ಡೋಣಿ ನದಿ ಪ್ರವಾಹಕ್ಕೆ ಯಾಳವಾರ ಸೇತುವೆ ಜಲಾವೃತ

KannadaprabhaNewsNetwork | Published : Jun 9, 2024 1:36 AM

ಸಾರಾಂಶ

ದೇವರಹಿಪ್ಪರಗಿ: ಪಟ್ಟಣ ಹಾಗೂ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಯಾಳವಾರ ಗ್ರಾಮದ ಬಳಿಯ ಬ್ರಿಜ್ ಕಂ ಬ್ಯಾರೇಜ್ ದೋಣಿ ನದಿ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ.

ದೇವರಹಿಪ್ಪರಗಿ: ಪಟ್ಟಣ ಹಾಗೂ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಯಾಳವಾರ ಗ್ರಾಮದ ಬಳಿಯ ಬ್ರಿಜ್ ಕಂ ಬ್ಯಾರೇಜ್ ದೋಣಿ ನದಿ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ. ಇದರಿಂದ ಕೊಂಡಗೂಳಿ ಮಾರ್ಗವಾಗಿ ಯಾಳವಾರ ಸೇರಿದಂತೆ ಹಲವು ಗ್ರಾಮಗಳಿಗೆ ಸಂಪರ್ಕಿಸುವ ಸೇತುವೆ ಜಲಾವೃತ ಗೊಂಡ ಕಾರಣ ಸಂಚಾರ ಬಂದ್ ಆಗಿ ಪರದಾಟ ಶುರುವಾಗಿದೆ. 1 ಕಿ.ಮೀ. ಮೀಟರ್ ಅಂತರದಲ್ಲಿ ರೈತರ ಜಮೀನುಗಳಿವೆ.‌ ಜಮೀನಿಗೆ ತೆರಳಲು ರೈತರು ನದಿ ದಾಟಲು ಸುಮಾರು 30 ಕಿ.ಮೀ. ಸುತ್ತುವರಿದು ಬರಬೇಕು. ಹೀಗಾಗಿ ರೈತರು ಹಾಗೂ ಸಾರ್ವಜನಿಕರು ಜೀವದ ಹಂಗು ತೊರೆದು ತುಂಬಿ ಹರಿಯುವ ನದಿಯಲ್ಲೇ ದಾಟಲು ಯತ್ನಿಸುತ್ತಿದ್ದಾರೆ.

ಮಳೆಯಿಂದ ಜನಜೀವನ ಅಸ್ತವ್ಯಸ್ತ:

ತಾಲೂಕಿನಾದ್ಯಂತ ಕಳೆದ 2 ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕೊಂಡಗೊಳಿ ಗ್ರಾಮದ ರಸ್ತೆಗಳೆಲ್ಲ ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತವಾಗಿದೆ. ಚರಂಡಿಗಳು ತುಂಬಿ ರಸ್ತೆ ಮೇಲೆ ಹರಿದು ಸಂಚಾರಕ್ಕೆ ಅಡ್ಡಿಯಾದ ಘಟನೆ ನಡೆದಿದೆ. ಗ್ರಾಮದ ಕಲ್ಲು ಅಮರಾವತಿ, ಲಕ್ಷ್ಮಣ್ ಲಂಗೋಟೆ ಹಾಗೂ ಲೋಹಿತ್ ಸಿಂದಗಿರಿ ಇವರ ಹೊಲದಲ್ಲಿ ಮಳೆ ನೀರಿಗೆ ಕಾಲುವೆ ಕೊಚ್ಚಿಕೊಂಡು ಹೋಗಿ ಮಣ್ಣು ಹಾಳಾಗಿದೆ. ಇದರಿಂದ ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಶನಿವಾರ ಸಂಜೆ ಗುಡುಗು-ಸಿಡಿಲಿನಿಂದ ಗಂಟೆಗೂ ಹೆಚ್ಚುಕಾಲ ಸುರಿದ ಮಳೆಯಿಂದ ಜಮೀನುಗಳು ಮತ್ತೇ ಜಲಾವೃತವಾದವು. ಗ್ರಾಮದ ಹಲವಾರು ಹೊಲಗಳಲ್ಲಿ ಒಡ್ಡುಗಳು ಒಡೆದು, ಜಮೀನಿನಲ್ಲಿನ ವಡ್ಡಗಳು ಒಡೆದು ಮಣ್ಣು ಹರಿದು ಹೋದ ಘಟನೆ ನಡೆದಿದೆ ಎಂದು ಮಡಿವಾಳಪ್ಪ ಹಿಪ್ಪರಗಿ, ಶಿವಾನಂದ ಹಿಪ್ಪರಗಿ, ಆನಂದ ಕುಮಾರ, ಅಜಿತ್ ಕೆಂಭಾವಿ, ಪ್ರಕಾಶ್ ಸಿಂದಗಿರಿ ಹಾಗೂ ಈರಣ್ಣ ಗಾಣಿಗೇರ ತಿಳಿಸಿದರು.

Share this article