ಶಿವಮೊಗ್ಗ: ನಮ್ಮೊಳಗಿನ ಆಂತರಿಕ ಶಕ್ತಿ ನಮ್ಮನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತದೆ. ಆದ್ದರಿಂದ ಹೆಣ್ಣು ಮಕ್ಕಳು ತಮ್ಮ ಶಕ್ತಿ ಅರಿತು ಇತರೆ ಹೆಣ್ಣುಮಕ್ಕಳ ಶಕ್ತಿಯನ್ನು ಅರ್ಥ ಮಾಡಿಕೊಂಡು ಮುಂದೆ ಬರಬೇಕು ಎಂದು ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಕೆ.ಎಂ.ಶೈನಿ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಬುಧವಾರ ನೆಹರೂ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪ್ರಸ್ತುತ ಹೆಣ್ಣು ಕಟ್ಟುಪಾಡು, ಕಟ್ಟಳೆಗಳನ್ನು ಮುರಿದು ಮುಂದೆ ಬಂದಿದ್ದಾಳೆ. ಪುರುಷರು ನಿರ್ವಹಿಸುವಂತಹ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಇಂದು ಹೆಣ್ಣುಮಕ್ಕಳಿದ್ದಾರೆ. ಜೊತೆಗೆ ಅವಳೆಡೆಗಿನ ಸಮಾಜದ ನಿರೀಕ್ಷೆಗಳು, ಪಿತೃಪ್ರಧಾನ ಸಮಾಜದ ರೂಢಿಗಳು ಹಾಗೂ ಸಾಕಷ್ಟು ಇತರೆ ಸವಾಲುಗಳನ್ನು ಎದುರಿಸುತ್ತಾ ಬಂದಿದ್ದಾಳೆ. ಹೆಣ್ಣು ಎಷ್ಟೇ ಯಶಸ್ಸು ಸಾಧಿಸಿದ್ದರೂ ಕುಟುಂಬ, ಕಾಳಜಿ ವಿಷಯ ಬಂದಾಗ ತನ್ನ ಆಸೆಗಳನ್ನು ತ್ಯಾಗ ಮಾಡಿ ರಾಜೀ ಮಾಡಿಕೊಳ್ಳಲೇಬೇಕಾಗುತ್ತದೆ ಎಂದರು.ಹೆಣ್ಣುಮಕ್ಕಳು ಕ್ಲೇಷಗಳನ್ನು ಕಳೆದು ಮನಸ್ಥಿತಿ ಮತ್ತು ಆಲೋಚನೆ ಬದಲಾಯಿಸಿಕೊಂಡಲ್ಲಿ ಉತ್ತಮ ಬದಲಾವಣೆ ಸಾಧ್ಯವಾಗುತ್ತದೆ ಎಂದ ಅವರು, ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮಲ್ಲಿನ ಕೌಶಲ್ಯವನ್ನು, ಶಕ್ತಿಯನ್ನು ಹೆಚ್ಚಿಸುತ್ತದೆ. ಬಲವಾದ ಸಾಮಾಜಿಕ ನೆಟ್‌ವರ್ಕ್ ಒದಗಿಸುತ್ತದೆ. ಮಾತಿಗೆ ಒಳ್ಳೆಯ ಶಕ್ತಿ ಇದ್ದು ನಾವಾಡುವ ಮಾತು ಸತ್ವ ಮತ್ತು ತತ್ವಭರಿತವಾಗಿರಬೇಕು. ವೈಷಮ್ಯ, ದ್ವೇಷ, ಪ್ರಚೋದನೆಗೀಡು ಮಾಡದೇ ಸೌಹಾರ್ಧಯುತವಾಗಿರಬೇಕು. ಮಹಿಳೆಯರಾದ ನಾವೆಲ್ಲ ನಮ್ಮ ಸಾಧನೆಗಳನ್ನು ಆಚರಿಸೋಣ, ಒಬ್ಬರಿಗೊಬ್ಬರು ಬೆಂಬಲಿಸೋಣ, ಕರ್ತವ್ಯ ಪಾಲನೆಯೊಂದಿಗೆ ಸಬಲೀಕರಣಗೊಳ್ಳೋಣ ಎಂದು ಕರೆ ನೀಡಿದರು.ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಧ್ಯಾ ಕಾವೇರಿ.ಕೆ ಮಾತನಾಡಿ, ಈ ವರ್ಷದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಘೋಷವಾಕ್ಯ ‘ಕ್ರಿಯೆಗಳ ವೇಗವನ್ನು ವರ್ಧಿಸಿ’ ಎಂಬುದಾಗಿದ್ದು, ನಾವು ಸಮಾನತೆಯ ಕ್ರಿಯೆಗಳ ವೇಗವನ್ನು ವರ್ಧಿಸಬೇಕು. ಇಡೀ ಸಮಾಜ ಸಕ್ರಿಯವಾಗಿ ಪಾಲ್ಗೊಂಡು ಸಮಾನತೆಯನ್ನು ಸಾಧಿಸಬೇಕು. ಸಾಧನೆಯೊಂದೇ ಸಾಲದು, ಇದರ ವೇಗವನ್ನು ವರ್ಧಿಸಬೇಕು ಎಂದರು.
ಕುವೆಂಪು ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರದ ಉಪನ್ಯಾಸಕಿ ಡಾ.ಹಸೀನಾ ಮಾತನಾಡಿ, ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ಕ್ಲೇಷ ಮುಕ್ತರಾಗಿ ನಳನಳಿಸುತ್ತಾ ಇರುತ್ತಾರೆ. ಆದ್ದರಿಂದ ಹೆಣ್ಣುಮಕ್ಕಳು ಹೆಚ್ಚಾಗಿ ಕ್ರೀಡೆಯಂತಹ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು ಎಂದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಶಿರೇಖಾ, ಜಿಪಂ ಸಹಾಯಕ ಕಾರ್ಯದರ್ಶಿ ತಾರಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ರೇಖ್ಯಾನಾಯ್ಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್, ನೆಹರು ಯುವ ಕೇಂದ್ರದ ಯುವ ಅಧಿಕಾರಿ ಉಲ್ಲಾಸ್ ಮತ್ತಿತರರಿದ್ದರು.