ಗಣೇಶ ಚತುರ್ಥಿ ಪರಿಸರ ಸ್ನೇಹಿಯಾಗಿರಲಿ: ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ

KannadaprabhaNewsNetwork |  
Published : Aug 21, 2025, 02:00 AM IST
ಜಿಲ್ಲಾಧಿಕಾರಿ ಸಭೆ ನಡೆಸಿದರು  | Kannada Prabha

ಸಾರಾಂಶ

ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವಾಗ ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಮಾತ್ರ ಪ್ರತಿಷ್ಠಾಪಿಸಬೇಕು.

ಕಾರವಾರ: ಗಣೇಶ ಚತುರ್ಥಿ ಹಬ್ಬವನ್ನು ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಮುಕ್ತವಾಗಿ ಹಾಗೂ ಪರಿಸರ ಸ್ನೇಹಿಯಾಗಿ ಮತ್ತು ಶಾಂತಿಯುತವಾಗಿ ಆಚರಿಸುವ ನಿಟ್ಟಿನಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಪರಿಸರ ಇಲಾಖೆ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ನಿರ್ದೇಶನ ನೀಡಿದರು.

ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವಾಗ ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಮಾತ್ರ ಪ್ರತಿಷ್ಠಾಪಿಸಬೇಕು. ಪಿಒಪಿ, ರಾಸಾಯನಿಕ ಬಣ್ಣಗಳನ್ನು ಬಳಸಿರುವ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಅವಕಾಶವಿಲ್ಲ. ಈ ಬಗ್ಗೆ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡುವಾಗ ಕಡ್ಡಾಯವಾಗಿ ಈ ನಿಯಮಗಳನ್ನು ಪಾಲಿಸುವ ಕುರಿತು ಸೂಚನೆ ನೀಡುವಂತೆ ಮತ್ತು ಪ್ರತಿಷ್ಠಾಪನೆ ನಂತರ ಈ ಬಗ್ಗೆ ಪರಿಶೀಲನೆ ನಡೆಸುವಂತೆ ನಗರ ಸ್ಥಳೀಯ ಸಂಸ್ಥೆ ಮತ್ತು ಪರಿಸರ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಗಣೇಶ ಪ್ರತಿಷ್ಠಾಪನೆ ಸ್ಥಳದಲ್ಲಿ ಮತ್ತು ವಿಸರ್ಜನೆ ಸಮಯದಲ್ಲಿ ಯಾವುದೇ ರೀತಿಯ ಏಕಬಳಕೆಯ ಪ್ಲಾಸ್ಟಿಕ್ ವಸ್ತುಗಳ ಬಳಕೆ ಆಗದಂತೆ ನೋಡಿಕೊಳ್ಳಬೇಕು. ಬಟ್ಟೆಯಿಂದ ತಯಾರಿಸಿದ ಬ್ಯಾನರ್ ಬಳಸಬೇಕು. ಪ್ಲೆಕ್ಸ್ ಗಳನ್ನು ಬಳಸಬಾರದು. ಪೆಂಡಾಲ್ ಗಳ ನಿರ್ಮಾಣ ಮತ್ತು ಅಲಂಕಾರದಲ್ಲಿಯೂ ಪ್ಲಾಸ್ಟಿಕ್ ಬಳಕೆ ಮಾಡಬಾರದು ಎಂದರು.

ಗಣೇಶ ವಿಸರ್ಜನೆ ಸಂದರ್ಭದಲ್ಲಿ ಮತ್ತು ಪ್ರತಿಷ್ಠಾಪನೆ ಪ್ರದೇಶದಲ್ಲಿ ವಿದ್ಯುತ್ ಲೈನ್‌ಗಳ ಸಂಪರ್ಕದಿಂದ ಯಾವುದೇ ಅನಾಹುತಗಳಾಗದಂತೆ ಹೆಸ್ಕಾಂನಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದ ಜಿಲ್ಲಾಧಿಕಾರಿ, ಸಾರ್ವಜನಿಕರಿಗೆ ಪ್ರಸಾದದ ರೂಪದಲ್ಲಿ ವಿತರಿಸುವ ಆಹಾರ ಪದಾರ್ಥಗಳ ಬಗ್ಗೆ ಆಯೋಜಕರು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದರು.

ಗಣೇಶ ಮೂರ್ತಿಗಳನ್ನು ನಗರ ಸ್ಥಳೀಯ ಸಂಸ್ಥೆಗಳು ಗುರುತಿಸಿರುವ ಸ್ಥಳದಲ್ಲಿಯೇ ವಿಸರ್ಜನೆ ಮಾಡಬೇಕು. ಆ ಪ್ರದೇಶದಲ್ಲಿ ತ್ಯಾಜ್ಯ ಉತ್ಪತ್ತಿಯಾಗದಂತೆ ಸ್ಥಳೀಯಾಡಳಿತಗಳು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡುವಾಗ ಸಿಂಗಲ್ ವಿಂಡೋ ವ್ಯವಸ್ಥೆಯಡಿ ಎಲ್ಲ ಅಗತ್ಯ ಅನುಮತಿಗಳನ್ನು ನೀಡುವಂತೆ ತಿಳಿಸಿದರು.

ಜಿಲ್ಲೆಯಲ್ಲಿ ಇದುವರೆಗೆ 1467 ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಅನುಮತಿ ನೀಡಲಾಗಿದೆ. ಆಯೋಜಕರು ಜಿಲ್ಲಾಡಳಿತ ಸೂಚಿಸುವ ಎಲ್ಲ ಸೂಚನೆಗಳನ್ನು ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಪಾಲಿಸಬೇಕು. ಆಸ್ಪತ್ರೆ, ಶಾಲೆ, ನ್ಯಾಯಾಲಯ ಇರುವ ಪ್ರದೇಶದಲ್ಲಿ ಧ್ವನಿವರ್ಧಕ ಬಳಸಬಾರದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಗಣೇಶ ಪ್ರತಿಷ್ಠಾಪನೆ ಸ್ಥಳದಲ್ಲಿ ಸಿಸಿಟಿವಿ ಅಳವಡಿಸಬೇಕು, ಬೆಂಕಿ ಅವಗಡಗಳು ಸಂಭವಿಸಿದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಪೆಂಡಾಲ್‌ಗಳ ಬಳಿ ಸ್ವಯಂ ಸೇವಕರನ್ನು ನಿಯೋಜಿಸಬೇಕು. ವಿಸರ್ಜನೆ ಸಂದರ್ಭದಲ್ಲಿ ಈಜು ಬಾರದೇ ಇರುವವರನ್ನು ಬಳಸಿಕೊಳ್ಳಬಾರದು. ಪೊಲೀಸ್ ಇಲಾಖೆಯ ಮಾರ್ಗಸೂಚಿಯಂತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಬೇಕು.

ಧ್ವನಿವರ್ಧಕಗಳ ಬಳಕೆಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಶಬ್ದ ಮಾಡಬಾರದು. ಡಿಜೆಗಳ ಬಳಕೆ ಮಾಡುವಂತಿಲ್ಲ. ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಧ್ವನಿವರ್ಧಕ ಬಳಸುವಂತಿಲ್ಲ. ರಾತ್ರಿ 8ರಿಂದ 10 ರವರೆಗೆ ಹಸಿರು ಪಟಾಕಿಗಳನ್ನು ಮಾತ್ರ ಬಳಸಬಹುದು. ಯಾವುದೇ ಹಂತದಲ್ಲೂ ಕಾನೂನು ಉಲ್ಲಂಘನೆ ಮತ್ತು ಶಾಂತಿ ಸುವ್ಯವಸ್ಥೆಗೆ ತೊಂದರೆ ಆಗದಂತೆ ಶಾಂತಿಯುತವಾಗಿ ಗಣೇಶ ಹಬ್ಬವನ್ನು ಅಚರಣೆ ಮಾಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ತಿಳಿಸಿದರು.

ಜಿಪಂ ಸಿಇಒ ಡಾ.ದಿಲೀಷ್ ಶಶಿ, ಜಿಲ್ಲಾ ಪರಿಸರ ಅಧಿಕಾರಿ ಸಂತೋಷ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಜಹೀರ್ ಅಬ್ಬಾಸ್ ಹಾಗೂ ವಿವಿಧ ಇಲಾಖಾಧಿಕಾರಿಗಳು ಇದ್ದರು.

PREV

Recommended Stories

‘ಪಿಒಪಿ ಗಣಪ ಬಳಸಲ್ಲ’ ಮುಚ್ಚಳಿಕೆ ಬರೆಸಿ ಉತ್ಸವಕ್ಕೆ ಒಪ್ಪಿಗೆ: ಖಂಡ್ರೆ
ಕರ್ನಾಟಕದಲ್ಲಿ ಅಡಕೆ ಕ್ಯಾನ್ಸರ್‌ ಕಾರಕವೇ? : ಶೀಘ್ರ ವರದಿಗೆ ಕೃಷಿ ಸಚಿವ ಚೌಹಾಣ್ ಸೂಚನೆ