ಹರಪನಹಳ್ಳಿ: ಪಟ್ಟಣದ ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೇರಿದೆ. ಇದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಮೂಲಕ ನಗರದ ಅಭಿವೃದ್ಧಿಗೆ ಸರ್ವರು ಸಹಕಾರ ನೀಡಬೇಕೆಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.
ಪಟ್ಟಣದ ನಾಗರಿಕರು ಸಕಾಲದಲ್ಲಿ ತೆರಿಗೆ ಪಾವತಿಸುವ ಮೂಲಕ ನಗರದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ನಗರಸಭೆ ಹಿರಿಯ ಸದಸ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೇರಿದ್ದು ಜನರ ಬಹುದಿನಗಳ ಬೇಡಿಕೆ ಈಡೇರಿದೆ, ಮಾಜಿ ಶಾಸಕ ದಿ.ಇಜಾರಿ ಶಿರಪ್ಪ ಅವರ ಕಾಲದಲ್ಲಿ ಹರಪನಹಳ್ಳಿ ಪಟ್ಟಣ ಪಂಚಾಯ್ತಿಯಾಗಿ ಸ್ಥಾಪನೆಯಾಗಿತ್ತು, ನಂತರ ಪುರಸಭೆಯಾಗಿ ಮಾರ್ಪಾಡಾಯಿತು, ಈಗ ನಮ್ಮ ಶಾಸಕರ ಪರಿಶ್ರಮದಿಂದ ನಗರಸಭೆಯಾಗಿದೆ ಎಂದರು.ಮಾಜಿ ಶಾಸಕ ದಿ.ಎಂ.ಪಿ.ರವೀಂದ್ರ ಹರಪನಹಳ್ಳಿ ತಾಲೂಕನ್ನು 371 ಜೆ.ವ್ಯಾಪ್ತಿಗೆ ಸೇರಿಸಿದ ಹಿನ್ನೆಲೆಯಲ್ಲಿ ಇಂದು ಪಟ್ಟಣ ಸೇರಿದಂತೆ ತಾಲೂಕು ಅಭಿವೃದ್ಧಿ ದಿಕ್ಕಿನಲ್ಲಿ ಸಾಗುತ್ತಿದೆ, ಎಂ.ಪಿ.ಲತಾ ಮಲ್ಲಿಕಾರ್ಜುನ ಸಹ ಜನ ಸೇವೆಯ ಮೂಲಕ ಜನರ ಮನಸ್ಸು ಗೆದ್ದು ಶಾಸಕರಾಗಿ ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದರು.
ನಗರಸಭೆ ಸದಸ್ಯ ಮಾಜಿ ಅಧ್ಯಕ್ಷ ಎಚ್.ಎಂ.ಅಶೋಕ ಮಾತನಾಡಿ ನನ್ನ ಅವಧಿಯಲ್ಲಿ ಸಾಮಾನ್ಯ ಸಭೆಯಲ್ಲಿ ನಗರಸಭೆ ಮಾಡಲು ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು, ಈಗ ಎಂ.ಪಿ.ಲತಾ ಅವರು ಇದನ್ನು ಮುಂದುವರೆಸಿ ನಗರಸಭೆ ಮಾಡಲು ಶ್ರಮಿಸಿದ್ದಾರೆ, ಎಲ್ಲರೂ ನಗರದ ಅಭಿವೃದ್ಧಿ ಹಾಗೂ ಸೌಂದರ್ಯಿಕರಣಕ್ಕೆ ಶ್ರಮಿಸೋಣ ಎಂದರು.
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ವೆಂಕಟೇಶ ಮಾತನಾಡಿ ನಗರಸಭೆ ಆಗಲು ಶಾಸಕರ ಪಾತ್ರ ತುಂಬಾ ಇದೆ ಎಂದರು.
ನಗರಸಭೆ ಪೌರಾಯುಕ್ತೆ ರೇಣುಕಾ ಎಸ್.ದೇಸಾಯಿ, ಸದಸ್ಯರಾದ ಲಾಟಿ ದಾದಾಪೀರ್, ಉದ್ದಾರ ಗಣೇಶ, ಮಂಜುನಾಥ ಇಜಂತಕರ್, ಭರತೇಶ, ಜಾಕೀರ ಹುಸೇನ್, ಜಾವೀದ್, ವಿನಯ್, ರೊಕ್ಕಪ್ಪ, ಕಿರಣ್, ಸುಮಾ, ಭೀಮವ್ವ, ಹನುಮಕ್ಕ, ಲಕ್ಕಮ್ಮ, ಸಹಿರಾಬಾನು, ವಸಂತಪ್ಪ, ಗುಡಿ ನಾಗರಾಜ, ಹೇಮಣ್ಣ ಸಲೀಂ ಸೇರಿದಂತೆ ಸಿಬ್ಬಂದಿ ಸಾರ್ವಜನಿಕರು ಇದ್ದರು.