ಸಹಕಾರಿ ಸಂಸ್ಥೆಯವರು ಬ್ಯಾಂಕ್‌ ಮೂಲಕ ವ್ಯವಹರಿಸಲಿ: ಜಿ. ನಂಜನಗೌಡ

KannadaprabhaNewsNetwork |  
Published : Jul 28, 2025, 12:32 AM IST
ಕುಷ್ಟಗಿ ಪಟ್ಟಣದ ಎನ್‌ಸಿಎಚ್‌ ಕಲ್ಯಾಣ ಮಂಟಪದಲ್ಲಿ ನಡೆದ ಕೊಪ್ಪಳ ಜಿಲ್ಲೆಯ ಸೌಹಾರ್ದ ಸಹಕಾರ ಕ್ಷೇತ್ರದ ಸಂಪರ್ಕ ಸಭೆಯನ್ನು ರಾಜ್ಯ ಘಟಕದ ಅಧ್ಯಕ್ಷ ಜಿ. ನಂಜನಗೌಡ ಉದ್ಘಾಟಿಸಿದರು. | Kannada Prabha

ಸಾರಾಂಶ

ಕುಷ್ಟಗಿ ಪಟ್ಟಣದ ಎನ್‌ಸಿಎಚ್‌ ಕಲ್ಯಾಣ ಮಂಟಪದಲ್ಲಿ ಕೊಪ್ಪಳ ಜಿಲ್ಲೆಯ ಸೌಹಾರ್ದ ಸಹಕಾರ ಕ್ಷೇತ್ರದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ನಿರ್ದೇಶಕರ ಸಂಪರ್ಕ ಸಭೆ ನಡೆಯಿತು.

ಕುಷ್ಟಗಿ: ಸಹಕಾರಿ ಸಂಸ್ಥೆಯವರು ನಗದು ವ್ಯವಹಾರ ಬದಲಿಗೆ ಬ್ಯಾಂಕಿನ ಮೂಲಕ ವ್ಯವಹಾರ ಮಾಡಬೇಕು ಎಂದು ಸೌಹಾರ್ದ ಸಂಯುಕ್ತ ಸಹಕಾರ ನಿಯಮಿತದ ರಾಜ್ಯ ಘಟಕದ ಅಧ್ಯಕ್ಷ ಜಿ. ನಂಜನಗೌಡ ಸಲಹೆ ನೀಡಿದ್ದಾರೆ.

ಪಟ್ಟಣದ ಎನ್‌ಸಿಎಚ್‌ ಕಲ್ಯಾಣ ಮಂಟಪದಲ್ಲಿ ಇತ್ತೀಚಿಗೆ ನಡೆದ ಕೊಪ್ಪಳ ಜಿಲ್ಲೆಯ ಸೌಹಾರ್ದ ಸಹಕಾರ ಕ್ಷೇತ್ರದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ನಿರ್ದೇಶಕರ ಸಂಪರ್ಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು

ಸಾಲ ಸೌಲಭ್ಯ ನೀಡುವಾಗ ಸಹಕಾರಿ ಸಂಸ್ಥೆಯವರು ನಗದು ವ್ಯವಹಾರ ಮಾಡದೆ ಬ್ಯಾಂಕಿನ ಮೂಲಕ ವ್ಯವಹಾರ ಮಾಡಬೇಕು, ಇಲ್ಲವಾದರೆ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಸಹಕಾರ ಸಂಸ್ಥೆಯಲ್ಲಿ ಕೆಲಸ ಮಾಡುವವರು ಕ್ಷೇತ್ರಕ್ಕೆ ಕಳಂಕ ಬಾರದಂತೆ ವಿಶ್ವಾಸಾರ್ಹತೆ, ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ಅಳವಡಿಸಿಕೊಂಡು ಕೆಲಸ ಮಾಡಬೇಕು ಎಂದು ಹೇಳಿದರು.

ಸೌಹಾರ್ದ ಸಹಕಾರಿ ಸದಸ್ಯರ ಠೇವಣಿ ಹಣಕ್ಕೆ ಮೋಸ ಆಗದಂತೆ ನೋಡಿಕೊಳ್ಳಬೇಕು. ಸೌಹಾರ್ದ ಕಾಯ್ದೆ ವಿರುದ್ಧವಾಗಿ ಯಾವುದೇ ಸಂಸ್ಥೆ ನಡೆಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಆರ್ಥಿಕ ಶಿಸ್ತು ಕಾಪಾಡಿಕೊಂಡು ಹೋಗುವ ಮೂಲಕ ಬಡವರ ಏಳಿಗೆ ಹೊಂದುವುದು ಸೌಹಾರ್ದ ಸಹಕಾರಿಯ ಉದ್ದೇಶ ಎಂದರು.

ಸೌಹಾರ್ದ ಸಹಕಾರಿ ಸಂಸ್ಥೆ ತಮ್ಮ ಕಾರ್ಯ ಕ್ಷೇತ್ರದಲ್ಲಿ ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಯಾರಿಗಾದರೂ ಸಾಲ ಕೊಡುವಾಗ ಸಂಸ್ಥೆ ಅಧ್ಯಕ್ಷರು, ನಿರ್ದೇಶಕರು ಜಾಗರೂಕರಾಗಿರಬೇಕು. ಸಂಸ್ಥೆಯ ಎಲ್ಲ ಆಸ್ತಿಗಳ ಬಗ್ಗೆ ಪೂರ್ಣ ಮಾಹಿತಿ ಹೊಂದಿರಬೇಕು. ಸಂಸ್ಥೆಯ ಬೆಳವಣಿಗೆ-ನಿರ್ವಹಣೆ ಬಗ್ಗೆ ಸಂಪೂರ್ಣ ಜ್ಞಾನ ಹೊಂದಿರಬೇಕು ಎಂದರು.

ನಿರ್ದೇಶಕ ಜಿ. ಶ್ರೀಧರ ಕೆಸರಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ಸೌಹಾರ್ದ ಸಹಕಾರಿ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಇದರಿಂದ ಜನಸಾಮಾನ್ಯರಿಗೆ ಲಾಭವಾಗುತ್ತಿದೆ ಎಂದರು. ಸಹಕಾರ ಕ್ಷೇತ್ರದಲ್ಲಿ ಪರಸ್ಪರ ಸಹಕಾರ, ಪ್ರಾಮಾಣಿಕತೆ ಇರುವುದು ಅವಶ್ಯ, ಸಂಸ್ಥೆಗಳೂ ಬೆಳೆಯಬೇಕು ಮತ್ತು ಸದಸ್ಯರ ಅಭಿವೃದ್ಧಿಗೂ ಕಾಳಜಿ ವಹಿಸಬೇಕು ಎಂದರು.

ಈ ವೇಳೆ ಪ್ರಾಂತೀಯ ವ್ಯವಸ್ಥಾಪಕ ಸೂರ್ಯಕಾಂತ, ಕೊಪ್ಪಳ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಕಡ್ಡಿಪುಡಿ, ಮಾಜಿ ಅಧ್ಯಕ್ಷ ನಾಗಲಿಂಗಪ್ಪ ಪತ್ತಾರ, ಮಹಾಲಿಂಗಪ್ಪ ದೋಟಿಹಾಳ, ಬಸವರಾಜಪಡಿ, ಶಿವಶಂಕರಗೌಡ, ವಿರೂಪಾಪಕ್ಷಪ್ಪ, ದೇವೇಂದ್ರಪ್ಪ ಬಳೂಟಗಿ, ಬಸವರಾಜ ಎಂ., ವಿಶ್ವನಾಥ ಕನ್ನೂರು, ಓಂಕಾರ ಧರಣಿ ಇದ್ದರು.

PREV

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್