ಸಹಕಾರ ಸಂಘಗಳು ಭೇದ ಮರೆತು ಕಾರ್ಯನಿರ್ವಹಿಸಲಿ

KannadaprabhaNewsNetwork |  
Published : Sep 22, 2025, 01:00 AM IST
ಶಿವಮೊಗ್ಗದ ದ್ವಾರಕಾ ಕನ್ವೆಷನ್‌ ಹಾಲ್‌ನಲ್ಲಿ ಭಾನುವಾರ ರಾಜ್ಯ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಮತ್ತು ರಾಜ್ಯ ಸರ್ಕಾರಿ ನೌಕರರ ಸೌಹಾರ್ಧ ಸಹಕಾರ ಸಂಘದ ಸಗಯೋಗದಲ್ಲಿ ಏರ್ಪಡಿಸಿದ್ದ ಸರ್ವ ಸದಸ್ಯರ ಮಹಾಸಭೆಯನ್ನು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷ ಡಾ.ಆರ್.ಎಂ.ಮಂಜುನಾಥಗೌಡ ಉದ್ಘಾಟಿಸಿದರು. | Kannada Prabha

ಸಾರಾಂಶ

ಸರ್ಕಾರದ ಯಾವುದೇ ನೆರವಿಲ್ಲದೆ, ಸರ್ಕಾರಗಳು ಮಾಡದಿರುವ ಸಮಾಜಮುಖಿ ಕಾರ್ಯವನ್ನು ಸಹಕಾರ ಸಂಘಗಳು ಮಾಡುತ್ತಿರುವುದು ಮಾದರಿ ಕಾರ್ಯಗಳಲ್ಲೊಂದಾಗಿದೆ ಎಂದು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷ ಡಾ.ಆರ್.ಎಂ.ಮಂಜುನಾಥಗೌಡ ಹೇಳಿದರು.

ಶಿವಮೊಗ್ಗ: ಸರ್ಕಾರದ ಯಾವುದೇ ನೆರವಿಲ್ಲದೆ, ಸರ್ಕಾರಗಳು ಮಾಡದಿರುವ ಸಮಾಜಮುಖಿ ಕಾರ್ಯವನ್ನು ಸಹಕಾರ ಸಂಘಗಳು ಮಾಡುತ್ತಿರುವುದು ಮಾದರಿ ಕಾರ್ಯಗಳಲ್ಲೊಂದಾಗಿದೆ ಎಂದು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷ ಡಾ.ಆರ್.ಎಂ.ಮಂಜುನಾಥಗೌಡ ಹೇಳಿದರು.ನಗರದ ದ್ವಾರಕಾ ಕನ್ವೆಷನ್‌ ಹಾಲ್‌ನಲ್ಲಿ ಭಾನುವಾರ ರಾಜ್ಯ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಮತ್ತು ರಾಜ್ಯ ಸರ್ಕಾರಿ ನೌಕರರ ಸೌಹಾರ್ದ ಸಹಕಾರ ಸಂಘದ ಸಹಯೋಗದಲ್ಲಿ ಏರ್ಪಡಿಸಿದ್ದ ಸರ್ವಸದಸ್ಯರ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿ, ಯಾವುದೇ ಸಹಕಾರ ಸಂಘಗಳು ಜಾತಿ, ಪಕ್ಷ ಮತ್ತು ಲಿಂಗಭೇದ ಮರೆತು ಕಾರ್ಯನಿರ್ವಹಿಸುವಂತಾಗಬೇಕು. ಯಾವುದೇ ಸಹಕಾರಿ ಸಂಸ್ಥೆ ನಾಯಕನ ವ್ಯಕ್ತಿತ್ವದ ಮೇಲೆ ಅವಲಂಬಿತವಾಗಿರುತ್ತವೆ ಎಂದರು.ನಗರದ ಬೆಳವಣಿಗೆಯಲ್ಲಿ ಇಂತಹ ಸಹಕಾರ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ. ಸಂಘಗಳಲ್ಲಿ ಎಲ್ಲರಿಗೂ ಸರಳವಾಗಿ, ಸುಲಭವಾಗಿ ಸಾಲಸೌಲಭ್ಯಗಳು ದೊರೆಯುವಂತಾಗಬೇಕು. ಆಗ ನಿಜವಾದ ಸಹಕಾರದ ಪದಕ್ಕೆ ಅರ್ಥ ಬರಲಿದೆ. ಇದರಿಂದಾಗಿ ಅರ್ಹರಿಗೆ ಸಾಲಸೌಲಭ್ಯ ದೊರೆಯುವುದು ಮಾತ್ರವಲ್ಲ, ಪರೋಕ್ಷವಾಗಿ ಉದ್ಯೋಗಸೃಷ್ಟಿಯಾಗಲಿದೆ. ಸಾಲ ಪಡೆದವರು ಸಕಾಲದಲ್ಲಿ ಸಾಲ ಮರುಪಾವತಿ ಮಾಡುವ ಮೂಲಕ ಇನ್ನೊಬ್ಬರ ಅವಶ್ಯಕತೆಗಳಿಗೆ ಸಹಕರಿಸಬೇಕು. ಸರ್ಕಾರದ ಹಸ್ತಕ್ಷೇಪವಿಲ್ಲದಿದ್ದಲ್ಲಿ ಸಹಕಾರಿ ಸಂಘಗಳು ಇನ್ನಷ್ಟು ರಚನಾತ್ಮಕವಾಗಿ ಕಾರ್ಯನಿರ್ವಹಿಸಲಿವೆ ಎಂದು ಹೇಳಿದರು. ಸೌಹಾರ್ದ ಸಹಕಾರ ಸಂಘದಲ್ಲಿ 3600 ಮತ್ತು ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ 4800ಕ್ಕೂ ಹೆಚ್ಚಿನ ಜನ ಸದಸ್ಯತ್ವ ಪಡೆದಿರುವುದು ಹಾಗೂ ಈವರಗೆ ಗೃಹನಿರ್ಮಾಣ ಸಹಕಾರ ಸಂಘದ ವತಿಯಿಂದ ಸುಮಾರು 175 ಎಕರೆ ಪ್ರದೇಶದಲ್ಲಿ ಬಡಾವಣೆ ನಿರ್ಮಿಸಿ, ನಿವೇಶನ ವಿತರಿಸಿರುವುದು ಅತ್ಯಂತ ಪ್ರಶಂಸನಾರ್ಹ ಸಂಗತಿಯಾಗಿದೆ. ಇದರಿಂದಾಗಿ ಪ್ರತಿ ವ್ಯಕ್ತಿಯೂ ಚಿಕ್ಕದಾದರೂ ತನ್ನ ಕನಸಿನ ಮನೆಯನ್ನು ನಿರ್ಮಿಸಿಕೊಂಡು ನೆಮ್ಮದಿಯ ಜೀವನ ನಡೆಸಬಹುದಾಗಿದೆ ಎಂದರು.ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದ ಸಹಕಾರಿ ಕ್ಷೇತ್ರದಲ್ಲಿ ನೌಕರರ ಸಂಘದಿಂದ ಸ್ಥಾಪಿಸಲಾಗಿರುವ ಎರಡೂ ಸಂಘಗಳು “ಎ” ಶ್ರೇಣಿಯಲ್ಲಿ ಗುರುತಿಸಿಕೊಳ್ಳುವ ಸ್ಥಾನಮಾನ ಹೊಂದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.11 ವರ್ಷಗಳ ಅವಧಿಯಲ್ಲಿ ಸಂಘಟನೆಗೆ ಸಣ್ಣ ಕಪ್ಪುಚುಕ್ಕೆಯೂ ಬಾರದಂತೆ ನಡೆಸಿಕೊಂಡು ಬರಲಾಗಿದೆ. ಪ್ರಸಕ್ತ ಅವಧಿಯಲ್ಲಿ ಸಂಘವು ಸುಮಾರು 1.50 ಕೋಟಿ ರು. ಲಾಭ ಗಳಿಸಿರುವುದು ಸಂತಸದ ವಿಷಯವಾಗಿದೆ. ಇಂತಹ ಸಂಘಟನೆಯನ್ನು ಆರಂಭದ ಹಂತದಲ್ಲಿ ರಾಜ್ಯದ ನೆರೆಯ ಜಿಲ್ಲೆಗಳಿಗೆ ನಂತರ ರಾಜ್ಯದ ಉದ್ದಗಲಕ್ಕೆ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.ಗೃಹ ನಿರ್ಮಾಣ ಸಹಕಾರ ಸಂಘದ ವತಿಯಿಂದ ಈವರೆಗೆ ಸುಮಾರು 2500ಕ್ಕೂ ಹೆಚ್ಚಿನ ನೌಕರರಿಗೆ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ನಿವೇಶನಗಳನ್ನು ವಿತರಿಸಲಾಗಿದೆ. ಅಲ್ಲದೇ ಈಗಾಗಲೇ 110 ಎಕರೆ ಭೂಪ್ರದೇಶದಲ್ಲಿ ಗುಣಮಟ್ಟದ ಕಾಮಗಾರಿಗಳೊಂದಿಗೆ ಕಾನೂನು ಬದ್ಧವಾಗಿ ಸೃಜಿಸಲಾಗಿರುವ 1500 ನಿವೇಶನಗಳನ್ನು ಶೀಘ್ರದಲ್ಲಿ ವಿತರಿಸಲು ಕ್ರಮಕೈಗೊಳ್ಳಲಾಗುವುದು. ಸಂಘಟನೆಯು ನೌಕರರ ನೆಮ್ಮದಿಯ ಬದುಕಿಗೆ ಆಸರೆಯಾಗಿದೆ ಎಂದು ತಿಳಿಸಿದರು. ಇದೇ ವೇಳೆ ನೌಕರರ ಪ್ರತಿಭಾವಂತ ಮಕ್ಕಳಿಗೆ ನಗದು ಪುರಸ್ಕಾರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ನಂತರ ಷೇರುದಾರರ ಉಪಸ್ಥಿತಿಯಲ್ಲಿ ಸಂಘದ ಮಹಾಸಭೆಯಲ್ಲಿ ಅನೇಕ ವಿಷಯಗಳ ಕುರಿತು ಚರ್ಚಿಸಿ ಅನೇಕ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು.ಸಭೆಯಲ್ಲಿ ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ಸೂಡಾ ಅಧ್ಯಕ್ಷ ಸುಂದರೇಶ್, ಮಹಾ ನಗರಪಾಲಿಕೆ ಆಯುಕ್ತ ಮಾಯಣ್ಣಗೌಡ, ಸೂಡಾ ಆಯುಕ್ತ ವಿಶ್ವನಾಥ ಮುದ್ದಜ್ಜಿ, ಸಹಕಾರ ಸಂಘಗಳ ಉಪನಿಬಂಧಕ ನಾಗಭೂಷಣ ಚಂದ್ರಶೇಖರ ಕಲ್ಮನೆ, ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್‌ ಕುಮಾರ್, ಆರ್.ಪಾಪಣ್ಣ, ಎನ್.ಎಂ.ರಂಗನಾಥ್, ನರಸಿಂಹಮೂರ್ತಿ, ದಿನೇಶ್, ಪ್ರಸನ್ನ, ಸುರೇಶ್, ಕೃಷ್ಣಮೂರ್ತಿ, ಸಿದ್ಧಬಸಪ್ಪ ಸೇರಿದಂತೆ ಅವಳಿ ಸಂಘಗಳ ಪದಾಧಿಕಾರಿಗಳು, ನಿರ್ದೇಶಕರು, ಷೇರುದಾರರು ಉಪಸ್ಥಿತರಿದ್ದರು.

PREV

Recommended Stories

ಸಿಬ್ಬಂದಿ ಕೊರತೆ ಬೆಂಗಳೂರು ನಗರದಲ್ಲಿ ಜಾತಿ ಗಣತಿ ವಿಳಂಬ
ಸಮೀಕ್ಷೆ ಹೆಸರಿನಲ್ಲಿ ಹಿಂದೂ ಸಮಾಜ ಒಡೆಯುವ ಹುನ್ನಾರ