೋಜನೆಗಳನ್ನು ರೂಪಿಸಬೇಕಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ತಿಳಿಸಿದರು.ತಾಲೂಕಿನ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವದ್ಯಾಲಯದ ಮಲ್ಲಿಗೆ ದಂಡೆ ಸಭಾಂಗಣದಲ್ಲಿ ನಡೆದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ವಿಶ್ವವಿದ್ಯಾಲಯವನ್ನು ಶ್ರೇಷ್ಠ ಜ್ಞಾನ ಕೇಂದ್ರವಾಗಿಸಲು ಇನ್ನೂ ಹಲವು ಡಿಪ್ಲೊಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಆರಂಭಿಸಲಾಗುವುದು. ವಿದ್ಯಾರ್ಥಿನಿಲಯ, ಶಿಷ್ಯವೇತನ, ಮೂಲಸೌಕರ್ಯ ಅಭಿವೃದ್ಧಿಗೊಳಿಸುವ ಕಾರ್ಯ ವಿಶ್ವವಿದ್ಯಾಲಯದಿಂದ ನಡೆದಿದೆ ಎಂದರು.ಕುಲಸಚಿವ ಪ್ರೊ. ಸಿ.ಟಿ. ಗುರುಪ್ರಸಾದ್ ಮಾತನಾಡಿ, ವಿಶ್ವ ಜಾನಪದ ದಿನದಂದು ನಮ್ಮ ಸಾಧನೆ ಕುರಿತು ಅವಲೋಕನ ಮಾಡಿಕೊಳ್ಳಬೇಕಿದೆ. ಜಾನಪದ ವಿಶ್ವವಿದ್ಯಾಲಯ ಎಲ್ಲದಕ್ಕೂ ತಾಯಿಬೇರು ಇದ್ದಂತೆ. ಭವಿಷ್ಯದಲ್ಲಿ ಸಮಗ್ರ ಬೆಳವಣಿಗೆ ಜತೆಗೆ ಮುಂದಿನ ವರ್ಷ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶ್ವ ಜಾನಪದ ಸಮ್ಮೇಳನ ಏರ್ಪಡಿಸುವ ಸಂಕಲ್ಪ ಮಾಡಲಾಗಿದೆ ಎಂದರು.ಮೌಲ್ಯಮಾಪನ ಕುಲಸಚಿವ ಶಿವಶಂಕರ್ ಮಾತನಾಡಿದರು. ಜೋಡಿ ಬಸವೇಶ್ವರ ಕಲಾತಂಡ, ಕಲಾವಿದರಾದ ಶರೀಫ ಮಾಕಪ್ಪನವರ, ವಿಜಯಲಕ್ಷ್ಮಿ ಗೇಟಿಯವರ, ಆನಂದಪ್ಪ ಜೋಗಿ ಅವರ ಜಾನಪದ ಗೀತ ಗಾಯನ ಗಮನ ಸೆಳೆಯಿತು.ಸಹಾಯಕ ಕುಲಸಚಿವ ಶಹಜಾನ ಮುದಕವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಿರೇಗೌಡ ಅರಳಿಹಳ್ಳಿ, ವೆಂಕನಗೌಡ ಪಾಟೀಲ, ಪ್ರೊ. ಹರಿಲಾಲ್ ಪವಾರ, ರಾಜೇಂದ್ರಪ್ರಸಾದ್, ಅರುಣ್ ಬಾಬು, ಮಲ್ಲಿಕಾರ್ಜುನ ಮಾನ್ಪಡೆ, ಬಸವರಾಜು ಎಸ್.ಜಿ., ಹುಲಗಪ್ಪ ನಾಯಕರ, ರಜಿಯಾ ನದಾಪ್, ಸುವರ್ಣ, ಅಭಿಲಾಷ, ಅನ್ನಪೂರ್ಣ ಲಿಂಬಿಕಾಯಿ ಇದ್ದರು.ಯುನೆಸ್ಕೊ ದಿನ ನಿಗದಿ ಮಾಡಲಿ: ಕಾರ್ಯಕ್ರಮ ಉದ್ಘಾಟಿಸಿದ ವಿಶ್ರಾಂತ ಕುಲಪತಿ ಡಿ.ಬಿ. ನಾಯಕ ಮಾತನಾಡಿ, ಶ್ರೀಮಂತ ಸಂಸ್ಕೃತಿ, ಪರಂಪರೆ ಹೊಂದಿರುವ ಜಾನಪದವೇ ಎಲ್ಲದಕ್ಕೂ ಮೂಲಾಧಾರ. ಎಲ್ಲದಕ್ಕೂ ಒಂದು ದಿನ ಘೋಷಿಸಿ ಆಚರಿಸುವ ಯುನೆಸ್ಕೊ, ಜಾನಪದ ಕಲೆಗೆ ದಿನ ನಿಗದಿ ಮಾಡದಿರುವುದು ಬೇಸರದ ಸಂಗತಿ ಎಂದರು.