ಪ್ರತಿ ವರ್ಷದಂತೆ ಈ ವರ್ಷವೂ ಯುಗಾದಿಯಂದು ಶ್ರೀಶೈಲ ಮಲ್ಲಿಕಾರ್ಜುನ, ಭ್ರಮರಾಂಬಿಕಾ ದೇವರ ಜಾತ್ರೆ ಆಂಧ್ರಪ್ರದೇಶದ ಶ್ರೀಶೈಲಂದಲ್ಲಿ ಜರುಗಲಿದ್ದು, ಈ ಬಾರಿ ಅತೀ ಹೆಚ್ಚು ಪ್ರಮಾಣದಲ್ಲಿ ಜನಸಂಖ್ಯೆ ಸೇರುವ ನಿರೀಕ್ಷೆ ಇದೆ. ಜನದಟ್ಟಣೆ ತಡೆಗಟ್ಟಲು ಕೆಲವು ನಿಯಮಾವಳಿ ಪ್ರಕಾರ ಮಲ್ಲಯ್ಯನ ಸ್ಪರ್ಶ ದರ್ಶನಕ್ಕೆ ಸಮಯ ನಿಗದಿಪಡಿಸಲಾಗಿದೆ ಎಂದು ಶ್ರೀಶೈಲ ಜಗದ್ಗುರು ಶ್ರೀ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ನುಡಿದರು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಪ್ರತಿ ವರ್ಷದಂತೆ ಈ ವರ್ಷವೂ ಯುಗಾದಿಯಂದು ಶ್ರೀಶೈಲ ಮಲ್ಲಿಕಾರ್ಜುನ, ಭ್ರಮರಾಂಬಿಕಾ ದೇವರ ಜಾತ್ರೆ ಆಂಧ್ರಪ್ರದೇಶದ ಶ್ರೀಶೈಲಂದಲ್ಲಿ ಜರುಗಲಿದ್ದು, ಈ ಬಾರಿ ಅತೀ ಹೆಚ್ಚು ಪ್ರಮಾಣದಲ್ಲಿ ಜನಸಂಖ್ಯೆ ಸೇರುವ ನಿರೀಕ್ಷೆ ಇದೆ. ಜನದಟ್ಟಣೆ ತಡೆಗಟ್ಟಲು ಕೆಲವು ನಿಯಮಾವಳಿ ಪ್ರಕಾರ ಮಲ್ಲಯ್ಯನ ಸ್ಪರ್ಶ ದರ್ಶನಕ್ಕೆ ಸಮಯ ನಿಗದಿಪಡಿಸಲಾಗಿದೆ ಎಂದು ಶ್ರೀಶೈಲ ಜಗದ್ಗುರು ಶ್ರೀ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ನುಡಿದರು.ಪ್ರತಿ ವರ್ಷ ಯುಗಾದಿ ಪ್ರಯುಕ್ತ ಆಂಧ್ರದ ಸುಕ್ಷೇತ್ರ ಶ್ರೀಶೈಲದಲ್ಲಿ ಮಾ.19ರಂದು ಜರುಗುವ ಶ್ರೀಮಲ್ಲಿಕಾರ್ಜುನ, ಭ್ರಮರಾಂಬಿಕಾ ಜಾತ್ರಾ ಮಹೋತ್ಸವದ ಪ್ರಪ್ರಥಮ ಬಾರಿಗೆ ತೇರದಾಳದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕ ಆಂಧ್ರ, ತೆಲಂಗಾಣ ಮತ್ತು ಗೋವಾ ರಾಜ್ಯಗಳಿಂದ ಲಕ್ಷಾಂತರ ಭಕ್ತರು ದರ್ಶನಕ್ಕೆ ಬರುವುದು ಸಹಜ. ಆ ನಿಮಿತ್ತ ವಿಜಯಪುರ, ರಬಕವಿ-ಬನಹಟ್ಟಿ ನಗರಗಳಲ್ಲಿ ಪೂರ್ವಭಾವಿ ಸಭೆ ನಡೆಸಲಾಗುತ್ತಿತ್ತು. ಆದರೆ, ಈ ಬಾರಿ ತೇರದಾಳದ ಭಕ್ತರ ಬಹುದಿನಗಳ ಬೇಡಿಕೆಯಂತೆ ತೇರದಾಳ ಶ್ರೀಅಲ್ಲಮಪ್ರಭು ಸಮುದಾಯಭವನದಲ್ಲಿ ಜರುಗಿದ್ದು ನಮಗೂ ಸಂತಸ ತಂದಿದೆ ಎಂದರು.ಶ್ರೀಶೈಲ ದೇವಸ್ಥಾನ ಟ್ರಸ್ಟ್ ಚೇರಮನ್ ಪಿ.ರಮೇಶ ನಾಯ್ಡು ಮಾತನಾಡಿ, ಈ ಬಾರಿ ಅಪಾರ ಪ್ರಮಾಣದಲ್ಲಿ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಮಲ್ಲಯ್ಯನ ದರ್ಶನಕ್ಕೆ ಬರುತ್ತಿದ್ದಾರೆ. ಈ ಗದ್ದಲವನ್ನು ಸರಿದೂಗಿಸಲು ದೇವಸ್ಥಾನ ಕಮೀಟಿ ಅನೇಕ ನಿಯಮಾವಳಿಗಳನ್ನು ಮಾಡಿಕೊಂಡಿದೆ. ಆದ್ದರಿಂದ ಭಕ್ತರು ತಾಳ್ಮೆಯಿಂದ ಶ್ರೀಶೈಲಕ್ಕೆ ಬಂದು ಸ್ವಚ್ಛ ಮನಸಿನಿಂದ ಮಲ್ಲಯ್ಯನ ದರ್ಶನ ಪಡೆಯಬೇಕು. ಮಾ.16 ರಿಂದ ಮಾ.20ರವರೆಗೆ ಸ್ಪರ್ಶದರ್ಶನ ಇರುವುದಿಲ್ಲ. ಈ ದಿನಗಳಲ್ಲಿ ಕೇವಲ ಅಲಂಕಾರ ದರ್ಶನ ಮಾತ್ರ ಇರುತ್ತದೆ. ಈ ಐದು ದಿನಗಳಲ್ಲಿ ಕೇವಲ ಅಲಂಕಾರ ದರ್ಶನ ಮಾಡಿದಾಗ ಪ್ರತಿ ದಿನಕ್ಕೆ 1.23 ಲಕ್ಷ ಜನ ದರ್ಶನ ಪಡೆಯುತ್ತಾರೆ. ಆದ್ದರಿಂದ ಈ ಸಂದರ್ಭದಲ್ಲಿ ಸ್ಪರ್ಶದರ್ಶನ ಇರುವುದಿಲ್ಲ ಎಂದು ತಿಳಿಸಿದರು.ಸಂಜೆ ಶ್ರೀಶೈಲ ದೇವಸ್ಥಾನದ ಪ್ರಧಾನ ವ್ಯವಸ್ಥಾಪಕರು ಹಾಗೂ ಅರ್ಚಕರ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ಭ್ರಮರಾಂಭಸಹಿತ ಶ್ರೀಮಲ್ಲಿಕಾರ್ಜುನ ದೇವರ ಕಲ್ಯಾಣ ಮಹೋತ್ಸವ ಜರುಗಿತು. ಹಿಂದು ಸಂಪ್ರದಾಯದ ಮಹತ್ತರ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಆಂಧ್ರ ಪ್ರದೇಶದ ಸುಕ್ಷೇತ್ರ ಶ್ರೀಶೈಲ ಮಲ್ಲಿಕಾರ್ಜುನ ದೇವರ ದರ್ಶನಕ್ಕೆ ಯುಗಾದಿ ಪ್ರಯುಕ್ತ ಸಾವಿರಾರು ಕಿ.ಮೀನಷ್ಟು ಪಾದಯಾತ್ರೆ, ವಾಹನಗಳಿಂದ ಜಾತ್ರೆಗೆ ತೆರಳುವ ಕರ್ನಾಟಕದ ಲಕ್ಷಾಂತರ ಭಕ್ತರಿಗೆ ಈ ವರ್ಷವೂ ಮಲ್ಲಿಕಾರ್ಜುನ ದೇವಾಲಯದಲ್ಲಿ ಸ್ಪರ್ಶಲಿಂಗ ದರ್ಶನವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಈ ವೇಳೆ ಕಾರ್ಯನಿರ್ವಾಹಕ ಅಭಿಯಂತರ ಶ್ರೀನಿವಾಸ ರಾವ್, ಹರಿದಾಸ, ಆರ್. ಮಲ್ಲಿಕಾರ್ಜುನ, ಸತ್ಯ ಬ್ರಹ್ಮಚಾರ್ಯ, ಸಂಗಮೇಶ ಕಾಲತಿಪ್ಪಿ, ಸೋಮು ಭುಯಾರ, ಪ್ರಕಾಶ ದಲಾಲ, ಗಜಾನನ ವಜ್ಜರಮಟ್ಟಿ ಸೇರಿದಂತೆ ಅನೇಕರಿದ್ದರು.
ಪ್ರತಿ ವರ್ಷದಂತೆ ನಡೆಯುವ ಎಲ್ಲ ಧಾರ್ಮಿಕ ಕಾರ್ಯಗಳು ನಡೆಯುತ್ತವೆ. ರಾಜ್ಯದ ಭಕ್ತರು ಯಾವುದೇ ಗದ್ದಲ ಮಾಡದೇ ಶಾಂತ ರೀತಿಯಿಂದ ಮಲ್ಲಯ್ಯನ ದರ್ಶನ ಮಾಡಿಕೊಂಡು ಹೋಗಬೇಕು. ಕಳೆದ ಬಾರಿ ನಡೆದ ಘಟನೆಗಳು ಯಾವತ್ತೂ ಮರುಕಳಿಸಬಾರದು.-ಶ್ರೀ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು, ಶ್ರೀಶೈಲ ಪೀಠದ ಜಗದ್ಗುರುಗಳು.