ಕೇಂದ್ರ ಬಸ್ ನಿಲ್ದಾಣದ ಎದುರಿಗಿರುವ ವೀರರಾಣಿ ಚನ್ನಮ್ಮನವರ ಮೂರ್ತಿ ಉದ್ಘಾಟನೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ ತರಾತುರಿಯಲ್ಲಿ ಜಿಲ್ಲೆಯ ಸಂಘಟನೆಗಳ ಮತ್ತು ಸಮುದಾಯಗಳ ಪ್ರಮುಖರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷಿಯವಾಗಿ ಮಾಡುತ್ತಿದ್ದಾರೆ. ಇದರ ಹಿಂದೆ ಕಾಂಗ್ರೆಸ್ ಪಕ್ಷ ಮತ್ತು ಸಚಿವರ ವೈಯಕ್ತಿಕ ಹಿತಾಸಕ್ತಿ ಅಡಗಿದೆ ಎಂದು ಪಂಚಮಸಾಲಿ ಸಮಾಜದ ಮುಖಂಡ ಹಾಗೂ ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಆರೋಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ವಿಜಯಪುರ
ಕೇಂದ್ರ ಬಸ್ ನಿಲ್ದಾಣದ ಎದುರಿಗಿರುವ ವೀರರಾಣಿ ಚನ್ನಮ್ಮನವರ ಮೂರ್ತಿ ಉದ್ಘಾಟನೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ ತರಾತುರಿಯಲ್ಲಿ ಜಿಲ್ಲೆಯ ಸಂಘಟನೆಗಳ ಮತ್ತು ಸಮುದಾಯಗಳ ಪ್ರಮುಖರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷಿಯವಾಗಿ ಮಾಡುತ್ತಿದ್ದಾರೆ. ಇದರ ಹಿಂದೆ ಕಾಂಗ್ರೆಸ್ ಪಕ್ಷ ಮತ್ತು ಸಚಿವರ ವೈಯಕ್ತಿಕ ಹಿತಾಸಕ್ತಿ ಅಡಗಿದೆ ಎಂದು ಪಂಚಮಸಾಲಿ ಸಮಾಜದ ಮುಖಂಡ ಹಾಗೂ ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಆರೋಪಿಸಿದರು.ಜ.9ರಂದು ಸಿಎಂ ಸಿದ್ದರಾಮಯ್ಯರಿಂದ ಹಮ್ಮಿಕೊಂಡಿರುವ ಚನ್ನಮ್ಮ ಮೂರ್ತಿ ಉದ್ಘಾಟನೆ ಸಮಾರಂಭ ಬಹಿಷ್ಕರಿಸುವುದಾಗಿ ಪ್ರಕಟಣೆ ನೀಡಿರುವ ಅವರು, ಬೆಳಗಾವಿಯಲ್ಲಿ ಪಂಚಮಸಾಲಿ 2ಎ ಮೀಸಲಾತಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿದ ಘಟನೆಯ ಕುರಿತು ಸರ್ಕಾರ ಪೊಲೀಸರ ಮೇಲೆ ತನಿಖೆ ಮಾಡಿ ಕ್ರಮ ತೆಗೆದುಕೊಂಡಿಲ್ಲ. ಸಮಾಜದ ಬಹುದಿನದ ಬೇಡಿಕೆ 2ಎ ಮೀಸಲಾತಿ ನೀಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕಾಂಗ್ರೆಸ್ ಸರ್ಕಾರ ಪಂಚಮಸಾಲಿ ವಿರೋಧಿ ನೀತಿ ಕೈಬಿಟ್ಟು ಲಾಠಿ ಚಾರ್ಜ್ ಪ್ರಕರಣಕ್ಕೆ ಕ್ಷಮೆ ಕೇಳಬೇಕು ಜೊತೆಗೆ ಸಮಾಜದ ಬಹುದಿನಗಳ ಬೇಡಿಕೆಯಾದ 2ಎ ಮೀಸಲಾತಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.ವಿಜಯಪುರ ನಗರದ ಸೋಲಾಪುರ ರಸ್ತೆಯಲ್ಲಿ ಈ ಹಿಂದೆ ಘೋಷಣೆ ಸಂಗೊಳ್ಳಿ ರಾಯಣ್ಣನವರ ವೃತ್ತ ನಿರ್ಮಿಸಿ, ರಾಯಣ್ಣನವರ ಅಶ್ವಾರೂಢ ಪುತ್ತಳಿ ನಿರ್ಮಾಣ ಮಾಡಬೇಕು. ಮಧ್ಯಮ ವರ್ಗದ ಜನರಿಗೆ ಹಾಗೂ ಬಡ ಜನರಿಗೆ ಮೂಲಸೌಕರ್ಯವಾದ ವಿದ್ಯುತ್ ಸಂಪರ್ಕವನ್ನು ನೀಡಬೇಕು. ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಸರ್ಕಾರದಿಂದ ಉದ್ದೇಶಿಸಿರುವ ಪಿಪಿಪಿ ಮಾದರಿಯ ವೈದ್ಯಕೀಯ ಕಾಲೇಜ್ ಸ್ಥಾಪನೆ ಕೈಬಿಟ್ಟು, ಪೂರ್ಣ ಪ್ರಮಾಣದ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಗೆ ಜನವರಿ 9ರ ಕಾರ್ಯಕ್ರಮದಲ್ಲಿ ಭೂಮಿ ಪೂಜೆ ನೆರವೇರಿಸಬೇಕು. ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜಿನಂತ ದೊಡ್ಡ ಹೋರಾಟ ಕಡೆಗಣಿಸಿ ವಿಜಯಪುರ ಜಿಲ್ಲೆಗೆ ಮುಖ್ಯಮಂತ್ರಿಗಳು ಬರುತ್ತಿರುವುದು ಖಂಡನೀಯ. ಮುಖ್ಯಮಂತ್ರಿಗಳ ಆಗಮನವನ್ನು ರೈತ ಭಾರತ ಪಕ್ಷವು ವಿರೋಧಿಸುತ್ತದೆ. ಮೆಡಿಕಲ್ ಕಾಲೇಜ್ ಹೋರಾಟಕ್ಕೆ ಸುಖಾಂತ್ಯ ಸೇರಿದಂತೆ ಎಲ್ಲ ಸಮಸ್ಯೆಗಳಿಗೆ ನ್ಯಾಯ ಒದಗಿಸಿ ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸಬೇಕು ಎಂದು ಆಗ್ರಹಿಸಿದ್ದಾರೆ.