ಬಳ್ಳಾರಿ: ಹೊಸ ತಲೆಮಾರಿನವರಲ್ಲಿ ಸೃಜನಾತ್ಮಕ ಪ್ರತಿಭೆ ಅರಳಿಸುವ, ಹೊಸ ಭರವಸೆ ತುಂಬುವ ಕೆಲಸಗಳು ಹೆಚ್ಚೆಚ್ಚು ನಡೆಯಬೇಕಾದ ಅಗತ್ಯವಿದೆ ಎಂದು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಹೊನ್ನೂರಾಲಿ ಅಭಿಪ್ರಾಯಪಟ್ಟರು.
ಭಾವಪೂರ್ಣ ಅಭಿನಯದಿಂದ ಚಲನಚಿತ್ರ ರಂಗದಲ್ಲಿ ಯಾರು ಗಟ್ಟಿಯಾಗಿ ನೆಲೆನಿಂತಿದ್ದಾರೋ ಅವರೆಲ್ಲರೂ ರಂಗಭೂಮಿಯ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಸಂಕಟ, ವಿಷಾದ ಮತ್ತು ಹಾಸ್ಯದ ಭಾವಗಳನ್ನು ಅವರು ಮಾತ್ರ ಕಲಾತ್ಮಕವಾಗಿ ಅಭಿನಯಿಸಿ ಹೊಸ ಹೊಳಪು ಕೊಡಲು ಸಾಧ್ಯ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಕನ್ನಡ ಉಪನ್ಯಾಸಕ ಹಾಗೂ ನಾಟಕ ವಿಭಾಗದ ಮುಖ್ಯಸ್ಥ ದಸ್ತಗೀರಸಾಬ್ ದಿನ್ನಿ ಮಾತನಾಡಿ, ಪ್ರತಿಯೊಬ್ಬರಲ್ಲೂ ಒಬ್ಬ ಕಲಾವಿದನಿದ್ದಾನೆ. ಸಂದರ್ಭಕ್ಕನುಗುಣವಾಗಿ ಆತ ಹೊರಗಡೆ ಕಾಣಿಸಿಕೊಳ್ಳುತ್ತಾನೆ. ಸುಳ್ಳನ್ನು ಸತ್ಯ ಎಂದು ಸತ್ಯವೇ ಅಚ್ಚರಿಯಾಗುವಂತೆ ಹೇಳುವ ಜನರನ್ನು ನಿತ್ಯ ಬದುಕಿನ ಜಂಜಾಟದಲ್ಲಿ ಕಾಣುತ್ತೇವೆ ಎಂದರು.ರಂಗಭೂಮಿಗೆ ಬಹುದೊಡ್ಡ ಶಕ್ತಿ ಇದೆ. ನಾಟಕದ ಮೂಲಕ ನಾವು ನಿಜವಾದ ಮನುಷ್ಯರಾಗಲು ಸಾಧ್ಯ. ಸಮರ್ಥ ಹಾಗೂ ಪ್ರಭಾವಿ ಮಾಧ್ಯಮವಾದ ರಂಗಭೂಮಿಯ ತರಬೇತಿಯನ್ನು ಪಡೆಯುವ ಮೂಲಕ ವಿದ್ಯಾರ್ಥಿಗಳು ರಂಗಭೂಮಿ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದರು.
ನಾಟಕ ವಿಭಾಗದ ಅತಿಥಿ ಉಪನ್ಯಾಸಕ ವಿಷ್ಣು ಹಡಪದ, ನೇತಿ ರಘುರಾಮ್ ಹಾಗೂ ನಿರ್ದೇಶಕ ಚಂದ್ರಶೇಖರ್ ಉಪಸ್ಥಿತರಿದ್ದರು.