ತಳಮಟ್ಟದಿಂದಲೇ ಎಚ್‌ಐವಿ ನಿರ್ಮೂಲನೆಗೆ ಪಣತೊಡಬೇಕಿದೆ: ರಾಜೇಶ್ ಹೊಸಮನೆ

KannadaprabhaNewsNetwork |  
Published : Dec 18, 2024, 12:45 AM IST
ಬಳ್ಳಾರಿಯಲ್ಲಿ ಅಖಂಡ ಜಿಲ್ಲೆಯ ಧಮನಿತ ಮಹಿಳೆಯರಿಗೆ ಏರ್ಪಡಿಸಿದ್ದ ಹೆಚ್‌ಐವಿ ಮತ್ತು ಏಡ್ಸ್ ಕುರಿತ ವಿಶೇಷ ಜಾಗೃತಿ ಕಾರ್ಯಕ್ರಮಕ್ಕೆ ಸಿವಿಲ್ ನ್ಯಾಯಾಧೀಶ ರಾಜೇಶ್.ಎನ್ ಹೊಸಮನೆ ಅವರು ಚಾಲನೆ ನೀಡಿದರು.  | Kannada Prabha

ಸಾರಾಂಶ

ಕಳೆದ 40 ವರ್ಷಗಳಿಂದ ಭಾರತ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಕಾಡುತ್ತಿರುವ ಎಚ್‌ಐವಿ-ಏಡ್ಸ್ ನಿಯಂತ್ರಣಕ್ಕೆ ಸರ್ಕಾರದೊಂದಿಗೆ ಸಂಘ-ಸಂಸ್ಥೆಗಳು ಭಾಗಿಯಾಗುವ ಮೂಲಕ ತಳಮಟ್ಟದಿಂದಲೇ ಎಚ್‌ಐವಿ ನಿರ್ಮೂಲನೆಗೆ ಪಣ ತೊಡಬೇಕಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜೇಶ್ ಎನ್. ಹೊಸಮನೆ ಹೇಳಿದರು.

ಬಳ್ಳಾರಿ: ಸಮುದಾಯದಲ್ಲಿ ಎಚ್‌ಐವಿ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜೇಶ್ ಎನ್. ಹೊಸಮನೆ ಹೇಳಿದರು.

ವಿಮುಕ್ತಿ ಏಡ್ಸ್ ತಡೆಗಟ್ಟುವ ಮಹಿಳಾ ಸಂಘ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಇವರ ಸಂಯುಕ್ತಾಶ್ರಯದಲ್ಲಿ ನಗರದ ಬಿಡಿಎಎ ಪುಟ್ಬಾಲ್ ಸಭಾಂಗಣದಲ್ಲಿ ಅಖಂಡ ಜಿಲ್ಲೆಯ ದಮನಿತ ಮಹಿಳೆಯರಿಗೆ ಏರ್ಪಡಿಸಿದ್ದ ಎಚ್‌ಐವಿ ಮತ್ತು ಏಡ್ಸ್ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ 40 ವರ್ಷಗಳಿಂದ ಭಾರತ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಕಾಡುತ್ತಿರುವ ಎಚ್‌ಐವಿ-ಏಡ್ಸ್ ನಿಯಂತ್ರಣಕ್ಕೆ ಸರ್ಕಾರದೊಂದಿಗೆ ಸಂಘ-ಸಂಸ್ಥೆಗಳು ಭಾಗಿಯಾಗುವ ಮೂಲಕ ತಳಮಟ್ಟದಿಂದಲೇ ಎಚ್‌ಐವಿ ನಿರ್ಮೂಲನೆಗೆ ಪಣ ತೊಡಬೇಕಿದೆ ಎಂದರು.

ಜೀವನದ ಆಕಸ್ಮಿಕ ಘಟನೆಗಳಿಂದ ಅಥವಾ ಎಚ್‌ಐವಿ ಹರಡುವ ಮಾರ್ಗಗಳಲ್ಲಿ ನಿರ್ಲಕ್ಷ್ಯ ವಹಿಸಿದರೆ ಯಾರಿಗಾದರೂ ಎಚ್‌ಐವಿ ಹರಡುವ ಸಾಧ್ಯತೆಗಳಿವೆ. ಒಮ್ಮೆ ಎಚ್‌ಐವಿ ವೈರಸ್ ದೇಹದಲ್ಲಿ ಕಂಡುಬಂದರೆ ಜೀವನ ಪರ್ಯಂತ ಎಚ್‌ಐವಿ ಬಾಧಿತರಾಗಿ ಇರುವ ಸನ್ನಿವೇಶ ಉಂಟಾಗುವುದರಿಂದ ಸಮುದಾಯದಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಮೂಲಕ ಎಚ್‌ಐವಿ ಮುಕ್ತ ಸಮಾಜ ನಿರ್ಮಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಯಲ್ಲಾ ರಮೇಶ್ ಬಾಬು, ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ಎಚ್‌ಐವಿ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ವಿಮುಕ್ತಿ ಸಂಘವು ನಿರಂತರವಾಗಿ ಜಾಗೃತಿ ನೀಡುವ ಜತೆಗೆ ಸರಿಯಾದ ಸಮಯದಲ್ಲಿ ದಮನಿತ ಮಹಿಳೆಯರ ಆರೋಗ್ಯ ತಪಾಸಣೆ ಕೈಗೊಳ್ಳುವುದು,

ಸರ್ಕಾರದ ವಸತಿ ಯೋಜನೆಗಳಲ್ಲಿ ಮನೆ ಒದಗಿಸುವುದು, ಆರ್ಥಿಕ ಸೌಲಭ್ಯಗಳನ್ನು ಒದಗಿಸಲು ವಿವಿಧ ಇಲಾಖೆಗಳ ಸಹಾಯಧನಗಳ ಯೋಜನೆಗಳ ಪರಿಚಯಿಸುವುದು, ಪಡಿತರ ಚೀಟಿಗಳ ಒದಗಿಸುವಿಕೆಯಂತಹ ಸಾಮಾಜಿಕ ಸೇವಾ ಸೌಲಭ್ಯಗಳನ್ನು ನೀಡುವ ಜತೆಗೆ ಎಚ್‌ಐವಿ ಕುರಿತು ಕಳಂಕ, ತಾರತಮ್ಯಗಳನ್ನು ದೂರ ಮಾಡುವ ದಿಶೆಯಲ್ಲಿ ಸಮುದಾಯದಲ್ಲಿ ಜಾಗೃತಿ ನೀಡುತ್ತಿರುವುದು ಶ್ಲಾಘನೀಯ. ಪ್ರಸ್ತುತ ಸಂಘದ ಸದಸ್ಯರ ಸಂಖ್ಯೆ 3166ಕ್ಕೆ ತಲುಪಿರುವುದೇ ಸಾಕ್ಷಿಯಾಗಿದೆ ಎಂದರು.

ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ. ಇಂದ್ರಾಣಿ ವಿ., ವಿವಿಯ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ. ಗೌರಿ ಎಂ.ಎಂ., ವಿಮುಕ್ತಿ ಸಂಘದ ದುರುಗಮ್ಮ, ಡಾ. ರಾಘವೇಂದ್ರ, ಡಾ. ದಿನೇಶ್ ಗುಡಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್. ದಾಸಪ್ಪನವರ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ