ಕನ್ನಡ ಆಡಳಿತ ಭಾಷೆಯಾಗಿ ಅನುಷ್ಠಾನವಾಗಲಿ

KannadaprabhaNewsNetwork | Published : Nov 30, 2024 12:47 AM

ಸಾರಾಂಶ

ಭಾಷೆ ಎಂಬುದು ದೇವರು ಮಾನವನಿಗೆ ಕೊಟ್ಟ ವರವಾಗಿದ್ದು ಮನುಷ್ಯ ಮನುಷ್ಯರ ನಡುವೆ ಉತ್ತಮ ಬಾಂಧವ್ಯ ಹಂಚಿಕೊಳ್ಳಲು ಭಾಷೆ ಸಹಕಾರಿ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್‍ನ ನಿಕಟ ಪೂರ್ವ ಅಧ್ಯಕ್ಷ ಹರ್ತಿಕೋಟೆ ಮಹಾಸ್ವಾಮಿ ಹೇಳಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಭಾಷೆ ಎಂಬುದು ದೇವರು ಮಾನವನಿಗೆ ಕೊಟ್ಟ ವರವಾಗಿದ್ದು ಮನುಷ್ಯ ಮನುಷ್ಯರ ನಡುವೆ ಉತ್ತಮ ಬಾಂಧವ್ಯ ಹಂಚಿಕೊಳ್ಳಲು ಭಾಷೆ ಸಹಕಾರಿ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್‍ನ ನಿಕಟ ಪೂರ್ವ ಅಧ್ಯಕ್ಷ ಹರ್ತಿಕೋಟೆ ಮಹಾಸ್ವಾಮಿ ಹೇಳಿದರು.

ನಗರದ ಅಸಂಷನ್ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯೋಜಿಸಿದ್ದ ಕನ್ನಡ ಪ್ರಜ್ಞೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಭಾಷೆಯು ಸರಳ, ಸುಲಲಿತ ಹಾಗೂ ಸುಂದರ ಭಾಷೆ. ಕನ್ನಡ ಭಾಷೆಗೆ ಮೊದಲ ಬಾರಿಗೆ ಪ್ರಾಮುಖ್ಯತೆ ಸಿಕ್ಕಿದ್ದು ಕದಂಬರ ಅರಸ ಮಯೂರ ವರ್ಮರ ಆಳ್ವಿಕೆಯಲ್ಲಿ ಕನ್ನಡ ಭಾಷೆ ಉಳಿಯಬೇಕಾದರೆ ಕನ್ನಡ ಆಡಳಿತ ಭಾಷೆಯಾಗಿ ಪರಿಪೂರ್ಣವಾಗಿ ಅನುಷ್ಠಾನಗೊಳ್ಳಬೇಕು. ಕನ್ನಡ ಮಾಧ್ಯಮ ಓದಿದ ವಿದ್ಯಾರ್ಥಿಗಳಿಗೆ ಉದ್ಯೋಗದಲ್ಲಿ ಪ್ರತ್ಯೇಕ ಮೀಸಲಾತಿ ನೀಡಿದಾಗ ಮಾತ್ರ ಹೆಚ್ಚು ಹೆಚ್ಚು ಕನ್ನಡ ಭಾಷೆ ಓದಲು ವಿದ್ಯಾರ್ಥಿಗಳು ಮುಂದಾಗುತ್ತಾರೆ. ಇಲ್ಲವಾದರೆ ಕನ್ನಡದ ಉಳಿವು ಅಸಾಧ್ಯ. ಕನ್ನಡ ನಾಮಫಲಕ ಕಡ್ಡಾಯವಾಗಿ ಹಾಕಬೇಕು, ಕನ್ನಡ ಬಾರದವರಿಗೆ ಕನ್ನಡ ಕಲಿಕಾ ಕೇಂದ್ರ ತೆರೆದು ಕನ್ನಡ ಕಲಿಸಬೇಕು ಎಂದರು.

ಫಾದರ್ ಫೌಲ್ ಮಾತನಾಡಿ, ಕನ್ನಡ ಭಾಷೆ ನವೆಂಬರ್ ತಿಂಗಳಿಗೆ ಸೀಮಿತವಾಗದೆ ವರ್ಷದ ಎಲ್ಲಾ ದಿನಗಳಲ್ಲೂ ಕನ್ನಡವನ್ನು ಪೋಷಿಸಿ ಬೆಳೆಸುವ ಕೆಲಸವಾಗಬೇಕು. ಕನ್ನಡ ಸಾಹಿತ್ಯ ಎಲ್ಲರನ್ನೂ ಒಳಗೊಳ್ಳುವ ಸಾಹಿತ್ಯ. ಮಾನವೀಯತೆಯ ಪ್ರತೀಕವಾಗಿದೆ ಎಂದರು.

ಮುಖ್ಯ ಶಿಕ್ಷಕ ಆರ್.ದಯಾನಂದ್ ಮಾತನಾಡಿ, ಸಾಮರಸ್ಯ, ಸಮಗ್ರತೆ, ಐಕ್ಯತೆ ಬೆಳೆಸಿ ಅನ್ಯ ಭಾಷಿಕರ ನಡುವೆ ಬದುಕಲು ಕನ್ನಡ ಸಹಕರಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ಆಂಗ್ಲಭಾಷಾ ಮುಖ್ಯ ಶಿಕ್ಷಕ ರಾಘವೇಂದ್ರ, ಶಿಕ್ಷಣ ಸಂಯೋಜಕ ಜಾಫರ್ ಸಾದಿಕ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಚಿದಾನಂದ್, ಸಿಸ್ಟರ್‍ ಗಳಾದ ಮಾರ್ಥಾ, ವೆರೋನಿಕಾ, ಮಂಜುನಾಥ್, ಯತೀಶ್, ಮಾಲತೇಶ್, ತನುಜ ಇದ್ದರು.

Share this article