ಸಾಹಿತ್ಯ ಚಟುವಟಿಕೆಗಳು ವಿದ್ಯಾರ್ಥಿ ಕೇಂದ್ರಿತವಾಗಲಿ-ಹಿರೇಮಠ

KannadaprabhaNewsNetwork |  
Published : Nov 05, 2025, 12:45 AM IST
2ಎಚ್‌ವಿಆರ್1 | Kannada Prabha

ಸಾರಾಂಶ

ವಿದ್ಯಾರ್ಥಿಗಳೇ ನಮ್ಮ ಭವಿಷ್ಯದ ಬೆಳಕು. ಅವರ ಎದೆಯಲ್ಲಿ ಪ್ರೀತಿ, ವಿಶ್ವಾಸ, ಕರುಣೆ, ಸಹನೆ, ಸಹಿಷ್ಣುತೆ ಇತ್ಯಾದಿ ಮೌಲ್ಯಗಳನ್ನು ಬಿತ್ತಿ ಅಧ್ಯಯನದಲ್ಲಿ ತೊಡಗುವಂತೆ ಮಾಡಬೇಕಿದೆ.

ಹಾವೇರಿ: ವಿದ್ಯಾರ್ಥಿಗಳೇ ನಮ್ಮ ಭವಿಷ್ಯದ ಬೆಳಕು. ಅವರ ಎದೆಯಲ್ಲಿ ಪ್ರೀತಿ, ವಿಶ್ವಾಸ, ಕರುಣೆ, ಸಹನೆ, ಸಹಿಷ್ಣುತೆ ಇತ್ಯಾದಿ ಮೌಲ್ಯಗಳನ್ನು ಬಿತ್ತಿ ಅಧ್ಯಯನದಲ್ಲಿ ತೊಡಗುವಂತೆ ಮಾಡಬೇಕಿದೆ. ಇದೆಲ್ಲವೂ ಸಾಹಿತ್ಯದ ಓದಿನಿಂದ ಮಾತ್ರ ಸಾಧ್ಯ. ಆದ್ದರಿಂದ ವಿದ್ಯಾರ್ಥಿ ಸಮುದಾಯದಲ್ಲಿ ಸಾಹಿತ್ಯದ ಅಭಿರುಚಿಯನ್ನು ಬೆಳೆಸಬೇಕಾದರೆ ನಮ್ಮ ಸಾಹಿತ್ಯ ಚಟುವಟಿಕೆಗಳು ವಿದ್ಯಾರ್ಥಿ ಕೇಂದ್ರಿತವಾಗಬೇಕಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಹೇಳಿದರು.ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚಕೋರ ಸಾಹಿತ್ಯ ವಿಚಾರ ವೇದಿಕೆ, ಹಾವೇರಿ ಹಾಗೂ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿಗಳ ಕವಿಗೋಷ್ಠಿ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ರುಚಿ ಬೆಳೆಸಿದರೆ ಭವಿಷ್ಯದ ಉತ್ತಮ ಓದುಗರು ಮತ್ತು ಸಾಹಿತಿಗಳನ್ನ ಸೃಷ್ಟಿಸಿದಂತಾಗುತ್ತದೆ. ಈ ಮೂಲಕ ಉತ್ತಮ ವ್ಯಕ್ತಿತ್ವದ ಪ್ರಜೆಗಳನ್ನು ನಿರ್ಮಿಸಲು ಸಾಧ್ಯ. ಇಂತಹ ಮಹತ್ವದ ಕೆಲಸ ಮಾಡುತ್ತಿರುವ ಚಕೋರ ಸಾಹಿತ್ಯ ವೇದಿಕೆಯ ಪ್ರಯತ್ನ ಅಭಿನಂದನೀಯ.ಈ ಚಟುವಟಿಕೆಗಳು ಮುಂದೆ ಜಿಲ್ಲೆಯಾದ್ಯಂತ ಪಸರಿಸಲಿ ಎಂದು ಆಶೀಸಿದರು.ಸಾಹಿತಿ ಸತೀಶ ಕುಲಕರ್ಣಿ ಕವಿತೆ ವಾಚಿಸಿದ ವಿದ್ಯಾರ್ಥಿನಿಯರನ್ನು ಅಭಿನಂದಿಸಿ, ಇಂಥ ಹೊಸ ಪ್ರತಿಭೆಗಳು ಸಾಹಿತ್ಯ ಲೋಕಕ್ಕೆ ಬರಬೇಕೆಂದು ಸ್ವಾಗತಿಸುತ್ತ ವೇದಿಕೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಾಹಿತ್ಯ ಅಕಾಡೆಮಿಯ ಸದಸ್ಯ ಡಾ. ಮಲ್ಲಿಕಾರ್ಜುನ ಮಾನ್ಪಡೆ ಮಾತನಾಡಿ, ಇಂದಿನ ವಿದ್ಯಾರ್ಥಿಗಳಲ್ಲಿ ಪ್ರಬುದ್ಧತೆ ಬೆಳೆಯುತ್ತಿದೆ. ಸಮಾಜದಲ್ಲಿ ಘಟಿಸುವ ಘಟನೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಬೇಕು. ಮನುಷ್ಯರೆಲ್ಲಾ ಒಂದೇ ಎನ್ನುವ ಭಾವ ಹೊಂದಬೇಕು. ಅನುಭವಗಳನ್ನು ಅಕ್ಷರದ ಮೂಲಕ ವ್ಯಕ್ತಪಡಿಸಬೇಕು. ಚಕೋರ ವೇದಿಕೆ ನಿಮಗೆ ಸೂಕ್ತವಾಗಿ ಸ್ಪಂದಿಸಲಿದೆ ಎಂದು ಕರೆ ನೀಡಿದರು. ನಂತರ ಕವಿಯತ್ರಿ ದೀಪಾ ಗೋನಾಳ ಹಾವೇರಿ ಜಿಲ್ಲೆಯ ಹೊಸ ಬರಹಗಾರರ ಸಾಹಿತ್ಯದ ನೆಲೆಗಳು ಕುರಿತು ಉಪನ್ಯಾಸ ನೀಡಿದರು. ಜಾನಪದ ವಿವಿಯ ಸಹಪ್ರಾಧ್ಯಾಪಕ ಡಾ. ಚಂದ್ರಪ್ಪ ಸೊಬಟಿ ಅವರು ಜನಪದ ಸಾಹಿತ್ಯದಲ್ಲಿ ಸೌಹಾರ್ದತೆಯ ನೆಲೆಗಳು ವಿಷಯದ ಕುರಿತು ಉಪನ್ಯಾಸ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಬಸವರಾಜ ಇಟ್ಟಿಗುಡಿ ಮಾತನಾಡಿ, ವಿದ್ಯಾರ್ಥಿಗಳು ಇಂತಹ ಸಾಹಿತ್ಯ ಕಾರ್ಯಕ್ರಮಗಳ ಉಪಯೋಗ ಪಡೆದುಕೊಳ್ಳಬೇಕು. ಹೆಚ್ಚು ಅಧ್ಯಯನಶೀಲರಾದರೆ ಬರವಣಿಗೆ ಪ್ರಬುದ್ಧವಾಗಿ ಅರಳುತ್ತದೆ. ಚಕೋರ ವೇದಿಕೆ ಮೂಲಕ ಇಂತಹ ಅನೇಕ ಕಾರ್ಯಕ್ರಮಗಳು ಜರುಗಲಿ ಎಂದರು. ಪ್ರಾಸ್ತಾವಿಕವಾಗಿ ಚಕೋರ ವೇದಿಕೆಯ ಜಿಲ್ಲಾ ಸಂಚಾಲಕ ಶೇಖರ ಭಜಂತ್ರಿ ಮಾತನಾಡಿ, ಸಾಹಿತ್ಯ ಅಕಾಡೆಮಿಯ ಕಾರ್ಯ ಅರ್ಥಪೂರ್ಣವಾಗಿದ್ದು, ಮೊದಲ ಸಮಾರಂಭ ನಮ್ಮ ಕಾಲೇಜಲ್ಲಿ ನಡೆದಿದ್ದು ಸಂತಸ ತಂದಿದೆ. ಚಕೋರ ಮೂಲಕ ಶಾಲಾ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳ ಕನಸುಗಳಿಗೆ ಬಣ್ಣಗಳನ್ನು ತುಂಬಿ, ಅವರ ಆಲೋಚನೆಗಳು, ಕುಟುಂಬ ಮತ್ತು ಕಲ್ಪನಾ ಲೋಕವನ್ನು ಅಕ್ಷರ ರೂಪಕ್ಕಿಳಿಸಲು ಬಯಸುವ ಸಾಹಿತ್ಯಸಕ್ತ ಹೊಸ ಪ್ರತಿಭೆಗಳನ್ನು ಹುಡುಕಿ ಸೂಕ್ತ ಮಾರ್ಗದರ್ಶನ ನೀಡಿ ಹೊಸ ಪೀಳಿಗೆಯ ಸಾಹಿತಿಗಳನ್ನು ಸೃಷ್ಟಿಸುವ ಅನಿವಾರ್ಯತೆ ಇದೆ ಎಂದರು. ನಂತರ ವಿದ್ಯಾರ್ಥಿಗಳು ಕವಿತೆಗಳ ಮೂಲಕ ವಿಭಿನ್ನ ನೆಲೆಗಳಲ್ಲಿ ತಮ್ಮ ಅನುಭವವನ್ನು ತುಂಬಾ ಸುಂದರವಾಗಿ ಕವಿತೆಗಳಲ್ಲಿ ಕಟ್ಟಿಕೊಟ್ಟಿದ್ದು ಗಮನ ಸೆಳೆಯಿತು.ಕಾರ್ಯಕ್ರಮದಲ್ಲಿ ಸಾಹಿತಿ ಶ್ರೀಹರ್ಷ ಸಾಲಿಮಠ, ಸಂಚಾಲಕ ಮಾರುತಿ ತಳವಾರ, ನಿರ್ಮಲ ಎಸ್. ಇದ್ದರು. ಮಾರುತಿ ತಳವಾರ ಸ್ವಾಗತಿಸಿದರು. ಉಪನ್ಯಾಸಕ ಈಶ್ವರಗೌಡ ಪಾಟೀಲ ನಿರೂಪಿಸಿದರು. ಬೀರಪ್ಪ ಕುರುಬರ ವಂದಿಸಿದರು.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ