ಹೊಸ ಆವಿಷ್ಕಾರಗಳಿಂದ ಭಾರತದ ಯುವಕರು ಮಾದರಿಯಾಗಲಿ: ಕೇಂದ್ರ ಸಚಿವ ಜೋಶಿ

KannadaprabhaNewsNetwork | Published : Nov 11, 2024 1:00 AM

ಸಾರಾಂಶ

ಫೇಸ್‌ಬುಕ್‌, ಟ್ವಿಟರ್‌ ಸೇರಿ ತಂತ್ರಜ್ಞಾನಗಳ ಮುಂದಿನ ಮಟ್ಟ ಹಾಗೂ ಹೊಸ ಆವೃತ್ತಿಗಳ ಆವಿಷ್ಕಾರ ಭಾರತದಿಂದಲೇ ಹೊರಹೊಮ್ಮುವಂತಾಗಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಧಾರವಾಡ: ಭಾರತದಂತಹ ಅಪಾರ ಸಂಖ್ಯೆಯುಳ್ಳ ಯುವ ಶಕ್ತಿ ಜಗತ್ತಿನ ಯಾವ ರಾಷ್ಟ್ರದಲ್ಲೂ ಇಲ್ಲ. ಭಾರತದ ಯುವ ಜನತೆ ಹೊಸ ಹೊಸ ಆವಿಷ್ಕಾರಗಳ ಮೂಲಕ ಪ್ರಪಂಚಕ್ಕೆ ಮಾದರಿಯಾಗಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಇಲ್ಲಿಯ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ)ಯಲ್ಲಿ ಭಾನುವಾರ ಏರ್ಪಡಿಸಿದ್ದ ‘ಐಐಟಿ ಧಾರವಾಡ ಸಮಾವೇಶ’ಉದ್ಘಾಟಿಸಿದ ಅವರು, ಜಗತ್ತಿನಲ್ಲೇ ಅತೀ ಹೆಚ್ಚು ಯುವ ಶಕ್ತಿ ಹೊಂದಿರುವ ಭಾರತ ದೇಶದಲ್ಲಿ ಸಾಕಷ್ಟು ಅವಕಾಶಗಳಿವೆ. ಅವುಗಳನ್ನು ನಾವು ಸದ್ಭಳಕೆ ಮಾಡಿಕೊಳ್ಳುವ ಮೂಲಕ ಭಾರತ ಶಕ್ತಿಯನ್ನು ಇಡೀ ಜಗತ್ತು ಮೆಚ್ಚುವಂತಹ ಕೆಲಸ ಮಾಡಬೇಕು. ಕೇಂದ್ರ ಸರ್ಕಾರ ಯುವಶಕ್ತಿಗೆ ಪೂರಕವಾಗುವಂತಹ ಅನೇಕ ಯೋಜನೆಗಳನ್ನು ರೂಪಿಸಿದೆ. ಇದರ ಸದುಪಯೋಗ ಪಡೆದು ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಸದ್ಯದ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ಟ್ವಿಟರ್‌ ಸೇರಿ ತಂತ್ರಜ್ಞಾನಗಳ ಮುಂದಿನ ಮಟ್ಟ ಹಾಗೂ ಹೊಸ ಆವೃತ್ತಿಗಳ ಆವಿಷ್ಕಾರ ಭಾರತದಿಂದಲೇ ಹೊರಹೊಮ್ಮುವಂತಾಗಬೇಕು. ಇದಕ್ಕೆ ಐಐಐಟಿ ಇಂದಿನಿಂದಲೇ ಪ್ರಯತ್ನ ನಡೆಸಬೇಕು. ಭಾರತ ಇಡೀ ವಿಶ್ವದಲ್ಲಿ ಡಿಜಿಟಲ್‌ ಕ್ರಾಂತಿಯ ಕೇಂದ್ರವಾಗಿದೆ. ತಂತ್ರಜ್ಞಾನ ಸೇರಿ ಎಲ್ಲ ವಿಚಾರಗಳಿಗೆ ಬೇರೆಯವರ ಅವಲಂಬನೆ ಆಗುವುದು ಬೇಡ. ಇಂದಿನ ಯುವಕರಲ್ಲಿ ಭಾರತದ ಡಿಜಿಟಲ್‌ ಭವಿಷ್ಯ ರೂಪಿಸುವ ಶಕ್ತಿ ಇದೆ. ಭಾರತದ ಡಿಜಿಟಲ್‌ ಡೆಸ್ಟಿನಿ ಜಗತ್ತನ್ನು ಬದಲಾಯಿಸುವುದು ನಿಶ್ಚಿತ ಎಂದರು.

ಸಂಸ್ಥೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ನೌಕರಿ ಹುಡುಕುವ ಬದಲು ಉದ್ಯೋಗ ಸೃಷ್ಟಿಸುವವರಾಗಬೇಕು. ಇದಕ್ಕಾಗಿ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಇಂದಿನಿಂದಲೇ ಪ್ರಯತ್ನ ನಡೆಸಬೇಕು. ಇದರ ಜತೆಗೆ ಇಲ್ಲಿನ ವಿದ್ಯಾರ್ಥಿಗಳಲ್ಲಿ ಕನಿಷ್ಠ ಒಬ್ಬರು ಅಥವಾ ಇಬ್ಬರು ಜಗತ್ತಿನ ಅತ್ಯುತ್ತಮ ಕಂಪನಿಗಳ ಮುಖ್ಯಸ್ಥರಾಗಿ ಕಂಪನಿ ಮುನ್ನಡೆಸುವಂತಾಗಬೇಕು. ಇನ್ನು 10 ವರ್ಷಗಳಲ್ಲಿ ಈ ಗುರಿ ಸಾಧಿಸುವ ನಿಟ್ಟಿನಲ್ಲಿ ಸಂಸ್ಥೆ ಮುನ್ನಡೆಯಬೇಕು ಎಂದರು.

ಧಾರವಾಡದಲ್ಲಿ ಸ್ಥಾಪನೆಯಾಗಿರುವ ಐಐಟಿ ಹಾಗೂ ಐಐಐಟಿ ಉತ್ತಮ ಕಾರ್ಯ ನಿರ್ವಹಿಸುತ್ತಿವೆ. ಸಂಸ್ಥೆಯ 25ನೇ ವರ್ಷಾಚರಣೆ ಸಮಯದಲ್ಲಿ ದೇಶದ ಅತ್ಯುನ್ನತ ಸಂಸ್ಥೆಗಳಾಗುವುದರ ಜತೆಗೆ ಉತ್ತಮ ಕಂಪನಿಗಳು ಹಾಗೂ ಜಗತ್ತಿನ ಶ್ರೇಷ್ಠ ಉದ್ಯಮಿಗಳನ್ನು ತಯಾರಿಸಿದ ಕೀರ್ತಿ ಹೊಂದಿದ ಸಂಸ್ಥೆಗಳಾಗಿ ಹೊರಹೊಮ್ಮಬೇಕು. ಈ ಸಾಧನೆಗೆ ಬೇಕಿರುವ ಅಗತ್ಯ ಸಹಾಯ ನೀಡಲು ಕೇಂದ್ರ ಸರ್ಕಾರ ಸದಾ ಸಿದ್ಧವಾಗಿದೆ ಎಂದರು.

ಶಾಸಕ ಅರವಿಂದ ಬೆಲ್ಲದ ಮಾತನಾಡಿದರು. ವಿಧಾನಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ, ಐಐಐಟಿ ನಿರ್ದೇಶಕ ಮಹದೇವ ಪ್ರಸನ್ನ, ಡಾ. ಕೆ. ಗೋಪಿನಾಥ, ಶಶಿಧರ ಶೆಟ್ಟರ್‌, ರವಿ ವಿಟ್ಲಾಪುರ, ವಿದ್ಯಾರ್ಥಿಗಳಿದ್ದರು. ನಂತರ ತಂತ್ರಜ್ಞಾನಗಳ ಅಭಿವೃದ್ಧಿ ಸೇರಿ ವಿವಿಧ ವಿಷಯಗಳ ಕುರಿತು ಚರ್ಚೆಗಳು ನಡೆದವು.

Share this article