ಮಡಿಕೇರಿ : ತಾಲೂಕು ಮಟ್ಟದಲ್ಲಿಯೇ ಎಲ್ಲಾ ರೀತಿಯ ಪ್ರಕರಣಗಳನ್ನು ಇತ್ಯರ್ಥಪಡಿಸುವುದರಿಂದ ಕಕ್ಷಿದಾರರಿಗೆ ಅನುಕೂಲವಾಗಲಿದೆ. ಆ ನಿಟ್ಟಿನಲ್ಲಿ ನ್ಯಾಯಯುತ ಸೌಲಭ್ಯಗಳು ಎಲ್ಲರಿಗೂ ದೊರೆಯಬೇಕು. ನ್ಯಾಯಾಲಯದಲ್ಲಿ ಹಲವು ರೀತಿಯ ಪ್ರಕರಣಗಳನ್ನು ಇತ್ಯರ್ಥಪಡಿಸಲು ಹಿರಿಯ ಸಿವಿಲ್ ನ್ಯಾಯಾಲಯ ಅತ್ಯಗತ್ಯ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಹೇಳಿದರು.ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕು ಕೇಂದ್ರದಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಹಿರಿಯ ಸಿವಿಲ್ ನ್ಯಾಯಾಧೀಶರ ಮತ್ತು ಜೆಎಂಎಫ್‌ಸಿ ನ್ಯಾಯಾಲಯವನ್ನು ಉದ್ಘಾಟಿಸಿದರು. ಹಾಗೆಯೇ ಇ-ಸೇವಾ ಕೇಂದ್ರಕ್ಕೂ ಚಾಲನೆ ನೀಡಿ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದಲ್ಲಿ ಪ್ರತಿಯೊಬ್ಬ ಶ್ರೀಸಾಮಾನ್ಯನಿಗೂ ಕಾನೂನು ಸೌಲಭ್ಯಗಳು ತಲುಪಬೇಕು ಎಂಬ ಉದ್ದೇಶದಿಂದ ಪೊನ್ನಂಪೇಟೆ ತಾಲೂಕು ಕೇಂದ್ರದಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಹಿರಿಯ ಸಿವಿಲ್ ನ್ಯಾಯಾಲಯ ಉದ್ಘಾಟಿಸಲಾಗಿದೆ ಎಂದು ಹೇಳಿದರು.
ಪೊನ್ನಂಪೇಟೆಯಲ್ಲಿ ಬಹು ವರ್ಷಗಳ ಕನಸು ನನಸಾಗಿದೆ. ಅನೇಕ ಹಿರಿಯ ಹೋರಾಟಗಾರರ ಫಲವಾಗಿ ಪೊನ್ನಂಪೇಟೆ ತಾಲೂಕು ಕೇಂದ್ರದಲ್ಲಿ ಹಿರಿಯ ಸಿವಿಲ್ ನ್ಯಾಯಾಲಯ ಆರಂಭವಾಗಿದೆ ಎಂದು ತಿಳಿಸಿದರು.
ಕೊಡಗು ಜಿಲ್ಲೆಯ ಬುಡಕಟ್ಟು ಜನರು ಆರೋಗ್ಯ ಕೇಂದ್ರಕ್ಕೆ ಹೋಗುವುದು ಕಡಿಮೆ. ಆದ್ದರಿಂದ ಸಂಚಾರಿ ಆರೋಗ್ಯ ಸೇವೆ ಕಲ್ಪಿಸಲಾಗಿದೆ. ಅದೇ ರೀತಿ ನ್ಯಾಯಾಲಯ ಹತ್ತಿರ ಇದ್ದಲ್ಲಿ ಕಕ್ಷಿದಾರರು ತೆರಳಿ ನ್ಯಾಯ ಪಡೆಯುತ್ತಾರೆ ಎ.ಎಸ್.ಪೊನ್ನಣ್ಣ ಅವರು ಅಭಿಪ್ರಾಯಪಟ್ಟರು. ಕರ್ನಾಟಕ ಹೈಕೋರ್ಟ್‌ನ ನ್ಯಾಯಾಧೀಶ ಎಂ.ಜಿ.ಶುಕುರೆ ಕಮಲ್ ಅವರು ಮಾತನಾಡಿ ಸಮಾಜದಲ್ಲಿ ಪ್ರತಿಯೊಬ್ಬರೂ ಶಾಂತಿಯುತವಾಗಿ ಜೀವನ ನಡೆಸಬೇಕು. ಯಾರಲ್ಲೂ ಸಹ ವ್ಯಾಜ್ಯಗಳು ಇರಬಾರದು. ಆ ನಿಟ್ಟಿನಲ್ಲಿ ಬದುಕು ನಡೆಸುವತ್ತ ಗಮನಹರಿಸಬೇಕು ಎಂದು ಇದೇ ಸಂದರ್ಭದಲ್ಲಿ ಸಲಹೆ ಮಾಡಿದರು. ರಾಜ್ಯ ಹೈಕೋರ್ಟ್ ನ್ಯಾಯಾಧೀಶರು ಹಾಗೂ ಕೊಡಗು ಜಿಲ್ಲಾ ನ್ಯಾಯಾಂಗ ಆಡಳಿತಾಧಿಕಾರಿ ಎಸ್.ರಾಚಯ್ಯ ಅವರು ಮಾತನಾಡಿ ಹೊಸ ನ್ಯಾಯಾಲಯ ಆರಂಭವಾಗಿದೆ. ಪ್ರಕರಣಗಳನ್ನು ಆದಷ್ಟು ಇತ್ಯರ್ಥಪಡಿಸಲು ಪ್ರಯತ್ನಿಸಬೇಕು. ಕಕ್ಷಿದಾರರಿಗೆ ನ್ಯಾಯ ಒದಗಿಸಬೇಕು ಎಂದರು.ಹೈಕೋರ್ಟ್ ನ್ಯಾಯಾಧೀಶ ಸಿ.ಎಂ.ಪೂಣಚ್ಚ ಅವರು ಮಾತನಾಡಿ ಪೊನ್ನಂಪೇಟೆಯಲ್ಲಿ ಎಲ್ಲಾ ರೀತಿಯ ನ್ಯಾಯಾಂಗ ವ್ಯವಸ್ಥೆ ಒದಗಿಸಿರುವುದು ಇಲ್ಲಿನ ಜನರಿಗೆ ಅನುಕೂಲವಾಗಿದೆ. ಆ ನಿಟ್ಟಿನಲ್ಲಿ ನ್ಯಾಯಾಂಗ ಸೌಲಭ್ಯಗಳು ತಲುಪಬೇಕು ಎಂದರು.