ಗುರು ಮಾರ್ಗದಲ್ಲಿ ಭಕ್ತರು ಸಾಗಲಿ: ಸಂಸದ ಬಸವರಾಜ ಬೊಮ್ಮಾಯಿ

KannadaprabhaNewsNetwork | Published : Feb 21, 2025 11:48 PM

ಸಾರಾಂಶ

ನಮ್ಮ ಕಾಯಕದಿಂದ ದೊಡ್ಡವರಾಗುತ್ತೇವೆ. ಸಂಸ್ಕಾರ ಮತ್ತು ಸಂಸ್ಕೃತಿ ಬೆಳೆಯಲು ಮಠದ ಅವಶ್ಯಕತೆ ಇದೆ. ಗುರು ನಡೆದಂತೆ ಭಕ್ತರು ಪಾಲನೆ ಮಾಡಬೇಕು.

ರಾಣಿಬೆನ್ನೂರು: ಸಂಸ್ಕಾರ, ಸಂಸ್ಕೃತಿ ಬಹಳ ಮುಖ್ಯ. ಮಠ- ಮಂದಿರಗಳಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರ ಇರುವ ದೇಶ ಸಮೃದ್ಧಿಯಾಗಿರುತ್ತದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.ತಾಲೂಕಿನ ಕಾಕೋಳ ಗ್ರಾಮದಲ್ಲಿ ಗುರುವಾರ ಪ್ರಭುಸ್ವಾಮಿ ಮಠದ ಗುರುಶರಣ ಬಸವೇಶ್ವರರ 156ನೇ ಪುಣ್ಯಾರಾಧನೆ, ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ಅಂಗವಾಗಿ ಏರ್ಪಡಿಸಿದ್ದ ಧರ್ಮಸಭೆ ಉದ್ಘಾಟಿಸಿ ಮಾತನಾಡಿ, ಮಾನವ ಧರ್ಮ ಮುಖ್ಯವಾಗಿದ್ದು, ಆದರ್ಶ ಜೀವನ ನಡೆಸಿದಾಗ ಮಾತ್ರ ಬದುಕು ಸುಂದರವಾಗುತ್ತದೆ ಎಂದರು.

ನಮ್ಮ ಕಾಯಕದಿಂದ ದೊಡ್ಡವರಾಗುತ್ತೇವೆ. ಸಂಸ್ಕಾರ ಮತ್ತು ಸಂಸ್ಕೃತಿ ಬೆಳೆಯಲು ಮಠದ ಅವಶ್ಯಕತೆ ಇದೆ. ಗುರು ನಡೆದಂತೆ ಭಕ್ತರು ಪಾಲನೆ ಮಾಡಬೇಕು. ಉತ್ಕೃಷ್ಟವಾದ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು. ಗುರು ಹೇಳಿದ ನೀತಿಯನ್ನು ಭಕ್ತರು ಪಾಲನೆ ಮಾಡಿದಾಗ ಮಾತ್ರ ಭಕ್ತರ ಬಾಳು ಬೆಳಗುತ್ತದೆ. ಗ್ರಾಮದ ಮಠಕ್ಕೆ ಗುರುವಿನ ಅವಶ್ಯಕತೆಯಿದೆ. ಅದಷ್ಟು ಬೇಗ ಗ್ರಾಮಸ್ಥರು ಗುರುವಿನ ಕರೆದುಕೊಂಡು ಬರಲಿ. ಮಠದಲ್ಲಿ ಸಭಾಭವನ ನಿರ್ಮಾಣಕ್ಕೆ ನನ್ನ ಅನುದಾನ ನೀಡುತ್ತೇನೆ ಎಂದರು. ವಿಜಯಪುರ ಕವಲಗಿ ಶಿವಯೋಗಿ ಸಿದ್ದರಾಮೇಶ್ವರ ಮಹಾಸಂಸ್ಥಾನ ಮಠದ ಡಾ. ಅಭಿನವ ಸಿದ್ದರಾಮೇಶ್ವರ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ರಾಜಶೇಖರಗೌಡ ಪಾಟೀಲ, ಜಿಪಂ ಮಾಜಿ ಸದಸ್ಯೆ ಲಲಿತಾ ಜಾಧವ, ವೀರೇಶ ಬಳಿಗಾರ, ಮಾಲತೇಶ ಜಾಧವ, ಕೆಂಪಣ್ಣ ಕುದರಿಹಾಳ, ಮಾಲತೇಶ ಕೊಂಬಳಿ ಮತ್ತಿತರರಿದ್ದರು. ಇದಕ್ಕೂ ಮುಂಚೆ ಗುರು ಶರಣ ಬಸವೇಶ್ವರರ ಭಾವಚಿತ್ರದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗಿತು.ಇ ಖಾತಾ ಅಭಿಯಾನಕ್ಕೆ ರುದ್ರಪ್ಪ ಲಮಾಣಿ ಚಾಲನೆ

ಹಾವೇರಿ: ಇ- ಖಾತಾ ಅಭಿಯಾನಕ್ಕೆ ಶಾಸಕ ಹಾಗೂ ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರು ನಗರಸಭೆ ಆವರಣದಲ್ಲಿ ಗುರುವಾರ ಚಾಲನೆ ನೀಡಿದರು.

ಸರ್ಕಾರ ಇ- ಆಸ್ತಿ ತಂತ್ರಾಶದ ಬಳಕೆ ಕಡ್ಡಾಯಗೊಳಿಸಿದೆ. ಆದ್ದರಿಂದ ನಗರಸಭೆಯ ವ್ಯಾಪ್ತಿಯ ಎಲ್ಲ ರೀತಿಯ ಕಟ್ಟಡ, ನಿವೇಶನಗಳಿಗೆ ಆಸ್ತಿ ತೆರಿಗೆ ನಿರ್ಧರಣೆಗೊಳಿಸಿ ಆಸ್ತಿ ತೆರಿಗೆಯನ್ನು 2024- 25ನೇ ಸಾಲಿನ ಅಂತ್ಯದೊಳಗೆ ಪೂರ್ಣ ಪ್ರಮಾಣದಲ್ಲಿ ಪಾವತಿಸಿಕೊಂಡು ಸಂಬಂಧಪಟ್ಟ ಆಸ್ತಿ ಮಾಲೀಕರಿಂದ ಅವಶ್ಯಕ ದಾಖಲೆಗಳನ್ನು ಪಡೆದು ಕರ್ನಾಟಕ ಪುರಸಭೆಗಳ ಅಧಿನಿಯಮದ ಪ್ರಕಾರ ಅನಧಿಕೃತ ಸ್ವತ್ತುಗಳನ್ನು ಮಾಹಿತಿಯುಳ್ಳ ವಹಿಯನ್ನು ನಿರ್ವಹಿಸಬೇಕಾಗಿರುತ್ತದೆ ಎಂದರು.ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಸದಸ್ಯರಾದ ಸಂಜೀವಕುಮಾರ ನೀರಲಗಿ, ಗಣೇಶ ಬಿಷ್ಟಣ್ಣನವರ ಇತರರು ಉಪಸ್ಥಿತರಿದ್ದರು.

Share this article