ಯಲ್ಲಾಪುರ:
ತಾಲೂಕಿನ ಕುಂದರಗಿ ಗ್ರಾಪಂ ವ್ಯಾಪ್ತಿಯ ಮಾವಿನಕಟ್ಟೆಯ ಭರತನಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಕಂದಾಯ ಇಲಾಖೆ ಮತ್ತು ತಾಲೂಕಾಡಳಿತದ ಸಹಯೋಗದಲ್ಲಿ ಶುಕ್ರವಾರ ನಡೆದ ಗ್ರಾಮವಾಸ್ತವ್ಯ ಮತ್ತು ಪಿಂಚಣಿ ದಿನ ಉದ್ಘಾಟಿಸಿ ಮಾತನಾಡಿದರು.
ಕಂದಾಯ ಇಲಾಖೆ ಅಧಿಕಾರಿಗಳು ಈ ಹಿಂದೇ ಕುದುರೆ ಮೇಲೆ ಸಂಚರಿಸಿ, ಜನರ ಬೇಕು-ಬೇಡಗಳನ್ನು ಗಮನಿಸುವ ಪರಿಸ್ಥಿತಿ ಇತ್ತು. ಬದಲಾದ ಈ ಕಾಲದಲ್ಲಿ ಅಧಿಕಾರಿಗಳು ವಾಹನದಲ್ಲಿ ತೆರಳಿ ಸಮಸ್ಯೆಗಳನ್ನು ನೇರವಾಗಿ ಬಗೆಹರಿಸುವ ಪರಿಸ್ಥಿತಿ ಬಂದಿದೆ ಎಂದರು.ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ೨೦೦೦ದಷ್ಟು ವಿದ್ಯಾರ್ಥಿಗಳ ಆಧಾರ್ ಕಾರ್ಡ್ ತಾಂತ್ರಿಕ ಕಾರಣದಿಂದಾಗಿ ಉನ್ನತೀಕರಣಗೊಳ್ಳದೇ, ಸಮಸ್ಯೆಯಾಗಿದೆ. ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಯ ಎಲ್ಲ ಅಧಿಕಾರಿಗಳು ಸಾರ್ವಜನಿಕರೊಂದಿಗೆ ನಿರಂತರ ಸಂಪರ್ಕ ಮತ್ತು ಸಂಬಂಧವನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ತಹಸೀಲ್ದಾರ್ ಸೂಚಿಸಿದರು.ಎಲ್ಲ ಯೋಜನೆಗಳ ಕುರಿತು ವ್ಯಾಪಕ ಜಾಗೃತಿ ಮತ್ತು ಪ್ರಚಾರ ಕಾರ್ಯಕ್ರಮ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸೇವಾ ಸಹಕಾರಿ ಸಂಘದ ಅಧ್ಯಕ್ಷ ಹೇರಂಭ ಹೆಗಡೆ ಮಾತನಾಡಿ, ಇಂತಹ ಸರ್ಕಾರಿ ಕಾರ್ಯಕ್ರಮಗಳನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಬಿಇಒ ಎನ್.ಆರ್. ಹೆಗಡೆ, ತಾಲೂಕಿನಲ್ಲಿ ಖಾಲಿ ಇರುವ ೧೪೧ ಶಿಕ್ಷಕರ ಹುದ್ದೆಯನ್ನು ಅತಿಥಿ ಶಿಕ್ಷಕರ ಮೂಲಕ ತುಂಬಲಾಗಿದೆ ಎಂದರು. ಸಭೆಯಲ್ಲಿ ಉಪಸ್ಥಿತರಿದ್ದ ರೈತರು ಪ್ರಸ್ತುತ ವ್ಯಾಪಕವಾಗಿ ಹರಡುತ್ತಿರುವ ಅಡಕೆ ಎಲೆಚುಕ್ಕೆ ರೋಗದ ಕುರಿತಂತೆ ಸಂಬಂಧಿತ ಇಲಾಖೆಯವರು ಇನ್ನಾದರೂ ಮುತುವರ್ಜಿ ವಹಿಸಿ ನೆರವು ನೀಡುವಂತೆ ಆಗ್ರಹಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ್, ಜಿಪಂ ಅಭಿಯಂತರ ಅಶೋಕ ಬಂಟ ಉಪಸ್ಥಿತರಿದ್ದರು. ಇದೇ ವೇಳೆ ಕುಂದರಗಿ ಫಿರ್ಕಾ ವ್ಯಾಪ್ತಿಯ ೧೫ ವಿವಿಧ ಪಿಂಚಣಿ ಯೋಜನೆಯ ಅರ್ಹ ಫಲಾನುಭವಿಗಳಿಗೆ ಮಂಜೂರಿ ಪತ್ರವನ್ನು ವಿತರಿಸಲಾಯಿತು.