ಮಲ್ಲಿಕಾರ್ಜುನ ದಲಿತರನ್ನು ಸಿಎಂ ಮಾಡಲಿ, ಇಲ್ಲವೇ ಅವರೇ ಆಗಲಿ : ಸಂಸದ ಗೋವಿಂದ ಕಾರಜೋಳ

KannadaprabhaNewsNetwork | Updated : Feb 24 2025, 01:14 PM IST

ಸಾರಾಂಶ

ಸಿದ್ಧರಾಮಯ್ಯ ರಾಜೀನಾಮೆ ನೀಡಿ, ಮತ್ತೊಮ್ಮೆ ವಿಧಾನಸಭೆ ಚುನಾವಣೆ ಎದುರಿಸಲಿ ಎಂದು ಆಗ್ರಹಿಸಿದ ಗೋವಿಂದ ಕಾರಜೋಳ

  ಬೆಳಗಾವಿ :  ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್‌ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲವಾಗಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದಲಿತ ಮುಖ್ಯಮಂತ್ರಿಗೆ ಅವಕಾಶ ನೀಡಬೇಕು ಎಂದು ಸಂಸದ ಗೋವಿಂದ ಕಾರಜೋಳ ಆಗ್ರಹಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿನ ಬೆಳಗಾದರೇ ದಲಿತ ಸಿಎಂ ಕುರಿತು ಚರ್ಚೆ ಜಾರಿಯಲ್ಲಿರುತ್ತದೆ. ಎಐಸಿಸಿ ಅಧ್ಯಕ್ಷರಾಗಿರುವ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬಹುಮತವಿದ್ದು, ದಲಿತರಿಗೆ ಸಿಎಂ ಸ್ಥಾನ ಘೋಷಿಸಬೇಕು. ಜಿ.ಪರಮೇಶ್ವರ, ಕೆ.ಎಚ್‌.ಮುನಿಯಪ್ಪ ಅವರನ್ನಾದರೂ ಮಾಡಲಿ. ಇಲ್ಲವೆ ಯಾವುದೇ ದಲಿತ ಶಾಸಕರನ್ನು ಅಥವಾ ಸ್ವತಃ ತಾವೇ ಖರ್ಗೆ ಅವರು ಸಿಎಂ ಆಗಲಿ. ಒಂದು ಬಾರಿ ಕರ್ನಾಟಕದಲ್ಲಿ ದಲಿತ ಶಾಸಕರಿಗೆ ಮುಖ್ಯಮಂತ್ರಿಯಾಗಲೂ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಅಧಿಕಾರಕ್ಕೆ ಬಂದು ಸಿದ್ಧರಾಮಯ್ಯನವರು ತಮ್ಮ ಭಂಡತನವನ್ನು ಬಿಟ್ಟು ತಮ್ಮ ಚುನಾವಣಾ ಪ್ರಣಾಳಿಕೆಯನ್ನು ಒಮ್ಮೆ ಸರಿಯಾಗಿ ನೋಡಬೇಕು. ಪಂಚ ಗ್ಯಾರಂಟಿ ಯೋಜನೆಗಳನ್ನು ಕೂಡ ಸರಿಯಾಗಿ ನೀಡುತ್ತಿಲ್ಲ. ಪೊಳ್ಳು ಭರವಸೆಗಳನ್ನು ನೀಡಿ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. 2024-2025 ರಲ್ಲಿ ₹3 ಲಕ್ಷ 70 ಸಾವಿರ ಕೋಟಿ ಗಾತ್ರದ ಬಜೆಟ್‌ ಮಂಡಿಸಿದ್ದರು. ಆದರೇ ಇದರಲ್ಲಿ ಸಂಗ್ರಹವಾಗಿದ್ದು ಕೇವಲ ₹1 ಲಕ್ಷ 72 ಸಾವಿರ ಕೋಟಿ ಮಾತ್ರ. ₹ 64 ಸಾವಿರ ಕೋಟಿ ಗುತ್ತಿಗೆದಾರರ ಬಿಲ್ ನೀಡಿಲ್ಲ. ಹಲವರು ಆತ್ಮಹತ್ಯೆ ಮಾಡಿಕೊಂಡರೇ, 27 ಗುತ್ತಿಗೆದಾರರು ರಾಜ್ಯಪಾಲರಿಗೆ ದಯಾಮರಣ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಭ್ರಷ್ಟಾಚಾರಕ್ಕೆ ಸೋತು ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಸಿದ್ಧರಾಮಯ್ಯನವರು ಎಲ್ಲ ರಂಗದಲ್ಲಿಯೂ ವಿಫಲರಾಗಿದ್ದಾರೆ. ಅಲ್ಲದೇ ಕೃಷ್ಣಾ ಮೇಲ್ದಂಡೆಯಂತಹ ಯೋಜನೆಗಳ ಸದುಪಯೋಗವಾಗುತ್ತಿಲ್ಲ. ಮುಳುಗಡೆಯಾಗುವ ಹಳ್ಳಿಗಳು ಸ್ಥಳಾಂತರವಾಗುತ್ತಿಲ್ಲ. ನಾಡಿನ ಅಭಿವೃದ್ಧಿಯ ಕಳಕಳಿ ಕಾಂಗ್ರೆಸ್‌ ಸರ್ಕಾರಕ್ಕಿಲ್ಲ. ಇಂದೇ ಚುನಾವಣೆ ನಡೆದರೇ ಕಾಂಗ್ರೆಸ್ಸಿಗೆ 20 ಸೀಟು ಕೂಡ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಿದ್ಧರಾಮಯ್ಯನವರ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಗೌರವಯುತವಾಗಿ ಸಿದ್ಧರಾಮಯ್ಯನವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ, ಮತ್ತೊಮ್ಮೆ ವಿಧಾನಸಭೆ ಚುನಾವಣೆ ಎದುರಿಸಬೇಕು ಎಂದ ಅವರು, ಅಧಿಕಾರಕ್ಕಾಗಿ ಸತ್ತ ಪ್ರಾಣಿಗಳನ್ನು ತಿನ್ನಲು ರಣಹದ್ದುಗಳು ಕಚ್ಚಾಡುವಂತೆ ಕಚ್ಚಾಡುತ್ತಿದ್ದಾರೆ. ಕೀಳುಮಟ್ಟದ ಟೀಕೆಯೊಂದಿಗೆ ನಾಲ್ಕು ಗುಂಪುಗಳಾಗಿ ಬಡೆದಾಡುತ್ತಿದ್ದಾರೆ ಎಂದರು.

ಬಿಜೆಪಿಯಲ್ಲಿನ ಭಿನ್ನಾಭಿಪ್ರಾಯವನ್ನು ಹೈಕಮಾಂಡ್ ಸರಿಪಡಿಸಲಿದೆ. ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಇರುವಾಗ ನೂತನ ಅಧ್ಯಕ್ಷ ಆಯ್ಕೆಯ ಪ್ರಶ್ನೆಯೇ ಇಲ್ಲ ಎಂದು ಬಿವೈವಿ ನಾಯಕತ್ವವನ್ನು ಪರೋಕ್ಷವಾಗಿ ಒಪ್ಪಿಕೊಂಡರು.

ಬಸ್‌ ನಿರ್ವಾಹಕ ಮೇಲೆ ಮರಾಠಿ ಯುವಕರು ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಕರ್ನಾಟಕ- ಮಹಾರಾಷ್ಟ್ರ ಉಭಯ ರಾಜ್ಯಗಳ ನಡುವಿನ ಬಸ್‌ ಸಂಚಾರ ಸ್ಥಗಿತಗೊಂಡಿರುವುದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಕೂಡಲೇ ಸರ್ಕಾರ ಇದನ್ನು ಬಗೆಹರಿಸಿ, ಉಭಯ ರಾಜ್ಯಗಳ ನಡುವೆ ಬಸ್‌ ಸೇವೆ ಪುನಾರಂಭವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಗೋವಿಂದ ಕಾರಜೋಳ ಆಗ್ರಹಿಸಿದರು.

Share this article