ಹನುಮಸಾಗರ: ಜ್ಞಾನ ಸಂಗಮ ಸಂಸ್ಥೆ ಕಲಾವಿದರನ್ನು ಪೋಷಿಸುವ ಮತ್ತು ಯುವ ಕಲಾವಿದರಿಗೆ ವೇದಿಕೆ ಕಲ್ಪಿಸುವ ಮಹತ್ತರ ಜವಾಬ್ದಾರಿ ವಹಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದು ನಿಸರ್ಗ ಸಂಗೀತ ಶಾಲೆಯ ಅಧ್ಯಕ್ಷ ಮಲ್ಲಯ್ಯ ಕೋಮಾರಿ ಹೇಳಿದರು.ಗ್ರಾಮದ ಬನಶಂಕರಿ ದೇವಸ್ಥಾನದಲ್ಲಿ ಜಾತ್ರೆ ಮಹೋತ್ಸವ ಅಂಗವಾಗಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಹನುಮಸಾಗರ ಕಲಾವಿದರ ತವರೂರು ಎನಿಸಿಕೊಂಡಿದೆ. ಎಲೆಮರೆಯ ಕಾಯಿಯಂತೆ ಇರುವ ಯುವ ಸಂಗೀತ ಕಲಾವಿದರನ್ನು ಸಂಘ ಸಂಸ್ಥೆಯು ಪ್ರೋತ್ಸಾಹಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.ಸಂಸ್ಥೆಯ ಸಂಸ್ಥಾಪಕ ವಸಂತ ಸಿನ್ನೂರ್ ಮಾತನಾಡಿ, ಪರಿಸರ ಸಂಗಮ ಸಂಸ್ಥೆ ಶಿಕ್ಷಣ, ಆರೋಗ್ಯ ಸಂರಕ್ಷಣೆ ಹಾಗೂ ನೇಕಾರಿಕೆಯನ್ನು ಪುನರುಜ್ಜೀವನ ಪಡಿಸುವಲ್ಲಿ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ ಎಂದರು.ಕನಾಥ ಮೆದಿಕೇರಿ ಪ್ರಾಸ್ತಾವಿಕ ಮಾತನಾಡಿ, ಭಾರತ'''' ಎಂಬ ಹೆಸರೇ ಅನಾದಿ ಕಾಲದಿಂದ ಈ ನೆಲದಲ್ಲಿ ಹರಿದುಬಂದ ಸಂಗೀತ ಪರಂಪರೆ ಪ್ರತಿಬಿಂಬಿಸುತ್ತದೆ. ಎಲ್ಲರೂ ಸಂಗೀತವನ್ನು ಆಳವಾಗಿ ಅಧ್ಯಯನ ಮಾಡಿ ಹಾಡಲು ಅಥವಾ ವಾದ್ಯಗಳನ್ನು ನುಡಿಸಲು ಸಾಧ್ಯವಾಗದೇ ಇರಬಹುದು, ಆದರೆ ನಾವೆಲ್ಲರೂ ಸಂಗೀತವನ್ನು ಸ್ವಲ್ಪ ಮಟ್ಟಿಗಾದರೂ ಅರ್ಥಮಾಡಿಕೊಂಡು, ಮೆಚ್ಚಿ, ಅದರ ಮಾಧುರ್ಯ ಆಸ್ವಾದಿಸುವ ಸಾಮರ್ಥ್ಯ ಹೊಂದಿರಬೇಕು ಎಂದರು.ಸನಾತನ ಧರ್ಮದಲ್ಲಿ ಪರಮಾತ್ಮನನ್ನು ನಾದಸ್ವರೂಪನೆಂದು ವರ್ಣಿಸಲಾಗಿದೆ. ನಾವು ಆತನನ್ನು ನಾದಬ್ರಹ್ಮನೆಂದು ಕರೆಯುತ್ತೇವೆ. ಸಂಗೀತದ ಉಗಮಕ್ಕೆ ಶಬ್ದ ಅಥವಾ ನಾದವೇ ಕಾರಣವೆಂಬುದು ನಮಗೆಲ್ಲ ತಿಳಿದಿರುವ ವಿಷಯ. ಆದರೆ ನಾದವೇ ಇಡೀ ಸೃಷ್ಟಿಯ ಉಗಮದ ಮೂಲವೆಂದು ಸನಾತನ ಧರ್ಮವು ಸಾರುತ್ತದೆ. ಇದಕ್ಕೆ ತರ್ಕಬದ್ಧ ಕಾರಣವೂ ಇದೆ. ಸಂಗೀತ ಆಲಿಸುವುದರಿಂದ ನಮ್ಮ ಎಲ್ಲ ವಿಚಾರಗಳು ಶೂನ್ಯವಾಗಿ, ಎಲ್ಲ ರೋಗಗಳಿಂದ ಮುಕ್ತರಾಗುತ್ತೇವೆ ಎಂದರು.ಸುಗಮ ಸಂಗೀತ ಕಾರ್ಯಕ್ರಮವನ್ನು ಕಲಾವಿದರಾದ ವೆಂಕಟೇಶ ಹೊಸಮನಿ, ಯುವರಾಜ ಹಿರೇಮಠ, ತಬಲಾ ಸಾಥ್ ಮಣಿಕಂಠ ಬಡಿಗೇರ, ಹಾರ್ಮೋನಿಯಂ ವಿನೋದ ಪಾಟೀಲ, ಮರಿಸ್ವಾಮಿ ಅವರಿಂದ ಸಂಗೀತ ಕಾರ್ಯಕ್ರಮ ನೆರವೇರಿತು. ಬಳಿಕ ದೇವಾಂಗ ಸಮಾಜ ಹಾಗೂ ಸನ್ಮಾನ ಸಂಗಮ ಸಂಸ್ಥೆಯಿಂದ ಕಲಾವಿದರನ್ನು ಸನ್ಮಾನಿಸಲಾಯಿತು.ಪ್ರಮುಖರಾದ ಸಿನ್ನೂರ ಗ್ರಾಪಂ ಸದಸ್ಯ ಮಂಜುನಾಥ ಹುಲ್ಲೂರ, ನಾಗರಾಜ ಕಂದಗಲ್, ದೇವಾಂಗ ಸಮಾಜದ ಅಧ್ಯಕ್ಷ ಶಂಕ್ರಪ್ಪ ಸಿನ್ನೂರ, ಉಪಾಧ್ಯಕ್ಷ ಸೂರ್ಯನಾರಾಯಣ ಸಿನ್ನೂರ, ವೀರಪ್ಪ ಸಿನ್ನೂರ, ರವಿ ಸಿನ್ನೂರ, ಶ್ರೀನಿವಾಸ ಸಿನ್ನೂರ, ಮಹೇಶ ಹುಲಮನಿ, ಹನಮಂತಗೌಡ ಸಿನ್ನೂರ, ಶಂಕರ ಹುಲಮನಿ, ಸಂಗಮ ಸಂಸ್ಥೆಯ ಸಂಸ್ಥಾಪಕ ಖಾಜಾಸಾಬ ಮುದರೂರ ಇದ್ದರು.