ಬಳ್ಳಾರಿ: ಬಡಜನರ ಶ್ರೇಯೋಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಜಾರಿಗೊಳಿಸಲಾಗುತ್ತಿದೆ. ಯೋಜನೆಗಳ ಬಗ್ಗೆ ತಿಳಿದುಕೊಂಡು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿ ಯೋಜನೆಯ ಸೌಲಭ್ಯ ಅರ್ಹರಿಗೆ ತಲುಪಿಸುವ ಕಾರ್ಯ ಅಧಿಕಾರಿಗಳು ಮಾಡಬೇಕು ಎಂದು ಸಂಸದ ಈ.ತುಕಾರಾಂ ಅಧಿಕಾರಿಗಳಿಗೆ ಸೂಚಿಸಿದರು.ನಗರದ ಜಿಪಂ ನಜೀರಸಾಬ್ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದ್ದು, ಒಟ್ಟು ಶೇ.80 ಬಿತ್ತನೆ ಪ್ರಗತಿಯಾಗಿದೆ. ರಸಗೊಬ್ಬರ ಹಾಗೂ ಬಿತ್ತನೆ ಬೀಜ ಸಮರ್ಪಕ ದಾಸ್ತಾನಿದ್ದು, ಅಭಾವವಿಲ್ಲ ಎಂದು ಜಂಟಿ ಕೃಷಿ ನಿರ್ದೇಶಕರು ಸಭೆಗೆ ತಿಳಿಸಿದರು.
ರೈತರಿಗೆ ಸಮರ್ಪಕ ಪ್ರಮಾಣದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಲಭ್ಯವಾಗಬೇಕು. ಕಳಪೆ ಮಟ್ಟದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಮಾರಾಟದ ಪ್ರಕರಣಗಳು ವರದಿಯಾಗಬಾರದು. ರೈತರಿಗಿರುವ ಯೋಜನೆಗಳನ್ನು ವಿಳಂಬ ಮಾಡದೇ ಅವರಿಗೆ ದೊರಕಿಸಬೇಕು ಎಂದು ಸಂಸದರು ಹೇಳಿದರು.ಜಿಲ್ಲೆಯಲ್ಲಿ ರೈತರಿಗೆ ಮಿಶ್ರಬೆಳೆ ಪದ್ಧತಿಯ ಕುರಿತು ಅರಿವು ಮೂಡಿಸಬೇಕು. ಈ ನಿಟ್ಟಿನಲ್ಲಿ ತಾಲೂಕಿಗೊಂದು ಮಣ್ಣು ಪರೀಕ್ಷೆಯ ಸಂಶೋಧನಾ ಕೇಂದ್ರ ಆರಂಭಿಸಲು, ಕಾರ್ಯಯೋಜನೆ ರೂಪಿಸಿ ವರದಿ ನೀಡಿ ಎಂದು ತೋಟಗಾರಿಕೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣ ಮರುಕಳಿಸದಂತೆ ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ನೈತಿಕ ಮೌಲ್ಯ ತಿಳಿಸಿಕೊಡಲು, ಸಿಎಸ್‌ಆರ್ ಅನುದಾನದಡಿ ನಿವೃತ್ತ ನಿಪುಣ ಶಿಕ್ಷಕರನ್ನು ನಿಯೋಜಿಸಿ ವಿಶೇಷ ಉಪನ್ಯಾಸ ಆಯೋಜಿಸಲು ಕಾರ್ಯ ಯೋಜನೆ ಸಿದ್ಧಪಡಿಸಬೇಕು ಎಂದು ಸಂಸದರು ಸಲಹೆ ನೀಡಿದರು.
ಜಿಲ್ಲೆಯಲ್ಲಿ ಡೆಂಗಿ ಪ್ರಕರಣ ತಡೆಗಟ್ಟುವ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಗ್ರಾಪಂ ವ್ಯಾಪ್ತಿಯಲ್ಲಿ ಚರಂಡಿಗಳ ಸ್ವಚ್ಛತೆ, ಧೂಮೀಕರಣ, ಬ್ಲೀಚಿಂಗ್ ಪೌಡರ್ ಸಿಂಪರಣೆ ಸೇರಿದಂತೆ ಜನ ಸಮುದಾಯದಲ್ಲಿ ಅರಿವು ಮೂಡಿಸುವ ಕಾರ್ಯವಾಗಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ಎನ್‌ಎಂಡಿಸಿಯಲ್ಲಿ ಇತ್ತೀಚಿನ ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿರುವುದಿಲ್ಲ, ಸರೋಜಿನಿ ಮಹಿಷಿ ವರದಿಯನ್ವಯ ಜಿಲ್ಲೆಯ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂದು ಎನ್‌ಎಂಡಿಸಿ ಅಧಿಕಾರಿಗಳಿಗೆ ಸೂಚಿಸಿದರು.