ಸರ್ಕಾರಿ ಮೆಡಿಕಲ್ ಕಾಲೇಜಿಗಾಗಿ ಆಗ್ರಹಿಸಿ ಹೋರಾಟ ಮಾಡುತ್ತಿದ್ದ ವೇಳೆ ಬಂಧಿಸಿದ ಆರು ಜನ ಹೋರಾಟಗಾರರ‌ನ್ನು ತಕ್ಷಣವೇ ಬಿಡುಗಡೆಗೊಳಿಸಬೇಕು ಹಾಗೂ 27ಜನ ಹೋರಾಟಗಾರರ‌ ಮೇಲೆ ಹಾಕಿರುವ ಪ್ರಕರಣವನ್ನು ಬೇಷರತ್ತಾಗಿ ಹಿಂಪಡೆಯಬೇಕು ಎಂದು ರೈತ ಮುಖಂಡ ಸಂಗಮೇಶ ಸಗರ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸರ್ಕಾರಿ ಮೆಡಿಕಲ್ ಕಾಲೇಜಿಗಾಗಿ ಆಗ್ರಹಿಸಿ ಹೋರಾಟ ಮಾಡುತ್ತಿದ್ದ ವೇಳೆ ಬಂಧಿಸಿದ ಆರು ಜನ ಹೋರಾಟಗಾರರ‌ನ್ನು ತಕ್ಷಣವೇ ಬಿಡುಗಡೆಗೊಳಿಸಬೇಕು ಹಾಗೂ 27ಜನ ಹೋರಾಟಗಾರರ‌ ಮೇಲೆ ಹಾಕಿರುವ ಪ್ರಕರಣವನ್ನು ಬೇಷರತ್ತಾಗಿ ಹಿಂಪಡೆಯಬೇಕು ಎಂದು ರೈತ ಮುಖಂಡ ಸಂಗಮೇಶ ಸಗರ ಆಗ್ರಹಿಸಿದರು.

ನಗರದ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ರೈತ ಸಂಘಗಳ‌ ಒಕ್ಕೂಟದಿಂದ ನಡೆದ ಸುದ್ದಿಗೋಷ್ಠಿ ಮಾತನಾಡಿದ ಅವರು, ಜೈಲಿನಲ್ಲಿರುವ ಹೋರಾಟಗಾರರ ಪ್ರಕರಣದ ವಿಚಾರಣೆಯು ಜ.13ರಂದು ನಡೆಯಲಿದೆ. ಅಂದು ಜಾಮೀನು ಸಿಗುವ ನಿರೀಕ್ಷೆಯಿದೆ. ಅವರಿಗೆ ಜಾಮೀನು ಕೊಡಿಸುವ ಹಾಗೂ ಬೇಷರತ್ತಾಗಿ ಕೇಸ್ ವಾಪಸ್ ಪಡೆಯುವ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ವಿಶೇಷ ಮುತವರ್ಜಿ ವಹಿಸಬೇಕು. ಆ‌ ಮೂಲಕ 6 ಹೋರಾಟಗಾರರನ್ನು ಬಿಡುಗಡೆಗೊಳಿಸಬೇಕು ಮತ್ತು 27 ಜನರ ವಿರುದ್ಧದ ಕೇಸ್ ವಾಪಸ್ ಪಡೆಬೇಕು. ಅಕಸ್ಮಾತ ಇದಕ್ಕೆ ಸಚಿವರು ಹಾಗೂ ಸಂಬಂಧಿತ ಅಧಿಕಾರಿಗಳು ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಹಳ್ಳಿ ಹಳ್ಳಿಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲೆಯ ಬಡಜನರ ಮಕ್ಕಳ ಶೈಕ್ಷಣಿಕ ಅನುಕೂಲಕ್ಕಾಗಿ ರೈತರಪರ,‌ ಪ್ರಗತಿಪರ, ಕಾರ್ಮಿಕ ಸಂಘಟನೆಗಳು ಸೇರಿದಂತೆ 200ಕ್ಕೂ ಅಧಿಕ ವಿವಿಧ ಸಂಘಟನೆಗಳ ಒಕ್ಕೂಟದಿಂದ ಸರ್ಕಾರಿ ಮೆಡಿಕಲ್ ಕಾಲೇಜಿಗಾಗಿ ಹೋರಾಟ ಮಾಡಲಾಗುತ್ತಿತ್ತು. ಜ.9ರಂದು ಸಿಎಂ ಬರ್ತಾರೆ ಎಂದಾಗ ಸರ್ಕಾರಿ ಮೆಡಿಕಲ್ ಘೋಷಿಸಬೇಕು ಎಂದು ಒತ್ತಾಯಿಸಿದ್ದೆವು. ಸುದ್ದಿಗೋಷ್ಠಿ ಮೂಲಕ ಅಧಿಕೃತ ಮಾಹಿತಿ ನೀಡಿದ ಬಳಿಕವೇ ಜಿಲ್ಲಾ ಉಸ್ತುವಾರಿ ಸಚಿವರ ಗೃಹ ಕಚೇರಿಗೆ ತೆರಳಿ ಮನವಿ ಸಲ್ಲಿಸಲು ಹೋಗಲಾಗಿತ್ತು. ಆ ವೇಳೆ ಕಾಣದ ಕೈಗಳು ಕೆಲಸ ಮಾಡಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ಕೈವಾಡವಿರಬಹುದು. ಪೊಲೀಸರು ಸಹ ತಮ್ಮ ಕರ್ತವ್ಯ ಮರೆತು ವರ್ತಿಸಿದ್ದಾರೆ. ಸ್ವಾಮೀಜಿಗಳ ಮೇಲೆ ಆಕ್ರಮಣ ಮಾಡಿದ್ದಾರೆ. ಹಗಲುರಾತ್ರಿ 106 ದಿನಗಳ ವರೆಗೆ ಬಿಸಿಲು, ಚಳಿ ಎನ್ನದೆ ಹೋರಾಡುತ್ತಿದ್ದರು. ಅದನ್ನು ಹತ್ತಿಕ್ಕಲು ಪ್ಲಾನ್ ಮಾಡಿ ಟೆಂಟ್ ಕಿತ್ತಿಸಲಾಗಿದೆ.‌ ನಮ್ಮ ಹೋರಾಟಗಾರರು ಜೈಲಿನಲ್ಲಿರುವುದರಿಂದ ಸಿಎಂ‌ ಸರ್ಕಾರಿ ಮೆಡಿಕಲ್ ಕಾಲೇಜು ಘೋಷಿಸಿದರೂ ನಾವು ಸಂಭ್ರಮಾಚರಣೆ ಮಾಡಿಲ್ಲ ಎಂದರು.

ಮುಖಂಡ ಗುರುರಾಜ ಪಡಶೆಟ್ಟಿ ಮಾತನಾಡಿ, ಪಿಪಿಪಿ ವಿರೋಧಿಸಿ 106 ದಿನಗಳಿಂದ ಹೋರಾಟ ಮಾಡುತ್ತಿದ್ದ ಹೋರಾಟಗಾರರನ್ನು ಜೈಲಿನಲ್ಲಿರಿಸಿದ್ದಾರೆ. ಸಿಎಂ ಅವರು ಸರ್ಕಾರಿ ಮೆಡಿಕಲ್ ಕಾಲೇಜು ಘೋಷಿಸಿದ್ದು ಸಂತಸ ತಂದಿದೆ. ಆದರೆ ಅದಕ್ಕಾಗಿ ಹೋರಾಡಿದ ಹೋರಾಟಗಾರರನ್ನು ಬೇಷರತ್ತಾಗಿ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡ ವಿಠ್ಠಲ ಬಿರಾದಾರ ಮಾತನಾಡಿ, ಪಿಪಿಪಿ ಮಾದರಿ ಕಾಲೇಜು ಬೇಡವೆಂದು ಹೋರಾಟ ಮಾಡುತ್ತಿದ್ದವರು ಜೈಲಿನಲ್ಲಿದ್ದಾರೆ. ಸಿಎಂ ಜಿಲ್ಲೆಗೆ ಬರುತ್ತಾರೆ ಎಂದಾಗ ಉಸ್ತುವಾರಿ ಸಚಿವರಿಗೆ ಮನವಿ ಕೊಡಲು ಹೋಗಿದ್ದ ವೇಳೆ ಹೀಗೆಲ್ಲ ಅಚಾತುರ್ಯಗಳು ನಡೆದಿವೆ. ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲದೆ ಜಿಲ್ಲೆಯ ಜನತೆಯ ಅನುಕೂಲಕ್ಕಾಗಿ ಹೋರಾಡುತ್ತಿದ್ದವರನ್ನು ಬಂಧಿಸಲಾಗಿದೆ. ಈ ಘಟನೆಯಲ್ಲಿ ಬಂಧಿಸಿದ ಹೋರಾಟಗಾರರನ್ನು ಹಿಡುಗಡೆಗೊಳಿಸಬೇಕು, ಅವರ ಮೇಲೆ ಹಾಕಿರುವ ಕೇಸುಗಳನ್ನು ವಾಪಸ್ ಪಡೆಯಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಸುಭಾಷ ಹಿಟ್ನಳ್ಳಿ, ಮಹಾದೇವ ಬನಸೋಡೆ, ಸಂಗಮೇಶ ಜಮಖಂಡಿ, ವಸಂತ ಭೈರಾಮಡಿ, ಸಂಗಪ್ಪ ಠಕ್ಕೆ, ರಾಮನಗೌಡ ಹಾದಿಮನಿ, ಶ್ರೀನಿವಾಸ ಗೊಟಗುಣಕಿ ಇದ್ದರು.