‘ಕನ್ನಡಪ್ರಭ’ ಮತ್ತು ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ಸಹಯೋಗದಲ್ಲಿ ಆಯೋಜಿಸಿದ್ದ ಮೂರು ದಿನಗಳ ‘ಕೆಂಗೇರಿ ಸಂಭ್ರಮ’ ಕಾರ್ಯಕ್ರಮಕ್ಕೆ ಭಾನುವಾರ ವಿದ್ಯುಕ್ತ ತೆರೆ ಬಿತ್ತು.

ಕನ್ನಡಪ್ರಭ ವಾರ್ತೆ ಬೆಂಗಳೂರು

‘ಕನ್ನಡಪ್ರಭ’ ಮತ್ತು ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ಸಹಯೋಗದಲ್ಲಿ ಆಯೋಜಿಸಿದ್ದ ಮೂರು ದಿನಗಳ ‘ಕೆಂಗೇರಿ ಸಂಭ್ರಮ’ ಕಾರ್ಯಕ್ರಮಕ್ಕೆ ಭಾನುವಾರ ವಿದ್ಯುಕ್ತ ತೆರೆ ಬಿತ್ತು.

ವಾರಾಂತ್ಯದ ಹಿನ್ನೆಲೆಯಲ್ಲಿ ಕೆಂಗೇರಿ ಮತ್ತು ಸುತ್ತಮುತ್ತಲ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕೆಂಗೇರಿ ಸಂಭ್ರಮಕ್ಕೆ ಮತ್ತಷ್ಟು ಕಳೆತಂದುಕೊಟ್ಟರು. ಮಿಮಿಕ್ರಿ ಗೋಪಿ ಮತ್ತು ಸಂಗಡಿಗರು ಭಾನುವಾರ ನಡೆಸಿಕೊಟ್ಟ ಹಾಸ್ಯ ಕಾರ್ಯಕ್ರಮ ಪ್ರೇಕ್ಷಕರ ಮೆಚ್ಚುಗೆಗೆ ಭಾಜನವಾಯಿತು.

ಬೆಂಗಳೂರಿನ ಅತಿದೊಡ್ಡ ಫುಡ್‌, ಫನ್‌ ಆ್ಯಂಡ್‌ ಫ್ಯಾಷನ್‌ ಫೆಸ್ಟಿವಲ್‌ ಆದ ‘ಕೆಂಗೇರಿ ಸಂಭ್ರಮ’ಕ್ಕೆ ಮೂರು ದಿನವೂ ಜನ ಆಗಮಿಸಿ ತಮಗಿಷ್ಟವಾದ ವಸ್ತು, ಪದಾರ್ಥಗಳನ್ನು ಖರೀದಿಸಿ ಮನೆಗೊಯ್ದರು. ಕರ್ನಾಟಕದ ವಿವಿಧ ಭಾಗ ಸೇರಿ ಉತ್ತರ ಭಾರತದ ವೈವಿಧ್ಯಮಯ ಖಾದ್ಯಗಳ ಆಹಾರ ಮೇಳವಿದ್ದು, ತಮಗಿಷ್ಟವಾದ ಖಾದ್ಯ ಸವಿದು ಖುಷಿಪಟ್ಟರು.

ಶಾಪಿಂಗ್‌ಪ್ರಿಯರ ಮೆಚ್ಚಿನ ತಾಣ:

ಮಹಿಳೆಯರಿಗೆ ಶಾಪಿಂಗ್‌ಗಾಗಿ ವಿಶೇಷ ಲೈಫ್ ಸ್ಟೈಲ್ ಅಂಗಡಿಗಳಿದ್ದು, ಗೃಹ ಬಳಕೆ ವಸ್ತುಗಳು, ಕರಕುಶಲ ಸಾಮಗ್ರಿ, ವಿಭಿನ್ನ ಕಸೂತಿ ಪರದೆಗಳು ಗಮನ ಸೆಳೆದವು. ವಿಭಿನ್ನ ಮಾದರಿಯ ಫರ್ನಿಚರ್‌ ಸೇರಿ ಮನೆ ಮತ್ತು ಕಚೇರಿ ಅಲಂಕಾರಕ್ಕೆ ಸೂಕ್ತ ವಸ್ತುಗಳನ್ನು ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಿದ್ದು ‘ಕೆಂಗೇರಿ ಸಂಭ್ರಮ’ದಲ್ಲಿ ಕಂಡುಬಂತು.

ಮೂರು ದಿನವೂ ಫ್ಯಾಮಿಲಿ ಫ್ಯಾಷನ್‌ ಶೋ, ಬೊಂಬಾಟ್‌ ಜೋಡಿ, ನೃತ್ಯ ಸ್ಪರ್ಧೆ, ಮಹಿಳೆಯರಿಗಾಗಿ ‘ಅಡುಗೆ ಮಹಾರಾಣಿ’ ಮತ್ತಿತರ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ನಮ್ಮೂರ ಮುದ್ದು ಮಗು ಸ್ಪರ್ಧೆ ವಿಶೇಷವಾಗಿ ಗಮನ ಸೆಳೆಯಿತು. ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ, ನೃತ್ಯ ಸ್ಪರ್ಧೆ, ವೇಷಭೂಷಣ ಸ್ಪರ್ಧೆ, ಬೆಂಕಿರಹಿತ ಅಡುಗೆ ಸ್ಪರ್ಧೆ ಆಯೋಜಿಸಿದ್ದು ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಸಾಧಕರಿಗೆ ಸನ್ಮಾನ:

ಮೂರು ದಿನಗಳ ‘ಕೆಂಗೇರಿ ಸಂಭ್ರಮ’ಕ್ಕೆ ಶುಕ್ರವಾರ ಯಶವಂತಪುರ ಕ್ಷೇತ್ರದ ಶಾಸಕ ಎಸ್‌.ಟಿ.ಸೋಮಶೇಖರ್‌ ಚಾಲನೆ ನೀಡಿದ್ದರು. ನಟಿ ಅಮೃತಾ ಅಯ್ಯಂಗಾರ್‌, ನಟ ಪಾವಗಡ ಮಂಜು ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು. ಶನಿವಾರವೂ ನಟಿ ಅಮೃತಾ ಅಯ್ಯಂಗಾರ್‌ ಮತ್ತಿತರ ಗಣ್ಯರು ಆಗಮಿಸಿದ್ದರು. ಮೂರು ದಿನವೂ ಕೆಂಗೇರಿ ಮತ್ತು ಯಶವಂತಪುರ ಪ್ರದೇಶದ ಹಲವು ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿದ್ದು ವಿಶೇಷವಾಗಿತ್ತು. ಭಾನುವಾರ ಚಕ್ರಪಾಣಿ ಅವರನ್ನು ಗೌರವಿಸಲಾಯಿತು.