ಬೇಸಿಗೆಯಲ್ಲೂ ಕುಡಿವ ನೀರಿನ ಸಮಸ್ಯೆ ಆಗದಿರಲಿ: ಸಚಿವ ಶಿವರಾಜ್ ತಂಗಡಗಿ

KannadaprabhaNewsNetwork | Published : Feb 24, 2024 2:38 AM

ಸಾರಾಂಶ

ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ಮೂಲಕ ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳಿಗೆ ಗಣೇಕಲ್ ಜಲಾಶಯ ಹಾಗೂ ಇತರೆ ಕೆರೆ ಕಟ್ಟೆಗಳಿಗೆ ಮಾ.5ರಿಂದ ಮಾ.16ರವರೆಗೆ 1200 ಕ್ಯೂಸೆಕ್ ನಂತೆ ಕುಡಿಯುವ ನೀರು ಹರಿಸಲಾಗುತ್ತದೆ/

ಕೊಪ್ಪಳ: ಬಿರು ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗದಂತೆ ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಗಳಿಗೆ ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಚಿವರೂ ಆದ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ್ ತಂಗಡಗಿ ಹೇಳಿದರು.ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ನಡೆದ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಸದ್ಯಕ್ಕೆ ಜಲಾಶಯದಲ್ಲಿ 9.04 ಟಿಎಂಸಿ ನೀರಿದೆ. ಇದರಲ್ಲಿ ಡೆಡ್‌ ಸ್ಟೋರೇಜ್ 2 ಟಿಎಂಸಿ, ಈ ಪೈಕಿ ರಾಜ್ಯದ ಪಾಲು 1.860 ಟಿಎಂಸಿ, ಆಂಧ್ರಪ್ರದೇಶದ ಪಾಲು 2.813 ಟಿಎಂಸಿ ಇದೆ. ಈ ಹಿನ್ನೆಲೆಯಲ್ಲಿ ಜಲಾಶಯದಲ್ಲಿನ ನೀರಿನ ಲಭ್ಯತೆ ಆಧಾರಿಸಿ ನಾಲ್ಕು ಜಿಲ್ಲೆಗಳಿಗೆ ಕುಡಿಯುವ ನೀರು ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ಮೂಲಕ ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳಿಗೆ ಗಣೇಕಲ್ ಜಲಾಶಯ ಹಾಗೂ ಇತರೆ ಕೆರೆ ಕಟ್ಟೆಗಳಿಗೆ ಮಾ.5ರಿಂದ ಮಾ.16ರವರೆಗೆ 1200 ಕ್ಯೂಸೆಕ್ ನಂತೆ ಕುಡಿಯುವ ನೀರು ಹರಿಸಲಾಗುತ್ತದೆ ಎಂದರು.ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆ ಮೂಲಕ ಬಳ್ಳಾರಿ ಜಿಲ್ಲೆಗೆ ಹಾಗೂ ಇತರೆ ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳಿಗೆ ಮಾ.10ರಿಂದ ಮಾ.20ರವರೆಗೆ 100 ಕ್ಯೂಸೆಕ್ಸ್ ನಂತೆ ಮತ್ತು ಅಗತ್ಯಕ್ಕೆ ಅನುಗುಣವಾಗಿ ಮಾ.21ರಿಂದ ಮಾ.31ರವರೆಗೆ 100 ಕ್ಯೂಸೆಕ್ ನಂತೆ ಕುಡಿಯುವ ನೀರಿನ ಯೋಜನೆಗೆ ಹಾಗೂ ಕೆರೆ ಕಟ್ಟೆಗಳನ್ನು ತುಂಬಿಸಲಾಗುವುದು ಎಂದರು.ರಾಯ ಬಸವಣ್ಣ ಕಾಲುವೆಯಿಂದ ವಿಜಯನಗರ ಜಿಲ್ಲೆಗೆ ಹಂಚಿಕೆಯಾದ 0.260 ಟಿಎಂಸಿ ನೀರಿನಲ್ಲಿ ಮಾ.1ರಿಂದ ಮೇ 30ರವರೆಗೆ 100 ಕ್ಯೂಸೆಕ್ಸ್ ನಂತೆ ಆನ್ ಆಫ್ ನಂತೆ ಕುಡಿಯುವ ನೀರು ಒಳಗೊಂಡು ಹರಿಸಬಹುದೆಂದು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.ಕುಡಿಯುವ ನೀರಿಗೆ ಮಾತ್ರ ಆದ್ಯತೆ ಕೊಟ್ಟು ಜನರಿಗೆ ನೀರು ಒದಗಿಸಲು ತೀರ್ಮಾನಿಸಲಾಗಿದೆ. ಈ ವೇಳೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ನಿಷೇಧಾಜ್ಞೆ ಮೂಲಕ ನೀರು ಹರಿಸಲಾಗುವುದು ಎಂದು ಸಚಿವ ಶಿವರಾಜ್ ತಂಗಡಗಿ ತಿಳಿಸಿದರು.ಜಿಲ್ಲಾಧಿಕಾರಿಗಳಿಗೆ ಸೂಚನೆ:ಈ ಸಮಯದಲ್ಲಿ ಜಿಲ್ಲಾಧಿಕಾರಿಗಳು ಕಲಂ 144ನ್ನು ಅಳವಡಿಸಿ ಸೂಕ್ತ ಪೊಲೀಸ್ ಬಂದೋಬಸ್ತ್ ಪಡೆದು ಕುಡಿಯುವ ನೀರಿನ ಕೆರೆ ಕಟ್ಟೆಗಳನ್ನು ತುಂಬಿಸಿಕೊಳ್ಳಲು ಸಚಿವರು ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಸಚಿವರಾದ ಶರಣ್ ಪ್ರಕಾಶ್ ಪಾಟೀಲ್, ಬಿ.ನಾಗೇಂದ್ರ, ಶಾಸಕರಾದ ಎಚ್.ಆರ್. ಗವಿಯಪ್ಪ, ಹಂಪನಗೌಡ ಬಾದರ್ಲಿ, ನಾರಾ ಭರತ್ ರೆಡ್ಡಿ ಉಪಸ್ಥಿತರಿದ್ದರು.ಪಂಪ್ ಸೆಟ್ ಮೂಲಕ ನೀರು ಬಳಸಿದರೆ ಕ್ರಮ:ಕೆಲವರು ಪಂಪ್ ಸೆಟ್ ಮೂಲಕ ಅಕ್ರಮವಾಗಿ ನೀರು ಪಡೆಯುತ್ತಾರೆ ಎಂದು ರೈತ ಮುಖಂಡರು ನೀರಾವರಿ ಸಲಹಾ ಸಮಿತಿ ಅಧ್ಯಕ್ಷರ ಗಮನಕ್ಕೆ ತಂದರು. ಇದರಿಂದ ಸಿಡಿಮಿಡಿಗೊಂಡ ಶಿವರಾಜ್ ತಂಗಡಗಿ, ಕುಡಿಯಲು ಮಾತ್ರ ನೀರು ಬಳಕೆಯಾಗಬೇಕು. ಅಕ್ರಮವಾಗಿ ನೀರು ಪಡೆದರೆ ಅಂತಹವರ ವಿರುದ್ಧ ಕ್ರಮಕೈಗೊಳ್ಳುವಂತೆ ಸಭೆಯಲ್ಲಿದ್ದ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

Share this article