ಹಾಸನ : ನಾನು ಸ್ಪಷ್ಟವಾಗಿ ಹೇಳುತ್ತೇನೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಿದ್ದರಾಮಯ್ಯನವರೇ ಐದು ವರ್ಷಗಳ ಕಾಲ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಘೋಷಣೆ ಮಾಡಲಿ. ಆ ವೇಳೆ ನಾನು ನನ್ನ ಮಾತು ಹಿಂದಕ್ಕೆ ಪಡೆಯುತ್ತೇನೆ ಎಂದು ವಿಧಾನಸಭಾ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸವಾಲು ಹಾಕಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಪ್ರಸ್ತುತ ಸಿಎಂ ಬದಲಾವಣೆ ಚರ್ಚೆ ಕುರಿತು ಹಾಸನ ಜಿಲ್ಲೆಯ ಆಲೂರಿನ ಧರ್ಮಪುರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿರುತ್ತಾರೆ ಎಂದು ನೇರವಾಗಿ ಹೇಳಲಿ. ಅಷ್ಟು ನಿಖರವಾಗಿ ಹೇಳಿದರೆ, ನಾನು ಈ ಚರ್ಚೆ ಬಿಟ್ಟು ಬಿಡ್ತೀನಿ ಎಂದರು. ನಾನು ಹೇಳಿದ್ದು ನಿಜ ಅಂತ ಈಗಾಗಲೇ ಸಾಬೀತಾಗಿದೆ. ಕಾಂಗ್ರೆಸ್‌ನಿಂದಲೇ ಶಾಸಕರು ಸಿಎಂ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ, ರಾಮನಗರ ಶಾಸಕರಿಗೆ ನೋಟಿಸ್ ಕೊಟ್ಟ ಮೇಲೂ ತಮ್ಮ ಹೇಳಿಕೆ ತಿದ್ದಿ ಕೊಳ್ಳಲಿಲ್ಲ, ಈಗ ಅವರನ್ನು ಪಕ್ಷದಿಂದ ಸಸ್ಪೆಂಡ್ ಮಾಡ್ತಾರಾ?, ಗುಂಡಿಟ್ಟು ಹೊಡಿತಾರಾ?, ಯೋಗ್ಯತೆ ಇದ್ದರೆ ಏನು ಬೇಕಾದರೂ ಮಾಡಲಿ, ನಾವು ನೋಡೋಣ ಎಂದು ಅವರು ಪ್ರಹಸನವಾಗಿ ಪ್ರತಿಕ್ರಿಯಿಸಿದರು.
ನಾವು ಈ ಸರ್ಕಾರ ಬೀಳಿಸಲು ಹೋಗಿಲ್ಲ, ಅವರು ತಾವೇ ಬೀಳುತ್ತಾರೆ, ನಮಗೆ ಯಾರು ಮುಖ್ಯಮಂತ್ರಿ ಎಂಬುದು ಮುಖ್ಯವಲ್ಲ, ಕಾಂಗ್ರೆಸ್ ಪಕ್ಷದ ಒಳಜಗಳವೇ ಈ ನಾಯಕತ್ವ ಬದಲಾವಣೆಗೆ ಕಾರಣ. ಪ್ರತಿದಿನ ಮಾಧ್ಯಮಗಳಲ್ಲಿ ಸಿಎಂ ಬದಲಾವಣೆ ವಿಚಾರ ಬರುತ್ತಲೇ ಇದೆ, ಅಧಿಕಾರಿಗಳು ಮಾತ್ರ ಆರಾಮವಾಗಿ ಕುಳಿತಿದ್ದಾರೆ ಎಂದರು.
ಒಂದು ಕಡೆ ಶಾಸಕರಿಗೆ ನೋಟಿಸ್ ಕೊಡುವರು, ಇನ್ನೊಂದು ಕಡೆ ಅವರು ಡಿ.ಕೆ.ಶಿವಕುಮಾರ್ ಬಗ್ಗೆ ಅಭಿಮಾನದಿಂದ ಹೇಳಿದರು ಅಂತ ಹೇಳುತ್ತಾರೆ, ಇದು ಎಂಥ ರಾಜಕೀಯ ಎಂದು ಪ್ರಶ್ನಿಸಿದರು.
ರಾಜ್ಯ ಪಾಪರ್‌ಗೆ ಸರ್ಕಾರ ಯತ್ನ:
ಕೇರಳ ಮತ್ತು ಹಿಮಾಚಲ ರಾಜ್ಯದ ಪರಿಸ್ಥಿತಿ ಹೇಗೆ ಪಾಪರ್ ಆಗಿದೆಯೋ, ಅದೇ ರೀತಿ ಕರ್ನಾಟಕವನ್ನು ಪಾಪರ್ ಮಾಡಲು ಸಿದ್ದರಾಮಯ್ಯ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ದೆಹಲಿಗೆ ಗ್ಯಾರಂಟಿಯ ಹೆಸರಿನಲ್ಲಿ ಕಿಕ್ ಔಟ್ ಮಾಡೋ ಪ್ಲಾನ್ ಸಿದ್ಧವಾಗಿದೆ. ಕರ್ನಾಟಕ ಸರ್ಕಾರ ಬಜೆಟ್‌ನಲ್ಲಿ ಉಳಿದಿದ್ದ ₹೮೦ ಸಾವಿರ ಕೋಟಿ ರು. ಅಭಿವೃದ್ಧಿಗೆ ವೆಚ್ಚ ಮಾಡಬೇಕಿತ್ತು. ಆದರೆ ಇವರು ಗ್ಯಾರಂಟಿ ಯೋಜನೆಗಳಿಗೇ ₹೬೫ ಸಾವಿರ ಕೋಟಿ ರು. ಹಂಚಿದ್ದಾರೆ. ಉಳಿದ ₹೧೫ ಸಾವಿರ ಕೋಟಿಯಿಂದ ಜಿಲ್ಲೆಗಳ ಅಭಿವೃದ್ಧಿಗೆ ಏನು ಕೊಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಿಎಂ ಬದಲಾವಣೆ ಬಗ್ಗೆ ಬಾಯಿ ಮುಚ್ಚಿಕೊಂಡಿರಿ ಎಂದಿದ್ದಾರೆ: ಸಚಿವ ಮಧುಕೊಪ್ಪಳ: ಮುಖ್ಯಮಂತ್ರಿ ಬದಲಾವಣೆ ಕುರಿತು ನಮಗೆ ಬಾಯಿ ಮುಚ್ಚಿಕೊಂಡು ಇರಲು ಹೇಳಿದ್ದಾರೆಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ ಗ್ರಾಮದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಬಾಯಿ ತೆರೆದರೆ ಏನು ಪ್ರಯೋಜನ? ನಾನು ಬಾಯಿ ತೆರೆಯುವವನಲ್ಲ. ಸಿಎಂ ಬದಲಾವಣೆ ವಿಚಾರದಲ್ಲಿ ಗಪ್ ಚುಪ್ ಇರುತ್ತೇನೆ. ಸುರ್ಜೇವಾಲ ಅವರು ನಮ್ಮ ನಾಯಕರು. ರಾಜ್ಯಕ್ಕೆ ಆಗಮಿಸಿ ಶಾಸಕರ ಸಭೆ ಮಾಡಿಕೊಂಡು ಹೋಗುತ್ತಾರೆ. ಅದರಿಂದ ನಿಮಗೇನು? ಶಾಸಕರ ಅಸಮಾಧಾನ ವಿಚಾರವಾಗಿ ಅವರೇನು ನಿಮಗೆ ಬಂದು ಹೇಳಿದರಾ ಎಂದು ಮಾಧ್ಯಮದವರನ್ನು ಸಚಿವರು ಪ್ರಶ್ನಿಸಿದರು.