ಕನ್ನಡಪ್ರಭ ವಾರ್ತೆ ಬಾದಾಮಿ

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಹಾಗೂ ತಾಲೂಕು ಘಟಕದಿಂದ ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾ.2 ರಂದು ಸೋಮವಾರ ಪಟ್ಟಣದ ಶ್ರೀ ವೀರಪುಲಿಕೇಶಿ ವಿದ್ಯಾಸಂಸ್ಥೆಯ ಬಸವಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಫ್.ಹೊರಕೇರಿ ಹೇಳಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಂದು ಬೆಳಗ್ಗೆ 7.15ಕ್ಕೆ ಧ್ವಜಾರೋಹಣ ನಡೆಯಲಿದೆ. ರಾಷ್ಟ್ರಧ್ವಜವನ್ನು ಶಾಸಕ ಭೀಮಸೇನ ಚಿಮ್ಮನಕಟ್ಟಿ, ನಾಡಧ್ವಜವನ್ನು ಜಿಲ್ಲಾ ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಪರಿಷತ್ತಿನ ಧ್ವಜವನ್ನು ತಾಲೂಕು ಕಸಾಪ ಅಧ್ಯಕ್ಷ ಬಿ.ಎಫ್.ಹೊರಕೇರಿ ನೆರವೇರಿಸುವರು. ಬೆಳಗ್ಗೆ 8 ಗಂಟೆಗೆ ಸಮ್ಮೇಳನಾಧ್ಯಕ್ಷರ ನೇತೃತ್ವದಲ್ಲಿ ಭುವನೇಶ್ವರಿ ಮೆರವಣಿಗೆ ನಡೆಯಲಿದೆ. ಸಮ್ಮೇಳನದ ಉದ್ಘಾಟನಾ ಸಮಾರಂಭ ಬೆಳಗ್ಗೆ 10.30ಕ್ಕೆ ನಡೆಯಲಿದ್ದು, ಕೆರೂರ ಚರಂತಿಮಠದ ಡಾ.ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಹಿರಿಯ ಸಾಹಿತಿ ವೈ.ಎಂ.ಯಾಕೊಳ್ಳಿ ಉದ್ಘಾಟಿಸುವರು. ಬೀಳಗಿ ಶಾಸಕ ಜೆ.ಟಿ.ಪಾಟೀಲ ಮಳಿಗೆ ಉದ್ಘಾಟಿಸುವರು ಎಂದರು.ಸಂಸದ ಪಿ.ಸಿ.ಗದ್ದಿಗೌಡರ, ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ, ವಿಪ ಸದಸ್ಯ ಹಣಮಂತ ನಿರಾಣಿ ಕೃತಿಗಳನ್ನು ಬಿಡುಗಡೆ ಮಾಡುವರು.

ಮಧ್ಯಾಹ್ನ 12.30ಕ್ಕೆ ಗೋಷ್ಠಿ-1 ರಲ್ಲಿ ಬಾದಾಮಿ ತಾಲೂಕಿನ ಸಾಹಿತ್ಯಾವಲೋಕನ ನಡೆಯಲಿದ್ದು, ಶಿವಯೋಗಮಂದಿರ ಸಂಶೋಧಕ ಡಾ.ಜೆ.ಕೆ.ಹಿರೇಮಠ ಅಧ್ಯಕ್ಷತೆ ವಹಿಸುವರು. ಸೃಜನಶೀಲ ಸಾಹಿತ್ಯ ಕುರಿತು ಉಪನ್ಯಾಸಕ ಪ್ರೊ.ಚಂದ್ರಶೇಖರ ಹೆಗಡೆ ಉಪನ್ಯಾಸ ನೀಡುವರು. ಜನಪದ ಸಾಹಿತ್ಯ ಕುರಿತು ಪ್ರೊ.ನಾಗರಾಜ ಹೊಟ್ಟಿ ಉಪನ್ಯಾಸ ನೀಡುವರು. ಮಹಿಳಾ ಸಾಹಿತಿ ಪ್ರೊ.ಶಾರದಾ ಮೇಟಿ ಉಪನ್ಯಾಸ ನೀಡುವರು. ಮಧ್ಯಾಹ್ನ 2ಕ್ಕೆ ಗೋಷ್ಟಿ-2 ಕವಿ ಸಮಯ ನಡೆಯಲಿದೆ. ಡಾ.ವಿ.ಬಿ.ಸಣ್ಣಸಕ್ಕರಗೌಡರ ಅಧ್ಯಕ್ಷತೆ ವಹಿಸುವರು. ಸಾಹಿತಿ ಕೆ.ವಿ.ವೀರಲಿಂಗನಗೌಡರ ಉದ್ಘಾಟಿಸುವರು. ಸಾಹಿತಿ ಚಂದ್ರಶೇಖರ ಪಾಟೀಲ ಆಶಯ ನುಡಿಗಳನ್ನಾಡುವರು. ಮಧ್ಯಾಹ್ನ 3.30ಕ್ಕೆ ಗೋಷ್ಟಿ-3 ನಡೆಯಲಿದ್ದು, ಸಮ್ಮೇಳನದ ಸರ್ವಾಧ್ಯಕ್ಷರ ಬದುಕು ಬರಹ ಅವರೊಂದಿಗೆ ಸಂವಾದ ನಡೆಯಲಿದೆ. ನಿವೃತ್ತ ಪ್ರಾಚಾರ್ಯ ಆರ್.ಬಿ.ಸಂಕದಾಳ ಅಧ್ಯಕ್ಷತೆ ವಹಿಸುವರು. ಜಿ.ಬಿ.ಶೀಲವಂತರ ಬದುಕು ಬರಹ ಕುರಿತು ಪ್ರಾಧ್ಯಾಪಕ ಡಾ.ಶಿವುಕುಮಾರ ಅಂಗಡಿ ಉಪನ್ಯಾಸ ನೀಡುವರು. ಸಂಜೆ 4.30ಕ್ಕೆ ವಿವಿದ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹನೀಯರ ಸನ್ಮಾನ ಮತ್ತು ಸಮಾರೋಪ ಸಮಾರಂಭ ಜರುಗಲಿದೆ ಎಂದರು.ನವಗೃಹ ಹಿರೇಮಠ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಜಿ.ಬಿ.ಶೀಲವಂತರ ಅಧ್ಯಕ್ಷತೆ ವಹಿಸುವರು. ಇದೇ ಸಂದರ್ಭದಲ್ಲಿ ಶಾರದಾ ಮೇಟಿ ಅವರ ಮುಸ್ಸಂಜೆಯ ಹೊತ್ತಿನಲ್ಲಿ ಮತ್ತು ಇತರೆ ಲೇಖನಗಳು ಮತ್ತು ಅನಸೂಯಾ ಯಲಿಗಾರ ಅವರ ನನ್ನ ಕೂಸು ನನ್ನ ನನಸು ಮತ್ತು ರಾಘವೇಂದ್ರ ಕುಲಕರ್ಣಿ ಅವರ ಪರಿಕೃತ ಮೂರು ಕೃತಿಗಳು ಲೋಕಾರ್ಪಣೆಗೊಳ್ಳಲಿವೆ ಎಂದು ತಿಳಿಸಿದರು.ಗೋಷ್ಠಿಯಲ್ಲಿ ಕಸಾಪ ಪದಾಧಿಕಾರಿಗಳಾದ ವಿ.ಎಸ್.ಶೆಟ್ಟರ, ಆರ್.ಎಂ.ಸಾರವಾಡ, ಆರ್.ಬಿ.ಸಂಕದಾಳ, ಮಹಾಂತೇಶ ಈಳಗೇರ, ಸಂಜು ಬರಗುಂಡಿ ಹಾಜರಿದ್ದರು.