ಶಾಲೆಗೆ ಭೂದಾನ ಮಾಡಿದವರ ಸ್ಮರಿಸುವ ಕಾರ್ಯವಾಗಲಿ-ಶಾಸಕ ಶ್ರೀನಿವಾಸ ಮಾನೆ

KannadaprabhaNewsNetwork | Published : Jan 6, 2025 1:02 AM

ಸಾರಾಂಶ

ಶಾಲೆಗಳ ಕಟ್ಟಡ ನಿರ್ಮಿಸಲು ಭೂಮಿ ನೀಡಿರುವ ದಾನಿಗಳ ಜಯಂತಿಯನ್ನು ಶಾಲೆಗಳಲ್ಲಿ ಕಡ್ಡಾಯವಾಗಿ ಆಚರಿಸುವ ಮೂಲಕ ಅವರನ್ನು ಸ್ಮರಿಸಬೇಕು ಎಂದು ಶಾಸಕ ಶ್ರೀನಿವಾಸ ಮಾನೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಹಾನಗಲ್ಲ: ಶಾಲೆಗಳ ಕಟ್ಟಡ ನಿರ್ಮಿಸಲು ಭೂಮಿ ನೀಡಿರುವ ದಾನಿಗಳ ಜಯಂತಿಯನ್ನು ಶಾಲೆಗಳಲ್ಲಿ ಕಡ್ಡಾಯವಾಗಿ ಆಚರಿಸುವ ಮೂಲಕ ಅವರನ್ನು ಸ್ಮರಿಸಬೇಕು ಎಂದು ಶಾಸಕ ಶ್ರೀನಿವಾಸ ಮಾನೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಭಾನುವಾರ ತಾಲೂಕಿನ ಮಾರನಬೀಡ ಗ್ರಾಮದ ಮುದುಕಪ್ಪ ಬಸಪ್ಪ ಕರಿಯಪ್ಪನವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದಾನದ ರೂಪದಲ್ಲಿ ಜಮೀನು ಸಿಗದಿದ್ದರೆ ಶಾಲೆ, ಕಾಲೇಜು, ಆಸ್ಪತ್ರೆಗಳು ನಿರ್ಮಾಣವಾಗುತ್ತಿರಲಿಲ್ಲ. ರುದ್ರಭೂಮಿಗೂ ಜಾಗ ಸಿಗುತ್ತಿರಲಿಲ್ಲ. ಹಾಗಾಗಿ ಉದಾರ ದಾನಿಗಳನ್ನು ನೆನೆಯಬೇಕಿರುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.

ತಾಲೂಕಿನಲ್ಲಿ ಒಟ್ಟು 51 ಶಾಲೆಗಳಿಗೆ ದಾನಿಗಳು ಭೂಮಿ ನೀಡಿದ್ದಾರೆ. ಈಗಾಗಲೇ ಶಾಲೆಗಳಲ್ಲಿ ದಾನಿಗಳ ಭಾವಚಿತ್ರ ಅಳವಡಿಸಲಾಗಿದೆ ಎಂದು ಹೇಳಿದ ಅವರು, ಸಮುದಾಯ, ಸಂಘ-ಸಂಸ್ಥೆಗಳು ಹಾಗೂ ವೈಯಕ್ತಿಕ ನೆರವಿನಿಂದ ತಾಲೂಕಿನಲ್ಲಿ ಒಟ್ಟು 85 ಶಾಲೆಗಳಿಗೆ ಒಂದು ಕೋಟಿ ರು. ವೆಚ್ಚದಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. 50 ಶಾಲೆಗಳನ್ನು ಸ್ಮಾರ್ಟ್‌ ಆಗಿ ಪರಿವರ್ತಿಸಲಾಗಿದೆ. ತಾಲೂಕಿನಲ್ಲಿ ಸರ್ಕಾರಿ ಶಾಲೆಗಳು ಸುಧಾರಣೆ ಕಾಣುವ ವರೆಗೆ ಸನ್ಮಾನ ಸ್ವೀಕರಿಸದೇ ಇರಲು ನಿರ್ಧರಿಸಿದ್ದೇನೆ. ಶಿಕ್ಷಕರು ದೃಢಸಂಕಲ್ಪ ಮಾಡಿ, ಸಮುದಾಯ ಸಾಥ್ ನೀಡಿದರೆ ಶೈಕ್ಷಣಿಕವಾಗಿ ಬದಲಾವಣೆ ತರುವುದು ಸುಲಭ ಸಾಧ್ಯವಾಗಲಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಹಾವೇರಿಯ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಶಿಕ್ಷಕರು ಸಮರ್ಪಣಾ ಮನೋಭಾವನೆಯಿಂದ ಶಿಕ್ಷಣ ನೀಡಿದರೆ ವಿದ್ಯಾರ್ಥಿಗಳು ದೇವರ ರೂಪದಲ್ಲಿ ಕಾಣಲಿದ್ದಾರೆ. ಬದುಕಿಗೆ ಬೇಕಿರುವ ಮೌಲ್ಯಗಳನ್ನು ಬಿತ್ತುವ ಕೆಲಸವನ್ನು ಶಿಕ್ಷಕರು ಶ್ರದ್ಧೆಯಿಂದ ನಿರ್ವಹಿಸಬೇಕಿದೆ ಎಂದು ಹೇಳಿದ ಅವರು, ಸಮುದಾಯದ ಸಹಕಾರದಿಂದ ಸರ್ಕಾರಿ ಶಾಲೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಕೆಲಸ ಹಾನಗಲ್ ತಾಲೂಕಿನಲ್ಲಿ ಮಾದರಿಯಾಗಿ ನಡೆದಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಸಮ್ಮುಖ ವಹಿಸಿದ್ದ ಹೋತನಹಳ್ಳಿಯ ಸಿದ್ಧಾರೂಢ ಮಠದ ಸದ್ಗುರು ಶಂಕರಾನಂದ ಸ್ವಾಮೀಜಿ ಮಾತನಾಡಿ, ಶಿಕ್ಷಣದಿಂದ ಮಾತ್ರ ವಿಕಾಸ ಸಾಧ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರು ಮುಂದಾಗಬೇಕಿದೆ ಎಂದರು.

ಗ್ರಾಪಂ ಅಧ್ಯಕ್ಷ ಈರಪ್ಪ ಜಾಡರ, ಎಸ್‌ಡಿಎಂಸಿ ಅಧ್ಯಕ್ಷ ಅಶೋಕ ಸಂಶಿ, ಮುಖ್ಯೋಪಾಧ್ಯಾಯ ಜಗದೀಶ ಮಡಿವಾಳರ, ಪ್ರಮುಖರಾದ ಶಿವಶಂಕ್ರಯ್ಯ ಹಿರೇಮಠ, ಬಸವಣ್ಣೆಪ್ಪ ಕರಿಯಪ್ಪನವರ, ಪುಟ್ಟಪ್ಪ ನರೇಗಲ್, ಎಸ್.ಜಿ. ಕೋಟಿ, ಡಿ.ಡಿ. ಹಾಲುಂಡಿ, ಪಿಡಿಒ ಆರ್.ವೈ. ಹನಕನಹಳ್ಳಿ, ಬಸಪ್ಪ ಒಡೆಯರ, ಕಲ್ಲಪ್ಪ ಬರದೂರ, ನವೀದ್ ಅಲಿ ಹರವಿ, ಬಸಪ್ಪ ಮಾದಮ್ಮನವರ, ಡಾ. ಸುರೇಶ ಮಡಿವಾಳರ, ಮಹಲಿಂಗಪ್ಪ ಬೈಲವಾಳ, ಸಹದೇವಪ್ಪ ಸಂಶಿ, ಎಸ್.ಜಿ. ಹಿರೇಮಠ, ಎಂ.ಎ. ನೆಗಳೂರ, ಉಮೇಶ ಗೌಳಿ, ಚಂದ್ರು ಶಿವಬಸಕ್ಕನವರ, ಬಸವರಾಜ ಈಳಿಗೇರ, ಗೌರಮ್ಮ, ಶೇಕಯ್ಯ ಈಳಿಗೇರ, ಚಂದ್ರಪ್ಪ ಅಗಡಿ ಇದ್ದರು.

Share this article