ರಾಮಮೂರ್ತಿ ನವಲಿ
ಕರಡೋಣಾ ಗ್ರಾಮದ ರೈತರಿಗೆ ತಿಳಿಯದಂತೆ ಅವರ ಜಮೀನಿನ ಪಹಣಿ ಪಡೆದು ನಕಲಿ ದಾಖಲೆ ಸೃಷ್ಟಿಸಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಬದು ನಿರ್ಮಿಸಲಾಗಿದೆ ಎಂದು ಲಕ್ಷಾಂತರ ರುಪಾಯಿ ಲಪಟಾಯಿಸಿರುವುದು ಬೆಳಕಿಗೆ ಬಂದಿದೆ. ಈ ಕುರಿತು ರೈತರು ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒಗೆ ದೂರು ನೀಡಿ ಸಮಗ್ರ ತನಿಖೆ ನಡೆಸಿ ನ್ಯಾಯ ಕೊಡಿಸುವಂತೆ ಒತ್ತಾಯಿಸಿದ್ದಾರೆ.
ಕನಕಗಿರಿ ತಾಲೂಕಿನ ಕರಡೋಣಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2023-24ನೇ ಸಾಲಿನಲ್ಲಿ ಸರ್ವೇ ನಂ. 43 ಹಾಗೂ ಸರ್ವೇ 16, 17, 08, 64ರಲ್ಲಿ ಕೃಷಿ ಇಲಾಖೆಯಿಂದ ಹೊಲಗಳಲ್ಲಿ ಬದು ನಿರ್ಮಿಸುವ ಕಾಮಗಾರಿ ಕೈಗೊಳ್ಳಲಾಗಿತ್ತು. ಇದನ್ನು ಅರಿತ ವಂಚಕರು ರೈತರಾದ ಮೇಜಾನ್ ರಾಜಸಾಬ್, ಜಿಲಾನಿಸಾಬ್ ಅಬ್ದುಲ್ ಸಾಬ್, ರಜಾಕ್ ರಾಜಾಸಾಬ್ ಎನ್ನುವರ ಪಹಣಿ ಪಡೆದು ಇವರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದು ₹ 3,35,908 ಹಣವನ್ನು ಬೇನಾಮಿ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಅಲ್ಲದೇ ಇವರ ಜಮೀನಿನಲ್ಲಿ ಬದುವು ನಿರ್ಮಿಸಿರುವ ಕಾಮಗಾರಿಯ ನಕಲಿ ನಾಮಫಲಕ ಹಾಕಿ (11-02-2023) ಕಾಮಗಾರಿ ಪ್ರಾರಂಭಿಸಿರುವ ಫೋಟೋಗಳನ್ನು ಬಿಲ್‌ಗಳಿಗೆ ಲಗತ್ತಿಸಿದ್ದಾರೆ. ಆದರೆ, ವಾಸ್ತವ್ಯದಲ್ಲಿ ಬದು ನಿರ್ಮಿಸಿಯೇ ಇಲ್ಲ. ಈ ಜಮೀನಿನ ರೈತರಲ್ಲಿ ಉದ್ಯೋಗ ಖಾತ್ರಿಯ ಜಾಬ್ ಕಾರ್ಡ್‌ಗಳಿದ್ದರೂ ಸಹ ಇವರಿಗೆ ತಿಳಿಯದೆ ಹಾಗೇ ನಕಲಿ ಫಲಾನುಭವಿಗಳನ್ನು ಸೃಷ್ಟಿಸಿ ಹಣ ಕಬಳಿಸಲಾಗಿದೆ.ಯತ್ನಟ್ಟಿ, ಮಲ್ಲಾಪುರ, ಕರಡೋಣಾ, ಕಾಟಾಪುರ ಗ್ರಾಮಗಳ ರೈತರ ಸರ್ವೇ ನಂ. 81, 30, 10, 18, 23, 14, 15, 12, 28, 36ರ ಹೊಲಗಳಲ್ಲಿ ಬದು ನಿರ್ಮಿಸುವ ನೆಪದಲ್ಲಿ ₹ 4.78 ಲಕ್ಷ ಬೇರೆಯವರ ಖಾತೆಗೆ ಜಮಾವಾಗಿದೆ. ಇಲ್ಲಿಯು ಸಹ ಕಾಮಗಾರಿ ಪ್ರಾರಂಭಗೊಂಡಿರುವ ನಕಲಿ ನಾಮಫಲಕ ಹಾಕಿ ದಾಖಲೆ ಸೃಷ್ಷಿಸಿ ಕೃಷಿ ಇಲಾಖೆಗೆ ನೀಡಿ ಹಣ ಪಡೆದಿದ್ದಾರೆ.
ಜಿಲ್ಲಾಧಿಕಾರಿಗೆ ದೂರು:
ಕರಡೋಣಾ ಸೇರಿದಂತೆ ಕೆಲ ಗ್ರಾಮಗಳಲ್ಲಿ ರೈತರ ಹೊಲದಲ್ಲಿ ಬದುವು ನಿರ್ಮಾಣ, ಕಂದಕ ನಿರ್ಮಿಸಿದ ಕಾಮಗಾರಿಗಳಲ್ಲಿ ನಡೆದ ಭ್ರಷ್ಟಾಚಾರ ನಮ್ಮ ಗಮನಕ್ಕೆ ಬಂದಿಲ್ಲ. ಒಂದು ವೇಳೆ ರೈತರು ದೂರು ನೀಡಿದರೆ ಸಂಬಂಧಿಸಿದರ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ಗಂಗಾವತಿಯ ಕೃಷಿ ಇಲಾಖೆಯ ಎಡಿಎ ಸಂತೋಷ ಪಟ್ಟದಕಲ್ಲು ಹೇಳಿದರು.