ತ್ರಿವರ್ಣ ಧ್ವಜ ಉಳಿಯಲು ಕಾರ್ಮಿಕರು, ದಲಿತರು, ರೈತರು ರಾಜಕೀಯವಾಗಿ ಒಂದಾಗಬೇಕು: ಡಾ.ಸಿದ್ದನಗೌಡ ಪಾಟೀಲ್

KannadaprabhaNewsNetwork | Published : Nov 11, 2024 12:59 AM

ಸಾರಾಂಶ

ಪ್ರಧಾನಿ ಮೋದಿ ಅವರು ಕಾರ್ಮಿಕ ವಿರೋಧಿ ಮಸೂದೆಗಳನ್ನು ಜಾರಿಗೆ ತಂದು ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ. ಬಂಡವಾಳ ಶಾಹಿಗಳಿಗೆ ಲಕ್ಷಾಂತರ ಕೋಟಿ ರೂಪಾಯಿ ಸಾಲ ನೀಡುತ್ತಿದ್ದಾರೆ. ಸಾರ್ವಜನಿಕ ಉದ್ದಿಮೆಗಳನ್ನು ಅಂಬಾನಿ, ಅದಾನಿ ಇತ್ಯಾದಿ ಬಂಡಾವಾಳ ಶಾಹಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಅನಾಹುತಗಳನ್ನು ಮಾಡಿದರೂ ಕೆಲವು ಜನರು ಮೋದಿ ಅವರ ಬಗ್ಗೆ ಮಾತನಾಡಬೇಡಿ ಎಂದು ಹೇಳುತ್ತಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಭಾರತದ ಕೇಸರಿ, ಬಿಳಿ, ಹಸಿರು ಬಣ್ಣದ ತ್ರಿವರ್ಣ ಧ್ವಜ ಉಳಿಯಬೇಕಾದರೆ ಕೆಂಪು, ನೀಲಿ, ಹಸಿರು ಅಂದರೆ ಕಾರ್ಮಿಕರು, ದಲಿತರು, ರೈತರು ರಾಜಕೀಯವಾಗಿ ಒಂದಾಗಬೇಕು ಎಂದು ಕಾರ್ಮಿಕ ನೇತಾರ, ಚಿಂತಕ ಡಾ. ಸಿದ್ದನಗೌಡ ಪಾಟೀಲ್ ಕರೆ ನೀಡಿದರು.

ನಗರದ ಎಂಜಿನಿಯರುಗಳ ಸಂಸ್ಥೆಯ ಸಭಾಂಗಣದಲ್ಲಿ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ಕಾರ್ಮಿಕ ಸಂಘಟನೆಯು ಭಾನುವಾರ ಆಯೋಜಿಸಿದ್ದ ಎಐಟಿಯುಸಿ 105ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಪ್ರಧಾನಿ ಮೋದಿ ಅವರು ಕಾರ್ಮಿಕ ವಿರೋಧಿ ಮಸೂದೆಗಳನ್ನು ಜಾರಿಗೆ ತಂದು ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ. ಬಂಡವಾಳ ಶಾಹಿಗಳಿಗೆ ಲಕ್ಷಾಂತರ ಕೋಟಿ ರೂಪಾಯಿ ಸಾಲ ನೀಡುತ್ತಿದ್ದಾರೆ. ಸಾರ್ವಜನಿಕ ಉದ್ದಿಮೆಗಳನ್ನು ಅಂಬಾನಿ, ಅದಾನಿ ಇತ್ಯಾದಿ ಬಂಡಾವಾಳ ಶಾಹಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಅನಾಹುತಗಳನ್ನು ಮಾಡಿದರೂ ಕೆಲವು ಜನರು ಮೋದಿ ಅವರ ಬಗ್ಗೆ ಮಾತನಾಡಬೇಡಿ ಎಂದು ಹೇಳುತ್ತಾರೆ ಎಂದು ಅವರು ವ್ಯಂಗ್ಯವಾಡಿದರು.

ಬಸವರಾಜ ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿ ಆಗಿದ್ದಾಗ ಕಾರ್ಮಿಕರ ದುಡಿಯುವ ಸಮಯವನ್ನು 8 ಗಂಟೆಯಿಂದ 12 ಗಂಟೆಗೆ ಏರಿಸಿದ್ದಾರೆ. ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ನಿಯಮವನ್ನು ರದ್ದು ಪಡಿಸಲು ಮೀನಾಮೇಷ ಎನಿಸುತ್ತಿದ್ದಾರೆ. ಈ ಧೋರಣೆ ಕಾಂಗ್ರೆಸ್- ಬಿಜೆಪಿ ಎರಡೂ ಪಕ್ಷಗಳು ಬಂಡವಾಳ ಶಾಹಿಗಳ ಪರವಾಗಿ ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿರುವುದರ ನಿದರ್ಶನವಾಗಿದೆ ಎಂದು ದೂರಿದರು.

ಬಿಜೆಪಿಯವರು ಹಿಂದೂ, ಮುಸ್ಲಿಂ ಸಮುದಾಯಗಳ ನಡುವೆ ಸಂಘರ್ಷ ಹುಟ್ಟು ಹಾಕುತ್ತಾರೆ. ಕಾಂಗ್ರೆಸ್ ಪಕ್ಷದವರು ಸೌಹಾರ್ದತೆಯ ಬಗ್ಗೆ ಮಾತನಾಡುತ್ತಾರೆ. ಈ ಎರಡು ವ್ಯತ್ಯಾಸಗಳನ್ನು ಹೊರತುಪಡಿಸಿ ಉಳಿದೆಲ್ಲಾ ವಿಚಾರಗಳಲ್ಲಿ ಒಂದೇ ನಿಲುವಿಗೆ ಬದ್ಧವಾಗಿವೆ ಎಂದರು.

ದರೋಡೆಕೋರರು ಎಲ್ಲರೂ ಮನೆಯಲ್ಲಿ ಇರುವಾಗಲೇ ಬಾಗಿಲು ಮುರಿದು ಮನೆ ಒಳಗೆ ನುಗ್ಗಿ ಕೈಕಾಲು ಕಟ್ಟಿಹಾಕಿ ತಲೆ ಹೊಡೆದು ಲೂಟಿ ಮಾಡಿ ಹೋಗುತ್ತಾರೆ. ಕಳ್ಳರು ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಗೌಪ್ಯವಾಗಿ ಕಳ್ಳತನ ಮಾಡುತ್ತಾರೆ. ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಯವರು ದರೋಡೆಕೋರರಾದರೆ, ಕಾಂಗ್ರೆಸ್ ನವರು ಕಳ್ಳರು. ಇವರಿಬ್ಬರ ನಡುವೆ ಜೆಡಿಎಸ್ ಪಕ್ಷದವರು ಪಿಕ್ ಪ್ಯಾಕೆಟರ್ಸ್ಇದ್ದಂತೆ. ದರೋಡೆಕೋರರಿಗಿಂತ ಕಳ್ಳರು ಎಷ್ಟೋ ಪರವಾಗಿಲ್ಲ. ಏಕೆಂದರೆ ಕಳ್ಳರಿಂದ ಜೀವಹಾನಿ ಸಂಭವಿಸುವುದಿಲ್ಲ ಎಂದರು.

ರಾಜಕೀಯ ಪ್ರಜ್ಞೆ ಬೆಳೆದಿಲ್ಲ:

ಎಐಟಿಯುಸಿ ರಾಷ್ಟ್ರೀಯ ಉಪಾಧ್ಯಕ್ಷ ಎಚ್.ಆರ್. ಶೇಷಾದ್ರಿ ಮಾತನಾಡಿ, ಕಾರ್ಮಿಕ ವರ್ಗದಲ್ಲಿ ಈವರೆಗೂ ದೊಡ್ಡ ಮಟ್ಟದ ರಾಜಕೀಯ ಪ್ರಜ್ಞೆ ಬೆಳೆದಿಲ್ಲ. ಇದೊಂದು ದುರಂತ. ರಾಜಕೀಯ ಪ್ರಜ್ಞೆ ಕನಸಾಗಿಯೇ ಉಳಿದಿದೆ. ರಾಜಕೀಯ ಕರ್ತವ್ಯಗಳನ್ನು ಅರ್ಥ ಮಾಡಿಕೊಂಡು ಕಾರ್ಯಗತಗೊಳಿಸುವಲ್ಲಿ ಈ ದೇಶದ ಕಾರ್ಮಿಕ ವರ್ಗ ವಿಫಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರಗಳು ಬಂಡವಾಳಶಾಹಿ ವ್ಯವಸ್ಥೆ ಪ್ರೋತ್ಸಾಹಿಸುವ ಗುರಿ ಹೊಂದಿವೆ. ಇದರ ಅರ್ಥ ದೇಶದ ಸಂಪತ್ತು ಕೆಲವೇ ಮಂದಿಯಲ್ಲಿಇರಬೇಕು ಎನ್ನುವುದು. ಉಳಿದವರು ಅವರ ಆಶ್ರಯದಲ್ಲಿ ನೇರ ಅಥವಾ ಪರೋಕ್ಷವಾಗಿ ಬದುಕಬೇಕು. ಇದೊಂದು ರಾಜಕೀಯ ತೀರ್ಮಾನವಾಗಿದೆ ಎಂದು ಅವರು ದೂರಿದರು.

ಇದೇ ವೇಳೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ ಎಚ್. ಜನಾರ್ದನ್ ಅವರನ್ನು ಸನ್ಮಾನಿಸಲಾಯಿತು. ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಎಚ್.ಬಿ. ರಾಮಕೃಷ್ಣ, ಜಿಲ್ಲಾಧ್ಯಕ್ಷ ಎನ್.ಕೆ. ದೇವದಾಸ್, ಜಿಲ್ಲಾ ಕಾರ್ಯಾಧ್ಯಕ್ಷ ರೇವಣ್ಣ, ಜಿಲ್ಲಾ ಕಾರ್ಯದರ್ಶಿ ಎಂ. ಶಿವಣ್ಣ, ಕೆ.ಎಸ್.ರೇವಣ್ಣ, ಸುರೇಶ್ಮೊದಲಾದವರು ಇದ್ದರು.

ಕಾರ್ಮಿಕ ವಲಯಕ್ಕೆ ವಿಷವನ್ನು ಅಮೃತದಂತೆ ಉಣಿಸುತ್ತಿದ್ದಾರೆ. ಅರಿವು ಕಿತ್ತುಕೊಳ್ಳಲಾಗುತ್ತಿದೆ. ಎಚ್ಚರದಿಂದ ಇರಬೇಕು. ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಜ್ಞಾನ ಬೆಳೆಸಿಕೊಳ್ಳಬೇಕು. ನದಿಯಂತೆ ನಮ್ಮ ಅರಿವು ಹರಿಯಬೇಕು. ನಮ್ಮಲ್ಲಿ ಸಮೃದ್ಧ ಕಾವ್ಯಗಳಿವೆ. ಅವು ಜನರ ಪರವಾಗಿ, ಶೋಷಣೆ ವಿರುದ್ಧ ದನಿ ಎತ್ತಿವೆ. ಜೀತ ಮಾಡುವವನಿಗೆ ದನಿ ಇಲ್ಲ. ಇದಕ್ಕೆ ಪ್ರತಿರೋಧ ಮನೋಭಾವ ಮುಖ್ಯ. ಮನುಜ ಪಥದತ್ತ ನಡೆಯುವುದೇ ನಮ್ಮ ಧೋರಣೆಯಾಗಬೇಕು. ನಿರಂತರ ಹೋರಾಟದಿಂದ ಕಾರ್ಮಿಕ ವರ್ಗ ಜೀವಂತವಾಗಿರಲಿದೆ.

- ಎಚ್. ಜನಾರ್ಧನ್, ಹಿರಿಯ ರಂಗಕರ್ಮಿ

ಕಾರ್ಮಿಕ ವರ್ಗದ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಕಾರಣ ಒಗ್ಗಟ್ಟು ಇಲ್ಲದಿರುವುದು. ಸಾಮಾಜಿಕ ವರ್ಗದಲ್ಲಿ ಮುಂಚೂಣಿಯಲ್ಲಿ ಇರಬೇಕು, ಸಂಘಟಿತರಾಗಬೇಕು. ಸರ್ಕಾರದ ವಿರುದ್ಧದ ಹೋರಾಟ ತೀವ್ರವಾಗಬೇಕು. ಇದೀಗ ಕಾರ್ಮಿಕ ಕಾಯ್ದೆ ಸಂಹಿತೆಯಾಗಿ ಬದಲಾವಣೆಯಾಗುತ್ತಿದೆ. ಬೇಡಿಕೆ ಹೋರಾಟ ಪ್ರಶ್ನೆ ಬಂದಾಗ ಒಗ್ಗಟ್ಟಿನ ಬಲ ಮುಖ್ಯ. ಆದರೆ, ಅದರಕೊರತೆ ಕಾಣುತ್ತಿದೆ. ಹೋರಾಟ ಚುರುಕಾಗಬೇಕು.

- ಎಚ್.ಆರ್. ಶೇಷಾದ್ರಿ, ರಾಷ್ಟ್ರೀಯ ಉಪಾಧ್ಯಕ್ಷ, ಎಐಟಿಯುಸಿ

Share this article