ಸರ್ಕಾರಿ ಸೌಲಭ್ಯ ತ್ವರಿತಗತಿಯಲ್ಲಿ ಜನತೆಗೆ ತಲುಪಲಿ

KannadaprabhaNewsNetwork | Published : Apr 7, 2025 12:36 AM

ಸಾರಾಂಶ

ಸರಕಾರದ ಸೌಲಭ್ಯಗಳನ್ನು ತ್ವರಿತಗತಿಯಲ್ಲಿ ಜನರ ಮನೆಯ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು

ಕನ್ನಡಪ್ರಭ ವಾರ್ತೆ ಅಥಣಿ

ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಜನ-ಜಾನುವಾರುಗಳಿಗೆ ಸಮರ್ಪಕ ಕುಡಿಯುವ ನೀರಿನ ಸೌಕರ್ಯ ಒದಗಿಸುವ ಮೂಲಕ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಹಾಗೂ ಸರಕಾರದ ಸೌಲಭ್ಯಗಳನ್ನು ತ್ವರಿತಗತಿಯಲ್ಲಿ ಜನರ ಮನೆಯ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಶಿಂಧೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಲೂಕು ಪಂಚಾಯಿತಿ ಸಭಾಭವನದಲ್ಲಿ ತಾಲೂಕುಮಟ್ಟದ ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಎಲ್ಲಾ ಗ್ರಾಪಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಕ್ರಮ ವಹಿಸಬೇಕು ಹಾಗೂ ಶುದ್ಧ ಕುಡಿವ ನೀರಿನ ಘಟಕಗಳನ್ನು ದುರಸ್ತಿಗೊಳಿಸಿ ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕೆಂದರು.

ನರೇಗಾ ಯೋಜನೆಗೆ ಸಂಬಂಧಿಸಿದಂತೆ ಪ್ರತಿಯೊಂದು ಗ್ರಾಪಂಗಳಲ್ಲಿ ಸಮುದಾಯ ಕಾಮಗಾರಿ ಪ್ರಾರಂಭಿಸುವುದು, ಜನ ಉದ್ಯೋಗಕ್ಕಾಗಿ ಬೇರೆಡೆಗೆ ವಲಸೆ ಹೋಗದಂತೆ ಅವರಿಗೆ ಸ್ವ-ಗ್ರಾಮದಲ್ಲಿ ಉದ್ಯೋಗ ನೀಡಬೇಕು. ಈ ಕುರಿತು ಅಧಿಕಾರಿಗಳು ಸಮರ್ಪಕ ಕಾರ್ಯ ನಿರ್ವಹಿಸಬೇಕೆಂದರು. ಏ.15ರೂಳಗೆ ಪ್ರತಿಯೊಬ್ಬ ವಿಶೇಷಚೇತನರಿಗೆ ಜಾಬ್ ಕಾರ್ಡ್‌ಗಳನ್ನು ಕಡ್ಡಾಯವಾಗಿ ನೀಡಬೇಕು ಎಂದರು. ಈ ಸಂದರ್ಭದಲ್ಲಿ ಅಥಣಿ ಗ್ರಾಮೀಣ ಗ್ರಾಪಂ ವ್ಯಾಪ್ತಿ ವಿಶೇಷಚೇತನರಿಗೆ ಜಾಬ್ ಕಾರ್ಡ್‌ ವಿತರಿಸಿದರು.

ಅಥಣಿ ತಾಲೂಕು ಆಸ್ಪತ್ರೆಗೆ ಭೇಟಿ:

ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಜಿಪಂ ಸಿಇಒ ಶಿಂಧೆ ಆಸ್ಪತ್ರೆಯಲ್ಲಿನ ಮೂಲಸೌಕರ್ಯ ಪರಿಶೀಲಿಸಿದರು. ಸರಕಾರಿ ಆಸ್ಪತ್ರೆಯಲ್ಲಿನ ಔಷಧಿ ಸೇರಿದಂತೆ ವೈದ್ಯಕೀಯ ಉಪಕರಣ ವೀಕ್ಷಿಸಿದರು. ಆಯುಷ್ಮಾನ್‌ ಭಾರತ ಆರೋಗ್ಯ ಮೀತ್ರ ವಿಭಾಗಕ್ಕೆ ಭೇಟಿ ನೀಡಿ ಅಲ್ಲಿನ ಕಾರ್ಯವೈಖರಿ ಪರಿಶೀಲಿಸಿ ತಾಲೂಕು ವೈದ್ಯಾಧಿಕಾರಿ ಡಾ.ಬಸಗೌಡ ಕಾಗೆಯವರಿಂದ ಮಾಹಿತಿ ಪಡೆದುಕೊಂಡರು. ಆಸ್ಪತ್ರೆಗೆ ಬರುವ ರೋಗಿಗಳಿಗೆ ಮತ್ತು ಅವರ ಸಂಬಂಧಿಕರಿಗೆ ಕುಡಿವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಈ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಆಗಮಿಸುತ್ತಿದ್ದು, ಜನರಿಗೆ ಆಸನಗಳ ಕೊರತೆ ಆಗದಂತೆ ಇನ್ನಷ್ಟು ಆಸನಗಳ ವ್ಯವಸ್ಥೆ ಮತ್ತು ಬೇಸಿಗೆ ಬಿಸಿಲಿನ ಸಂದರ್ಭದಲ್ಲಿ ಆಸ್ಪತ್ರೆ ಆವರಣದಲ್ಲಿ ನೆರಳಿನ ವ್ಯವಸ್ಥೆ ಮಾಡುವಂತೆ ಸೂಚಿಸಿದರು.

ಝಂಜರವಾಡಕ್ಕೆ ಭೇಟಿ:

ಅಥಣಿ ತಾಲೂಕಿನ ಗ್ರಾಮೀಣ ಪ್ರದೇಶಗಳಿಗೆ ಪೂರೈಕೆಯಾಗುವ ಬಹುಗ್ರಾಮ ಕುಡಿವ ನೀರಿನ ಯೋಜನೆ ವೀಕ್ಷಣೆಗಾಗಿ ತಾಲೂಕಿನ ಝಂಜರವಾಡ ಗ್ರಾಪಂಗೆ ಸಿಇಒ ಶಿಂಧೆ ಭೇಟಿ ನೀಡಿ ಪರಿಶೀಲಿಸಿದರು. ಕೃಷ್ಣಾ ನದಿ ನೀರಿನಲ್ಲಿ ಕಾರ್ಖಾನೆಯ ಮೊಲೇಷಿಸ್ ಮಿಶ್ರಣವಾಗುತ್ತಿವೆ ಎಂಬು ದೂರುಗಳು ಬರುತ್ತವೆ. ಈ ಬಗ್ಗೆ ಅಧಿಕಾರಿಗಳು ನಿಗಾವಹಿಸಿ ಕಾರ್ಖಾನೆಯವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕೆಂದರು.

ಈ ವೇಳೆ ಅಥಣಿ ತಾಪಂ ಇಒ ಶಿವಾನಂದ ಕಲ್ಲಾಪುರ ಮತ್ತು ಕಾಗವಾಡ ಇಒ ವೀರಣ್ಣಾ ವಾಲಿ, ಅಥಣಿ ತಹಸೀಲ್ದಾರ್‌ ಸಿದ್ದರಾಯ ಭೋಸಗಿ, ಕಾಗವಾಡ ತಹಸೀಲ್ದಾರ್‌ ಆರ್.ಆರ್.ಬುರ್ಲಿ, ಕಾರ್ಯನಿರ್ವಾಹಕ ಅಭಿಯಂತರ ಪಾಂಡುರಂಗ ಜೋಶಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಉಪ ವಿಭಾಗ ಅಥಣಿ ರವೀಂದ್ರ ಮುರಗಾಲಿ, ಅಥಣಿ ಮತ್ತು ಕಾಗವಾಡ ತಾಲೂಕುಮಟ್ಟದ ಅಧಿಕಾರಿಗಳು ಮತ್ತು ಎಲ್ಲ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಎಲ್ಲ ಸಿಬ್ಬಂದಿ ಇದ್ದರು.

Share this article