ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ಹೆಚ್ಚಾಗುತ್ತಿರುವ ವಾಹನಗಳ ಸಂಚಾರ ದಟ್ಟಣೆ ನಿಯಂತ್ರಿಸಲು ಸಾರ್ವಜನಿಕರು ಪ್ರಯಾಣಕ್ಕೆ ಸಮೂಹ ಸಾರಿಗೆಯನಗನು ಹೆಚ್ಚು ಬಳಸಬೇಕೆಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದರು.ಬೆಂಗಳೂರು ನಗರ ಪೊಲೀಸ್ ವತಿಯಿಂದ ಮೆಜೆಸ್ಟಿಕ್‌ನಲ್ಲಿ ಭಾನುವಾರ ಆಯೋಜಿಸಿದ್ದ ‘ವಿಶ್ವ ಸಾರ್ವಜನಿಕ ಸಾರಿಗೆ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಗರದ ರಸ್ತೆಗಳಲ್ಲಿ ಸಂಚಾರ ದಟ್ಟಣೆ ತಗ್ಗಿಸಬೇಕಾದರೆ, ಸಾರ್ವಜನಿಕರು ಖಾಸಗಿ ವಾಹನಗಳ ಬಳಕೆ ಕಡಿಮೆ ಮಾಡಿ ಸಮೂಹ ಸಾರಿಗೆಯಾದ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳು, ಮೆಟ್ರೋ ರೈಲುಗಳ ಬಳಕೆ ಹೆಚ್ಚು ಮಾಡಬೇಕು. ಇಲ್ಲವಾದರೆ, ನಗರದಲ್ಲಿ ವಾಹನ ಸಂಚಾರ ದಟ್ಟಣೆ ಸಮಸ್ಯೆ ತಗ್ಗಿಸುವುದು ಕಷ್ಟವಾಗಲಿದೆ ಎಂದರು.
ನಗರದಲ್ಲಿರುವ ವಾಹನಗಳ ಪೈಕಿ ಸುಮಾರು ಶೇ.77ರಷ್ಟು ಬೈಕ್‌ಗಳಿವೆ. ಬಹಳಷ್ಟು ಜನರು ಪ್ರಯಾಣಕ್ಕೆ ಕಾರು, ಬೈಕ್ ಸೇರಿ ಖಾಸಗಿ ವಾಹನಗಳನ್ನು ಅವಲಂಬಿಸಿದ್ದಾರೆ. ಬಡವರು ಬಹುತೇಕ ಪ್ರಯಾಣಕ್ಕೆ ಸಮೂಹ ಸಾರಿಗೆ ಬಳಸುತ್ತಾರೆ. ಶ್ರೀಮಂತರು, ಸ್ಥಿತಿವಂತರು ತಮ್ಮ ಖಾಸಗಿ ವಾಹನಗಳ ಬದಲಾಗಿ ಸಮೂಹ ಸಾರಿಗೆ ಬಳಕೆ ಮಾಡಬೇಕು. ಇದರಿಂದ ನಗರದಲ್ಲಿ ವಾಯು ಮಾಲಿನ್ಯ, ಶಬ್ಧ ಮಾಲಿನ್ಯ ತಗ್ಗಲಿದೆ. ರಸ್ತೆ ಅಪಘಾತಗಳು ಕಡಿಮೆಯಾಗಲಿವೆ ಎಂದು ಹೇಳಿದರು.ಇದೇ ವೇಳೆ ವಿಶ್ವ ಸಾರ್ವಜನಿಕ ಸಾರಿಗೆ ದಿನದ ಪ್ರಯುಕ್ತ ಸಮೂಹ ಸಾರಿಗೆ ಬಳಸುವ ಸಾರ್ವಜನಿಕರಿಗೆ ಗುಲಾಬಿ ನೀಡಿ ಶುಭ ಕೋರಲಾಯಿತು. ಅಂತೆಯೆ ಕನ್ನಡ ಬಳಸಿ, ಕನ್ನಡ ಉಳಿಸಿ ಎಂಬ ಕನ್ನಡ ಜಾಗೃತಿ ಕರಪತ್ರ ವಿತರಿಸಲಾಯಿತು. ಖಾಸಗಿ ಸಂಚಾರ ಮಿತಗೊಳಿಸಿ, ಸಾರ್ವಜನಿಕ ಸಾರಿಗೆ ಉತ್ತೇಜಿಸಿ ಎಂದು ಪ್ರತಿಜ್ಞಾವಿಧಿ ಬೋಧಿಸಲಾಯಿತು.
ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್, ಸಂಚಾರ ಪಶ್ಚಿಮ ವಿಭಾಗದ ಡಿಸಿಪಿ ಅನಿತಾ ಬಿ.ಹದ್ದಣ್ಣನವರ್, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಅರುಣ್ ಕುಮಾರ್, ಬಿಎಂಟಿಸಿ ಡಿಎಂಇ ವಿಲ್ಸನ್ ಮತ್ತಿತರರು ಉಪಸ್ಥಿತರಿದ್ದರು.