ನಗರ ಪ್ರದೇಶದಲ್ಲಿ ಒಲವಿನ ಊಟ, ಮನೆ ಕೈ ರುಚಿ ಸಿಗುವುದಿಲ್ಲ. ಹೀಗಾಗಿ ನಗರ ಪ್ರದೇಶದಲ್ಲಿಯೂ ಜನರಿಗೆ ಒಲವಿನ ಊಟ ಮನೆಯ ಕೈ ರುಚಿ ಸಿಗುವಂತೆ ಮಾಡಲು ಹಾಗೂ ಮಹಿಳೆಯರು ಸಬಲೀಕರಣದ ದೃಷ್ಟಿಯಿಂದ ಜಿಲ್ಲಾ ಪಂಚಾಯತಿ ಆವರಣದಲ್ಲಿ ಅಕ್ಕ ಕೆಫೆ ಸಿದ್ಧವಾಗಿದೆ.
ಕನ್ನಡಪ್ರಭ ವಾರ್ತೆ ವಿಜಯಪುರ
ನಗರ ಪ್ರದೇಶದಲ್ಲಿ ಒಲವಿನ ಊಟ, ಮನೆ ಕೈ ರುಚಿ ಸಿಗುವುದಿಲ್ಲ. ಹೀಗಾಗಿ ನಗರ ಪ್ರದೇಶದಲ್ಲಿಯೂ ಜನರಿಗೆ ಒಲವಿನ ಊಟ ಮನೆಯ ಕೈ ರುಚಿ ಸಿಗುವಂತೆ ಮಾಡಲು ಹಾಗೂ ಮಹಿಳೆಯರು ಸಬಲೀಕರಣದ ದೃಷ್ಟಿಯಿಂದ ಜಿಲ್ಲಾ ಪಂಚಾಯತಿ ಆವರಣದಲ್ಲಿ ಅಕ್ಕ ಕೆಫೆ ಸಿದ್ಧವಾಗಿದೆ.ಈ ಕೆಫೆಯಲ್ಲಿ ತಮ್ಮ ಕೈರುಚಿ ತೋರಿಸಲು ಎನ್ಆರ್‌ಎನ್ಎಂ ಯೋಜನೆಯ ಸ್ವ-ಸಹಾಯ ಸಂಘದ ಮಹಿಳೆಯರು ತುದಿಗಾಲ ಮೇಲೆ ನಿಂತಿದ್ದಾರೆ. ಗ್ರಾಮೀಣ ಭಾಗದ ಸ್ವ-ಸಹಾಯ ಸಂಘದ ಮಹಿಳೆಯರು ತಯಾರಿಸಿರುವ ತಿಂಡಿ- ತಿನಿಸುಗಳು, ಗೃಹಬಳಕೆ ಸಾಮಗ್ರಿಗಳನ್ನು ಸಹ ಈ ಕೆಫೆಯಲ್ಲಿ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತದೆ ಹಾಗೂ ಪ್ರತಿ ದಿನ ಅತ್ಯಂತ ರುಚಿಕಟ್ಟಾದ ಉಪಹಾರ, ಊಟ ಮತ್ತು ಸಂಜೆ ತಿನಿಸುಗಳನ್ನು ತಯಾರಿಸಿ ಜನರಿಗೆ ಬಡಿಸಲಾಗುತ್ತದೆ. ಈ ಅಕ್ಕ ಕೆಫೆ ಕ್ಯಾಂಟಿನ್‌ನ್ನು ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಸಂಸದ ರಮೇಶ ಜಿಗಜಿಣಗಿ, ವಿಜಯಪುರ ಜಿಲ್ಲೆಯ ಸ್ಫೂರ್ತಿ ಮಹಿಳಾ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷೆ ಶಶಿಕಲಾ ಗುರು ತಳಸದಾರ(ಸ್ಥಾವರಮಠ) ಸೇರಿದಂತೆ ಜಿಲ್ಲೆಯ ಅಧಿಕಾರಿಗಳು, ಇಲಾಖೆಯ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.