ಗದಗ: ಕನ್ನಡಿಗರಾಗಿರುವ ನಾವು ಕನ್ನಡವನ್ನು ಹೆತ್ತ ತಾಯಿಯಂತೆ ಗೌರವಿಸಬೇಕು. ಇಂಗ್ಲಿಷ್ ಅನಿವಾರ್ಯವಾಗಿದ್ದರೂ ನಮ್ಮ ಆದ್ಯತೆ ಕನ್ನಡವಾಗಿರಲಿ ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಹೇಳಿದರು.
ನಗರದ ತೋಂಟದಾರ್ಯ ಮಠದಲ್ಲಿ ನಡೆದ 2719ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಕುವೆಂಪು ಹೇಳುವಂತೆ ಕನ್ನಡವೆನ್ನುವುದು ಮನೆಯ ಬಾಗಿಲಾದರೆ, ಇತರ ಭಾಷೆಗಳು ಮನೆಯ ಕಿಡಕಿಗಳಂತಿರಲಿ. ಎಲ್ಲ ದಿಕ್ಕಿನಿಂದಲೂ ಜ್ಞಾನದ ಬೆಳಕು ಹರಿದು ಬಂದಾಗ ವ್ಯಕ್ತಿ ಪರಿಪೂರ್ಣನಾಗುತ್ತಾನೆ. ಪ್ರತಿಯೊಬ್ಬರೂ ಆಡುವ ಭಾಷೆಗಳು ಭಿನ್ನವಾದರೂ ಆಲೋಚಿಸುವುದು ಮಾತೃಭಾಷೆಯಲ್ಲಿಯೇ ಎನ್ನುವುದು ವಿಶೇಷ ಎಂದು ಹೇಳಿದರು.ವ್ಯವಹರಿಸುವಾಗ ವಿಶೇಷವಾಗಿ ಕನ್ನಡ ಭಾಷೆಯನ್ನು ಬಳಸಬೇಕು. ಕನ್ನಡದಲ್ಲಿ ಅಧ್ಯಯನ ಮಾಡುವುದರಿಂದ ನಮ್ಮ ಬೌದ್ಧಿಕ ಶಕ್ತಿ ಹೆಚ್ಚಿ ವಿಕಾಸಗೊಳ್ಳಲಿಕ್ಕೆ ಸಾಧ್ಯವಾಗುತ್ತದೆ. ಕನ್ನಡ ಭಾಷೆ ನಮ್ಮ ತಾಯಿ. ಪ್ರತಿಯೊಬ್ಬರೂ ಮಾತೃಭಾಷೆಯ ಬಗ್ಗೆ ಅಭಿಮಾನ ಮತ್ತು ಪ್ರೀತಿಯನ್ನು ಹೊಂದಬೇಕು. ಬಸವಾದಿ ಶಿವಶರಣರು, ದಾಸರು, ಪಂಪ, ರನ್ನ ರಾಘವಾಂಕ, ಚಾಮರಸನಂತಹ ಅನೇಕ ಶ್ರೇಷ್ಠ ಕವಿಗಳು ಕನ್ನಡ ಭಾಷೆಯನ್ನು ಸಮೃದ್ಧಗೊಳಿಸಿದ್ದಾರೆ ಎಂದರು.ಕೆವಿಎಸ್‌ಆರ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಪ್ರೊ. ಬಿ.ಆರ್. ಜಾಲಿಹಾಳ ಮಾತನಾಡಿ, ಬೇರೆ ಭಾಷೆಗಳನ್ನು ಕಲಿಯುವ ಜತೆಗೆ ನಮ್ಮ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಹೊಂದೋಣ ಎಂದರು.
ಅಲ್ಲಮಪ್ರಭು ಬೆಟ್ಟದೂರ ಮಾತನಾಡಿ, ಗುರುವಿರಲಿ, ಜಂಗಮವಿರಲಿ, ಲಿಂಗವಿರಲಿ ಎಲ್ಲವೂ ಕಾಯಕದ ಹೊಳಹು. ಕಾಯಕದಲ್ಲಿ ತರತಮ ಸಲ್ಲದು. ಶರಣರು ದೈಹಿಕ ಮತ್ತು ಬೌದ್ಧಿಕ ಎಲ್ಲ ಕಾಯಕಗಳು ಸಮಾನ ಎಂದು ತಿಳಿಸಿಕೊಟ್ಟಿದ್ದಾರೆ. ಜ್ಞಾನಕ್ಕಿಂತ ಮುಖ್ಯವಾದುದು ಕ್ರಿಯಾಜ್ಞಾನ. ಪಡೆದುಕೊಂಡಂತಹ ಜ್ಞಾನವನ್ನು ಅಳವಡಿಸಿಕೊಳ್ಳದೆ ಹೋದರೆ ಜ್ಞಾನಕ್ಕೆ ಅರ್ಥವಿಲ್ಲ. ಜ್ಞಾನಕ್ಕೆ ಅರ್ಥ ಬರಬೇಕಾದರೆ ಕ್ರಿಯೆ ಬೇಕು. ಕನ್ನಡದ ಬಗ್ಗೆ ಪ್ರೀತಿ ಇರಬೇಕು. ಕನ್ನಡದ ಬಗ್ಗೆ ಪ್ರೀತಿ ಕಡಿಮೆಯಾಗಲು ಮೂಲ ಕಾರಣ ಜಾಗತೀಕರಣ. ಜಾಗತೀಕರಣದಿಂದಾಗಿ ಇಂಗ್ಲಿಷ್‌ಗೆ ಎಲ್ಲಿಲ್ಲದ ಪ್ರಾಶಸ್ತ್ಯ ಒದಗಿದೆ. ಬಹುರಾಷ್ಟ್ರೀಯ ಕಂಪನಿಗಳಲ್ಲಿ ಇಂಗ್ಲಿಷ್ ಕಲಿತರೆ ಮಾತ್ರ ಉದ್ಯೋಗ ಎಂಬುದು ಸಾಮಾನ್ಯನಿಗೂ ತಿಳಿದಿದೆ. ಹೀಗಾಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.ಈ ವೇಳೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಲ್ಲಮಪ್ರಭು ಬೆಟ್ಟದೂರು ಹಾಗೂ ಗದಗ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಾಲಚಂದ್ರ ಭರಮಗೌಡ್ರ ಅವರನ್ನು ಸನ್ಮಾನಿಸಲಾಯಿತು.
ಧರ್ಮಗ್ರಂಥ ಪಠಣವನ್ನು ವೈಭವ ಸಿ. ಗಾಣಿಗೇರ, ವಚನ ಚಿಂತನೆಯನ್ನು ಖುಷಿ ಖಟವಟೆ ನೆರವೇರಿಸಿದರು. ದಾಸೋಹ ಸೇವೆಯನ್ನು ನಿವೃತ್ತ ಶಿಕ್ಷಕ ಎಸ್.ಆರ್. ನರೇಗಲ್ ವಹಿಸಿಕೊಂಡಿದ್ದರು. ಗುರುಬಸವ ಸಿಬಿಎಎಸ್‌ಇ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ನಡೆಯಿತು. ವಚನ ಸಂಗೀತವನ್ನು ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ನಡೆಸಿಕೊಟ್ಟರು.ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ವೀರಣ್ಣ ಗೋಟಡಕಿ, ಸೋಮಶೇಖರ ಪುರಾಣಿಕ, ವಿದ್ಯಾ ಗಂಜಿಹಾಳ, ಮಹೇಶ್ ಗಾಣಿಗೇರ, ನಾಗರಾಜ ಹಿರೇಮಠ, ಬಸವರಾಜ ಕಾಡಪ್ಪನವರ ಹಾಗೂ ಶಿವಾನಂದ ಹೊಂಬಳ ಇದ್ದರು. ಮಂಜುಳಾ ಹಾಸಲಕರ ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಚೇರ್‌ಮನ್ ಐ.ಬಿ. ಬೆನಕೊಪ್ಪ ಪರಿಚಯಿಸಿದರು.