ಬಳ್ಳಾರಿ: ಗಣಿಗಾರಿಕೆ ಬಾಧಿತ ಹಳ್ಳಿಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿಲ್ಲ ಎಂದು ಆರೋಪಿಸಿರುವ ಜನಸಂಗ್ರಾಮ ಪರಿಷತ್‌ನ ಮುಖ್ಯಸ್ಥ ಹಾಗೂ ಪರಿಸರ ಹೋರಾಟಗಾರ ಎಸ್.ಆರ್. ಹಿರೇಮಠ ಅವರು, ಕರ್ನಾಟಕ ಗಣಿಗಾರಿಕೆ ಪರಿಸರ ಪುನಶ್ಚೇತನ ನಿಗಮ (ಕೆಎಂಇಆರ್‌ಸಿ) ಹಣವನ್ನು ಬೇರೆ ಬೇರೆ ಕಡೆ ಬಳಕೆ ಮಾಡುವ ಮೂಲಕ ದ್ರೋಹ ಬಗೆಯಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆಯಿಂದಾಗಿ 140ಕ್ಕೂ ಹೆಚ್ಚು ಹಳ್ಳಿಗಳು ತೀವ್ರ ಬಾಧಿತಗೊಳಗಾಗಿವೆ. ಬಾಧಿತ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ನಿಗದಿಗೊಳಸಲಾದ ಕೆಎಂಇಆರ್‌ಸಿ ಹಣವನ್ನು ಬೇರೆ ಬೇರೆ ಯೋಜನೆಗಳಿಗೆ ಬಳಕೆ ಮಾಡಲಾಗುತ್ತಿರುವುದು ಗಮನಕ್ಕೆ ಬಂದಿದೆ. ಬಾಧಿತ ಪ್ರದೇಶಗಳು ಇಂದಿಗೂ ಕನಿಷ್ಠ ಮೂಲ ಸೌಕರ್ಯಗಳಿಂದ ವಂಚಿತಗೊಂಡಿವೆ. ಶುದ್ಧ ಕುಡಿಯುವ ನೀರು, ಶಾಲೆ, ಚರಂಡಿ ವ್ಯವಸ್ಥೆ, ಶೌಚಾಲಯ ಮತ್ತಿತರ ಸೌಕರ್ಯಗಳು ದಕ್ಕಿಲ್ಲ. ಆದರೆ, ನಿರ್ದಿಷ್ಟ ಯೋಜನೆ ನಿಗದಿಯಾಗಿರುವ ಹಣವನ್ನು ಬಳ್ಳಾರಿ ನಗರಕ್ಕೆ ಕುಡಿಯುವ ನೀರು ಯೋಜನೆಗೆಂದು ₹250 ಕೋಟಿ ಆಸ್ಪತ್ರೆಗೆಂದು ₹100 ಕೋಟಿಗಳಿಗೂ ಹೆಚ್ಚು ಹಣವನ್ನು ನಿಯಮ ಮೀರಿ ಬಳಕೆ ಮಾಡಲಾಗುತ್ತಿದೆ. ಕೆಎಂಆರ್‌ಇಸಿ ಹಾಗೂ ಜಿಲ್ಲಾ ಖನಿಜ ನಿಧಿಯನ್ನು ಬಾಧಿತ ಪ್ರದೇಶಗಳಿಗೆ ಮಾತ್ರ ಬಳಕೆ ಮಾಡಬೇಕು ಎಂಬುದ ಸುಪ್ರೀಂಕೋರ್ಟ್ ಸೂಚನೆಯಿದೆ. ಅಕ್ರಮ ಗಣಿಗಾರಿಕೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಆದ್ಯತೆ ನೀಡಬೇಕು ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಆದರೆ, ಜಿಲ್ಲೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೇರಿಕೊಂಡು ಬೇಕಾಬಿಟ್ಟಿಯಾಗಿ ಹಣ ಬಳಕೆ ಮಾಡುತ್ತಿದ್ದಾರೆ. ಈ ಸಂಬಂಧ ಕೆಎಂಇಆರ್‌ಸಿ ಮುಖ್ಯಸ್ಥ ಹಾಗೂ ನ್ಯಾಯಮೂರ್ತಿಗಳಾದ ಸುದರ್ಶನ ರೆಡ್ಡಿ ಅವರಿಗೆ ದೂರು ನೀಡಲಾಗುವುದು ಎಂದು ಎಸ್.ಆರ್. ಹಿರೇಮಠ ಹೇಳಿದರು.ಗಣಿಗಾರಿಕೆ ವೇಳೆ ಬಳ್ಳಾರಿ ಹಾಗೂ ಹೊಸಪೇಟೆ ನಗರಗಳಿಗೂ ಒಂದಷ್ಟು ಹಾನಿಯಾಗಿದೆ. ಈ ಎರಡು ನಗರಗಳಿಗೆ ಒಂದಷ್ಟು ಹಣ ಬಳಕೆ ಮಾಡಲು ಯಾವ ಅಭ್ಯಂತರವಿಲ್ಲ. ಆದರೆ, ಗಣಿಬಾಧಿತ ಪ್ರದೇಶಗಳಿಗೆ ಆದ್ಯತೆ ನೀಡಬೇಕು. ಬೇಕಾಬಿಟ್ಟಿಯಾಗಿ ಗಣಿಗಾರಿಕೆ ಮಾಡಿದ ಇಲ್ಲಿನ ಕಂಪನಿಗಳಿಂದ ವಸೂಲಿ ಮಾಡಿದ ₹30 ಸಾವಿರ ಕೋಟಿ ಹಣವನ್ನು ಮೊದಲು ಗ್ರಾಮೀಣ ಪ್ರದೇಶದ ಬಾಧಿತ ಪ್ರದೇಶಗಳಿಗೆ ಒತ್ತು ನೀಡಿ ಮೂಲ ಸೌಕರ್ಯಗಳಿಗೆ ಬಳಕೆ ಮಾಡಬೇಕು. ಆದರೆ, ಬಳ್ಳಾರಿ, ಹೊಸಪೇಟೆ, ಚಿತ್ರದುರ್ಗ ನಗರಗಳಿಗೆ ಹಣ ಬಳಕೆಯಾದರೆ ಸುಮ್ಮನಿರಲು ಸಾಧ್ಯವಿಲ್ಲ. ಈ ಸಂಬಂಧ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ. ಹಣ ಬೇಕಾಬಿಟ್ಟಿಯಾಗಿ ಬಳಕೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.
ಚಾಗನೂರು ಸಿರವಾರ ರೈತ ಹೋರಾಟ ಸಮಿತಿಯ ಹಿರಿಯ ವಕೀಲ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ, ರೈತ ಮುಖಂಡ ಮಾಧವರೆಡ್ಡಿ ಕರೂರು ಸುದ್ದಿಗೋಷ್ಠಿಯಲ್ಲಿದ್ದರು.