ಜಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮನರೇಗಾ ಬಚಾವ ಆಂದೋಲನ ಹಮ್ಮಿಕೊಳ್ಳಲಾಯಿತು.

ಕನ್ನಡಪ್ರಭ ವಾರ್ತೆ ವಿಜಯಪುರ

ಕೇಂದ್ರ ಬಿಜೆಪಿ ಸರ್ಕಾರವು ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ಹೆಸರು ಬದಲಾಯಿಸಿ, ಈ ದೇಶಕ್ಕೆ ಅನ್ನ ಹಾಕುತ್ತಿರುವ ರೈತರಿಗೆ, ಬಡವರಿಗೆ, ಶೋಷಿತರಿಗೆ ಹಾಗೂ ಕಾರ್ಮಿಕರಿಗೆ ಅನ್ಯಾಯ ಮಾಡಿದ್ದನ್ನು ಖಂಡಿಸಿ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ, ಜಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮನರೇಗಾ ಬಚಾವ ಆಂದೋಲನ ಹಮ್ಮಿಕೊಳ್ಳಲಾಯಿತು.

ನಗರದ ಮಹಾತ್ಮಾಗಾಂಧಿ ವೃತ್ತದಿಂದ ಡಾ.ಬಾಬಾಸಾಹೇಬ ಅಂಬೇಡ್ಕರ್‌ ವೃತ್ತದವರೆಗೆ ತಲೆಮೇಲೆ ಬುಟ್ಟಿಗಳನ್ನು ಹೊತ್ತುಕೊಂಡು ಕಾರ್ಮಿಕರ ರೀತಿಯಲ್ಲಿ ಪಾದಯಾತ್ರೆಯಲ್ಲಿ ಸಾಗಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ ಮುಶ್ರೀಫ್ ಮಾತನಾಡಿ, ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದ್ದು, ಇದು ಜನವಿರೋಧಿ ಸರಕಾರವಾಗಿದೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾಪುರುಷರ ಹೆಸರುಗಳು ಶಾಶ್ವತವಾಗಿ ತೆಗೆಯುವ ಹುನ್ನಾರ ನಡೆಸಿದ್ದು, ಮಹಾತ್ಮಾಗಾಂಧಿಯವರ ಹೆಸರು ತೆಗೆದು ವಿಬಿಜಿ ರಾಮಜಿ ಎಂದು ಹೆಸರಿಟ್ಟು ಮಹಾತ್ಮಾಗಾಂಧೀಜಿಯವರಿಗೆ ಮಾಡಿದ ಅಪಮಾನವಿದು. ಕೇಂದ್ರ ಸರ್ಕಾರದ ಈ ಕೃತ್ಯ ಜನ ಎಂದಿಗೂ ಮರೆಯಲಾರರು ಎಂದರು.

ಕಾಂಗ್ರೆಸ್ ಪಕ್ಷದ ಆರ್ಥಿಕ ತಜ್ಞ ಮಾಜಿ ಪ್ರಧಾನಿ ದಿ.ಡಾ.ಮನಮೋಹನ ಸಿಂಗ್‌ರವರು ತಂದಂತಹ ಈ ಯೋಜನೆ ಸ್ಥಳೀಯ ಮಟ್ಟದಲ್ಲಿ ನಿರ್ಧಾರವಾಗಿ ಜನರು ಉದ್ಯೋಗದ ಜೊತೆಗೆ ಅಭಿವೃದ್ಧಿ ಹೊಂದಲಿ ಎಂದು ತಂದಂತಹ ಖಾತರಿ ಯೋಜನೆಯಾಗಿದೆ. ಇದರಲ್ಲಿ ಮುಖ್ಯವಾಗಿ ಶೇ.90 ರಷ್ಟು ಅನುದಾನ ಕೇಂದ್ರ ಸರಕಾರದ್ದಾಗಿತ್ತು. ಈ ಜನಪ್ರಿಯ ಯೋಜನೆ ಸಹಿಸದೆ ಇಂದಿನ ಕೇಂದ್ರ ಬಿಜೆಪಿ ಸರಕಾರ ಮಹಾತ್ಮಾಗಾಂಧೀಜಿಯವರ ಹೆಸರು ಅಳಿಸಿ, ತಾವು ಕೊಡಬೇಕಾದ ಅನುದಾನದಲ್ಲಿ ಕಡಿತ ಮಾಡಿ ರಾಜ್ಯ ಸರ್ಕಾರಗಳ ಮೇಲೆ ಭಾರಹಾಕಿ ಬಡವರಿಗೆ ಅನ್ಯಾಯ ಮಾಡುತ್ತಿದೆ ಎಂದು ದೂರಿದರು.

ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಮೀರಹ್ಮದ್‌ ಬಕ್ಷಿ ಮಾತನಾಡಿ, ಬಡವರ ಉದ್ಯೋಗ ಕಸಿದುಕೊಳ್ಳುತ್ತಿರುವ ಬಿಜೆಪಿ ನೀತಿಯನ್ನು ಕಾಂಗ್ರೆಸ್ ಪಕ್ಷ ಬಲವಾಗಿ ಖಂಡಿಸುತ್ತದೆ. ಕೇಂದ್ರ ಬಿಜೆಪಿ ಸರ್ಕಾರ ತಂದ ಕಾನೂನಿಗೆ ಮಾನ್ಯತೆ ನೀಡದೆ ತಕ್ಷಣ ಅದನ್ನು ರದ್ದುಪಡಿಸಿ ಈ ಮೊದಲಿದ್ದ ಮನರೇಗಾವನ್ನು ಪುನರ್ ಸ್ಥಾಪಿಸಿ ರೈತರಿಗೆ, ಕೂಲಿ ಕಾರ್ಮಿಕರಿಗೆ, ಶೋಷಿತರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ರಾಷ್ಟ್ರಪತಿಗಳಲ್ಲಿ ವಿನಂತಿಸಿದರು. ಒಂದುವೇಳೆ ಇದನ್ನು ರದ್ದು ಮಾಡದೇ ಹೋದಲ್ಲಿ ದೇಶಾದ್ಯಂತ ಕಾಂಗ್ರೆಸ್ ಪಕ್ಷ ಉಗ್ರವಾದ ಹೋರಾಟ ಕೈಗೆತ್ತಿಕೊಂಡು ಬಡವರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ ಎಂದು ಗುಡುಗಿದರು.

ಈ ವೇಳೆ ಕೆಪಿಸಿಸಿ ಪ್ರ.ಕಾ.ಮಹ್ಮದರಫೀಕ್‌ ಟಪಾಲ, ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ ಗಣಿಹಾರ, ಜಲನಗರ ಬ್ಲಾಕ್ ಅಧ್ಯಕ್ಷೆ ಆರತಿ ಶಹಾಪೂರ, ಮಹಿಳಾ ಜಿಲ್ಲಾಧ್ಯಕ್ಷೆ ರಮೀಜಾ ನದಾಫ್, ಶಬ್ಬೀರ್‌ ಜಾಗೀರದಾರ, ಚಾಂದಸಾಬ್‌ ಗಡಗಲಾವ, ಆಜಾದ್‌ ಪಟೇಲ, ಕನ್ನಾನ್‌ ಮುಶ್ರೀಫ್, ವಸಂತ ಹೊನಮೊಡೆ, ಫಯಾಜ್‌ ಕಲಾದಗಿ, ಶರಣಪ್ಪ ಯಕ್ಕುಂಡಿ, ಅಷ್ಫಾಕ್‌ ಮನಗೂಳಿ, ದಸ್ತಗೀರ್‌ ಸಾಲೊಟಗಿ ಮುಂತಾದವರು ಉಪಸ್ಥಿತರಿದ್ದರು.