ಕೊಪ್ಪಳ ವಿಭಾಗೀಯ ಅಂಚೆ ಕಚೇರಿ ಮಾದರಿಯಾಗಲಿ: ಸಂಸದ ಸಂಗಣ್ಣ ಕರಡಿ

KannadaprabhaNewsNetwork | Published : Mar 2, 2024 1:51 AM

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ವಿಕಸಿತ ಭಾರತ ಆರಂಭಿಸಿದ್ದಾರೆ. ಮುಂದೆ ಭಾರತ ಜಗತ್ತಿನ ನಾಯಕನಾಗಲಿದೆ. ಇಂದು ಭಾರತ ಆರ್ಥಿಕತೆ ವಿಶ್ವದಲ್ಲಿ 3ನೇ ಸ್ಥಾನಕ್ಕೆ ಬಂದಿದೆ.

ಕೊಪ್ಪಳ: 20 ವರ್ಷಗಳ ಹೋರಾಟದ ಫಲವಾಗಿ ಈಗ ದಕ್ಕಿರುವ ಕೊಪ್ಪಳ ವಿಭಾಗೀಯ ಅಂಚೆ ಕಚೇರಿ ಆಡಳಿತ ದೇಶಕ್ಕೆ ಮಾದರಿಯಾಗಲಿ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

ನಗರದ ಸಾಹಿತ್ಯ ಭವನದಲ್ಲಿ ಶುಕ್ರವಾರ ಕೊಪ್ಪಳ ಅಂಚೆ ವಿಭಾಗ ಉದ್ಘಾಟಿಸಿ ಅವರು ಮಾತನಾಡಿದರು.

ಸಾರ್ಥಕ ಕ್ಷಣ ಎನ್ನುವ ಭಾವನೆ ಮೂಡಿದೆ. ನಿಜಕ್ಕೂ ಸಂತೋಷವಾಗುತ್ತದೆ. ಇಂಥದ್ದೊಂದು ಪ್ರಯತ್ನ ಕೈಗೂಡಿದಾಗ ಮತ್ತು ಹೀಗೆಲ್ಲ ಪ್ರೀತಿ ತೋರಿದಾಗ ಸಾರ್ಥಕವಾಯಿತು ಎನಿಸುತ್ತದೆ ಎಂದು ಭಾವುಕರಾಗಿ ನುಡಿದರು.

ಅಂಚೆ ಇಲಾಖೆಯು ವಿಮಾ, ಪಾಸ್‌ಪೋರ್ಟ್, ರಪ್ತು ಸೇವಾ ಕೆಲಸ ಮಾಡುತ್ತಿದೆ. ಅಂಚೆಯವರು ನಿಮ್ಮ ಮನೆಗೆ ಬರುತ್ತಾರೆ. ಬ್ಯಾಂಕ್ ಸೌಲಭ್ಯ ಕೊಡುತ್ತಿದ್ದಾರೆ. ಆದರೆ ಬ್ಯಾಂಕಿನಲ್ಲಿ ಅಂತಹ ಸೌಲಭ್ಯ ದೊರೆಯಲ್ಲ. ಪ್ರಧಾನಿ ನರೇಂದ್ರ ಮೋದಿ ವಿಕಸಿತ ಭಾರತ ಆರಂಭಿಸಿದ್ದಾರೆ. ಮುಂದೆ ಭಾರತ ಜಗತ್ತಿನ ನಾಯಕನಾಗಲಿದೆ. ಇಂದು ಭಾರತ ಆರ್ಥಿಕತೆ ವಿಶ್ವದಲ್ಲಿ 3ನೇ ಸ್ಥಾನಕ್ಕೆ ಬಂದಿದೆ. ಜಿಡಿಪಿ ಶೇ.8.4ಕ್ಕೆ ಹೆಚ್ಚಾಗಿದ್ದು, ದೇಶ ಬೆಳವಣಿಗೆಗೆ ಸಾಕ್ಷಿಯಾಗಿದೆ ಎಂದರು.

ಜಿಲ್ಲೆಯಲ್ಲಿ ಹೋರಾಟಗಳು ಇದ್ದಾಗ ರಾಜಕಾರಣಿಗಳು ಎಚ್ಚೆತ್ತುಕೊಳ್ಳುತ್ತಾರೆ. ನಿಮ್ಮ ಬೇಕು, ಬೇಡಿಕೆಗೆ ಹೋರಾಟ ಮುಂದುವರೆಸಿ. ನಿಮ್ಮ ಆಶೀರ್ವಾದಕ್ಕೆ ದೊಡ್ಡ ಶಕ್ತಿಯಿದೆ. ಕಾಯಕದ ಮೇಲೆ ನೀನು ಬದುಕು ಎಂದು ಬಸವಣ್ಣ ಹೇಳುತ್ತಾರೆ. ಕೆಲಸ ಮಾಡಿ ಬದುಕುವುದು ಕಲಿಯಬೇಕು. ದೇಹಕ್ಕೆ ವಯಸ್ಸಾಗಬಹುದು. ಮನಸ್ಸಿಗೆ ವಯಸ್ಸಾಗಲ್ಲ. ಇಂದು ಹಳ್ಳಿಯಲ್ಲಿ ಪುರುಷರು ಸೋಮಾರಿಗಳಾಗಿದ್ದಾರೆ. ಮುಸ್ಲಿಮರನ್ನು ನೋಡಿ ನಾವು ಕಲಿಯಬೇಕಿದೆ. ಅವರು ಪಾನ್ ಶಾಪ್, ಸಣ್ಣ ಪುಟ್ಟ ವ್ಯಾಪಾರ ಮಾಡುತ್ತಾರೆ. ಚಪ್ಪಲಿ ಅಂಗಡಿ ನಡೆಸುತ್ತಾರೆ. ಒಂದಿಲ್ಲೊಂದು ಕೆಲಸ ಮಾಡುತ್ತಲೇ ಇರುತ್ತಾರೆ. ನಾವು ಯಾವುದಾದರೂ ಸಣ್ಣ ಉದ್ಯೋಗವಾದರೂ ಮಾಡಬೇಕು ಎಂದರು.

ಕರ್ನಾಟಕ ವೃತ್ತ ಚೀಫ್‌ ಪೋಸ್ಟ್ ಮಾಸ್ಟರ್ ಜನರಲ್ ರಾಜೇಂದ್ರ ಕುಮಾರ ಮಾತನಾಡಿದರು.

ಸಮಾರಂಭದಲ್ಲಿ ಧಾರವಾಡ ಉತ್ತರ ವಲಯ ಪೋಸ್ಟ್ ಮಾಸ್ಟರ್ ಜನರಲ್ ಸುಶೀಲ್ ಕುಮಾರ, ಎಂಎಲ್ಸಿ ಹೇಮಲತಾ ನಾಯಕ್, ಧಾರವಾಡ ಉತ್ತರ ವಲಯ ಅಂಚೆ ಸೇವೆಗಳ ನಿರ್ದೇಶಕಿ ವಿ ತಾರಾ, ಕೊಪ್ಪಳ ವಿಭಾಗೀಯ ಅಂಚೆ ಪ್ರಭಾರಿ ಅಧೀಕ್ಷಕ ನಿಂಗನಗೌಡ ಭಂಗೀಗೌಡರ್, ಕೊಪ್ಪಳ ಅಂಚೆ ನಿರೀಕ್ಷಕ ಮಹಾಂತೇಶ ತೊಗರಿ, ಅಂಚೆ ನೌಕರ ಜಿ.ಎನ್.ಹಳ್ಳಿ ಸೇರಿ ಇತರರು ಉಪಸ್ಥಿತರಿದ್ದರು.

ಕೊಪ್ಪಳ ವಿಭಾಗೀಯ ಅಂಚೆ ಕಚೇರಿ ಉದ್ಘಾಟನೆ ನಿಮಿತ್ತ ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ಸಂಸದ ಸಂಗಣ್ಣ ಕರಡಿ ಅವರನ್ನು ಅಂಚೆ ಇಲಾಖೆಯ ಸಿಬ್ಬಂದಿ ಹೊತ್ತು ಕುಣಿದರು.

Share this article