ಕನ್ನಡಪ್ರಭ ವಾರ್ತೆ ಮಂಡ್ಯ
ಚಂದನ್ ಶೆಟ್ಟಿ -ನಿವೇದಿತಾ ವಿವಾಹ ವಿಚ್ಛೇಧನ ಪ್ರಕರಣದಲ್ಲಿ ನಟ ಧ್ರುವ ಸರ್ಜಾ ಮಧ್ಯಸ್ಥಿಕೆ ವಹಿಸುವಂತೆ ನಟ ಪ್ರಥಮ್ ಸಲಹೆ ನೀಡಿದರು.ಚಂದನ್‌ಗೆ ಒಳ್ಳೆಯದಾಗಲಿ ಎಂಬ ಕಾರಣಕ್ಕೆ ಪೊಗರು ಸಿನಿಮಾದಲ್ಲಿ ಅವರಿಗೆ ಅವಕಾಶ ನೀಡಿದ್ದರು. ಚಂದನ್‌ಗೆ ಧ್ರುವಸರ್ಜಾ ಮೇಲೆ ಪ್ರೀತಿ ಇದ್ದರೆ ಅವರ ಮಾತನ್ನು ಕೇಳುತ್ತಾರೆ ಎಂದು ಶನಿವಾರ ನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ದಾಂಪತ್ಯ ಜೀವನದಿಂದ ಬೇರ್ಪಟ್ಟ ಮಾತ್ರಕ್ಕೆ ಅವರಿಬ್ಬರೂ ಹೃತಿಕ್ ರೋಷನ್, ದೀಪಿಕಾ ಪಡುಕೋಣೆ ಆಗ್ತಾರ? ಒಂದು ಶೋ ಮುಖ್ಯವೋ? ಜೀವನ ಮುಖ್ಯವೋ? ಚೆನ್ನಾಗಿ ಬದುಕಬೇಕು. ಬದುಕಿ ತೋರಿಸಬೇಕು ಎಂದು ಸಲಹೆ ನೀಡಿದರು.ಕೆರಿಯರ್ ಬಗ್ಗೆ ಯೋಚಿಸದೇ ಇಬ್ಬರೂ ಮದುವೆ ಆದರಾ? ಎಲ್ಲವನ್ನು ಯೋಚಿಸಿಯೇ ಅವರು ಮದುವೆ ಆಗಿದ್ದಾರೆ. ಮಿಲನ ಸಿನೆಮಾದಲ್ಲಿ ವಿಚ್ಚೇದನದ ಬಳಿಕವೂ ಒಂದಾಗಲ್ವಾ? ಇಚ್ಛಾಶಕ್ತಿ ಎದುರು ಬೇರಾವುದೂ ದೊಡ್ಡದಲ್ಲ. ಮಿಲನ್ ಫಿಲ್ಮ್ ಕ್ಲೈಮ್ಯಾಕ್ಸ್ ಕಟ್ ಮಾಡಿ ಚಂದನ್‌ಗೆ ಕಳಿಸುತ್ತೇನೆ. ಅದನ್ನ ನೋಡಿಯಾದರೂ ಚಂದನ್ ಮನಸ್ಸು ಬದಲಾಗಲಿ ಎಂದು ಆಶಿಸಿದರು.
ಯುವ ದಸರಾ ವೇದಿಕೆಯಲ್ಲಿ ಚಂದನ್ ಪ್ರಪೋಸ್ ಮಾಡಿದ್ದು ನನ್ನ ಕೆರಿಯರ್ ಮೇಲೆ ಪರಿಣಾಮ ಬೀರಿತ್ತು. ಆ ಘಟನೆಯಿಂದ ಯುವ ದಸರಾ ವೇದಿಕೆಯಲ್ಲಿ ನನ್ನ ಸಿನೆಮಾ ಪ್ರೋಮೋಷನ್‌ಗೆ ಅವಕಾಶ ಸಿಗಲಿಲ್ಲ. ಅದರಿಂದ ಚಂದನ್ ಮೇಲೆ ಕೆಲದಿನ ಕೋಪ ಮಾಡಿಕೊಂಡಿದ್ದೆ. ಆನಂತರ ಪರಸ್ಪರ ಮಾತನಾಡಿದಾಗ ನಾವಿಬ್ಬರೂ ಒಳ್ಳೆಯ ಸ್ನೇಹಿತರಾದೆವು. ಚಂದನ್‌ಗೆ ಕೇಳುವ ವಿವೇಚನೆ ಇದೆ ಎಂದು ಹೇಳಿದರು.ಆರೇಂಜ್ ಮ್ಯಾರೇಜ್ ಆದರೆ ಕಂಟ್ರೋಲ್ ಇರುತ್ತದೆ. ಲವ್ ಮ್ಯಾರೇಜ್ ಆದರೆ ನಮ್ಮ ಜುಟ್ಟು ಅವರ ಕೈಯ್ಯಲಿರುತ್ತದೆ. ಈ ಹಿಂದೆ ಯಾವ ವಿಚ್ಚೇದನವೂ ಇರಲಿಲ್ಲ. ನಮ್ಮ ಹಿರಿಯರು ನೂರಾರು ಕಾಲ ದಾಂಪತ್ಯ ಜೀವನ ನಡೆಸಿಲ್ಲವೇ? ೩೫೦ ಕಿ.ಮೀ.ದೂರದಲ್ಲಿ ಕಾರ್ಯಕ್ರಮ ಇದ್ದರೂ ಮದುವೆ ದಿನ ನಮ್ಮ ಮನೆಗೆ ಬಂದು ವಿಶ್ ಮಾಡುತ್ತಿದ್ದರು. ಮದುವೆ, ತಾಳಿ ಬಗ್ಗೆ ಚಂದನ್‌ಗೆ ಗೌರವ ಇದೆ.
ಯಾರೋ ಕೋತಿ ಮುಂಡೇವು ಮಧ್ಯದಲ್ಲಿ ತೊಂದರೆ ಮಾಡಿದ್ದಾರೆ ಅಷ್ಟೇ. ಹಾಳಾದರೆ ಖುಷಿ ಪಡುವವರು ಸಾಕಷ್ಟು ಜನ ಇದ್ದಾರೆ.ನಾನು ಒಳ್ಳೆಯದಾಗಲಿ ಎಂದು ಬಯಸುತ್ತೇನೆ. ನಿಮ್ಮ ನಿರ್ಧಾರ ಸರಿ ಎನ್ನುವವರು ಯಾರು ಕಷ್ಟದಲ್ಲಿ ನಿಮ್ಮ ನೆರವಿಗೆ ಬರೋಲ್ಲ.
ಹಾಳಾಗಲಿ ಎನ್ನುವವರ ಮಧ್ಯೆ ಚೆನ್ನಾಗಿ ಬದುಕು ಚಂದನ್ ಎಂದು ಹೇಳುತ್ತೇನೆ. ಅವರಿಬ್ಬರನ್ನೂ ಒಂದು ಮಾಡುವಂತೆ ಜನರು ನನಗೆ ಮೆಸೇಜ್ ಮಾಡುತ್ತಿದ್ದಾರೆ. ನನ್ನ ಮಾತು ಅವರು ಕೇಳುತ್ತಾರಾ? ಆದರೂ ಎಲ್ಲರಿಗೂ ಒಳ್ಳೆಯದಾಗಲಿ ಎಂದರು.