- ಕೊಲೆ ಖಂಡಿಸಿ ಪ್ರತಿಭಟನೆಯಲ್ಲಿ ಎಂ.ಆರ್.ಮಹೇಶ್ ಮನವಿ । ಸರ್ಕಾರದಿಂದಲೂ ನೆರವು ನೀಡಲು ಒತ್ತಾಯ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ರಾಜಕೀಯವಾಗಿ ಗ್ಯಾರಂಟಿ ನೀಡುವ ಸರ್ಕಾರ ರಾಜ್ಯದ ಮಹಿಳೆಯರು, ಯುವತಿಯರಿಗೆ ಅವರ ಜೀವದ ಯಾವುದೇ ಗ್ಯಾರಂಟಿ ನೀಡುವಲ್ಲಿ ವಿಫಲವಾಗಿದೆ ಎಂದು ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳ ಸ್ವಾಮಿ ವಿವೇಕಾನಂದ, ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ತಾಲೂಕು ಅಧ್ಯಕ್ಷ ಎಂ.ಆರ್.ಮಹೇಶ್ ದೂರಿದರು.ಸ್ವಾಮಿ ವಿವೇಕಾನಂದ, ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಹಾಗೂ ಅವಳಿ ತಾಲೂಕುಗಳ ಗಂಗಾಮತ ಸಮಾಜ ವತಿಯಿಂದ ಸೋಮವಾರ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ತಾಲೂಕು ಕಚೇರಿವರೆಗೆ ನಡೆಸಿದ ಬೃಹತ್ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ತಾಲೂಕು ಕಚೇರಿಯಲ್ಲಿ ಉಪ ತಹಸೀಲ್ದಾರ್ ಸುರೇಶ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ನೊಂದ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಮುಖಂಡ ಆರಕರೆ ಎ.ಬಿ ಹನುಮಂತಪ್ಪ ಅವರು ಮಾತನಾಡಿ, ಹುಬ್ಬಳಿಯಲ್ಲಿ ನೇಹಾ ಹಿರೇಮಠ ಹತ್ಯೆ ಪ್ರಕರಣ ಮಾಸುವ ಮುನ್ನವೇ ಒಂದೇ ತಿಂಗಳಲ್ಲಿ ಮತ್ತೊಬ್ಬ ಯುವತಿಯ ಬರ್ಬರ ಹತ್ಯೆಯಾಗಿರುವುದು ಇಡೀ ರಾಜ್ಯವೇ ತಲೆ ತಗ್ಗಿಸುವಂತಾಗಿದೆ ಅಂಜಲಿ ಅಂಬಿಗೇರ ಎಂಬ ಬಡ ಯುವತಿಯನ್ನು ಮೇ 15ರಂದು ಚಾಕುವಿನಿಂದ ಇರಿದು ಹತ್ಯೆಗೈಯಲಾಗಿದೆ. ಈ ಆರೋಪಿಗೆ ಗಲ್ಲುಶಿಕ್ಷೆ ವಿಧಿಸಬೇಕು. ಹತ್ಯೆಯಾದ ಯುವತಿ ಅಂಜಲಿ ಅಂಬಿಗೇರ ಅವರ ಕುಟುಂಬಕ್ಕೆ ಕೂಡ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಇಂತಹ ದುರ್ಘಟನೆಗಳು ಸಂಭವಿಸದಂತೆ ಪೊಲೀಸ್ ಮತ್ತು ಕಾನೂನು ವ್ಯವಸ್ಥೆಗಳನ್ನು ಬಲಿಷ್ಠಗೊಳಿಸಬೇಕು ಎಂದು ಒತ್ತಾಯಪಡಿಸಿದರು.
- - - -20ಎಚ್.ಎಲ್.ಐ1: