ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ದಿವ್ಯ ಸಾನ್ನಿಧ್ಯವನ್ನು ಮಠದ ಪೀಠಾಧ್ಯಕ್ಷರಾದ ಶ್ರೀ ಬಸವೇಶ್ವರ ಚೈತನ್ಯ ಮಹಾ ಸ್ವಾಮೀಜಿ ವಹಿಸಿ, ನಂತರ ಆಶೀರ್ವಚನ ನೀಡಿ, ಇಂದಿನ ಯುವ ಪೀಳಿಗೆ ಸಾಹಿತ್ಯದ ಮೂಲಕ ಸಮಾಜದ ಅಂತಃಕರಣವನ್ನು ಜಾಗೃತಿಗೊಳಿಸಬೇಕಾದ ಅಗತ್ಯವಿದೆ. ಲಿಖಿತ್ ಅವರ ಕಾವ್ಯದಲ್ಲಿ ಆಂತರಿಕ ಸಂವೇದನೆ, ಆತ್ಮ ಪರಿಶೀಲನೆ ಮತ್ತು ಮಾನವೀಯ ಮೌಲ್ಯಗಳು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಕೃತಿ ಲೋಕಾರ್ಪಣೆ ಹಾಗೂ ಉದ್ಘಾಟನೆಯನ್ನು ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ. ಎನ್. ಬಾಲಕೃಷ್ಣ ನೆರವೇರಿಸಿ ಮಾತನಾಡಿ, ಯುವ ಬರಹಗಾರರು ಸಾಹಿತ್ಯದ ಮೂಲಕ ಸಮಾಜಕ್ಕೆ ದಿಕ್ಕು ತೋರಿಸುತ್ತಿದ್ದಾರೆ. ಲಿಖಿತ್ ಹೊನ್ನಾಪುರ ಅವರ ಸಾಹಿತ್ಯಯಾನ ಇನ್ನಷ್ಟು ಎತ್ತರ ತಲುಪಲಿ ಎಂದು ಶುಭ ಹಾರೈಸಿದರು.ಕನ್ನಡ ಸಾಹಿತ್ಯ ಪರಿಷತ್ ಮಾಗಡಿ ಅಧ್ಯಕ್ಷ ಪದ್ಮನಾಭ ಮಾತನಾಡಿ, ಕನ್ನಡ ಸಾಹಿತ್ಯದ ಭವಿಷ್ಯ ಯುವ ಬರಹಗಾರರ ಕೈಯಲ್ಲಿದೆ ಎಂದು ಅಭಿಪ್ರಾಯಪಟ್ಟರು.ಅಂತರ್ಮುಖಿಯ ಆಂತರ್ಯ ಕೃತಿ ಮಾನವನೊಳಗಿನ ಸಂಘರ್ಷ, ಮೌನ ಮತ್ತು ಭಾವನಾತ್ಮಕ ಲೋಕವನ್ನು ಸೂಕ್ಷ್ಮವಾಗಿ ತೆರೆದಿಡುತ್ತದೆ ಎಂದು ವಿವರಿಸಿದರು .
ಕೃತಿಯ ಲೇಖಕರಾದ ಲಿಖಿತ್ ಹೊನ್ನಾಪುರ ಮಾತನಾಡಿ, ಈ ಕೃತಿ ನನ್ನ ಆತ್ಮ ಸಂಭಾಷಣೆಯಾಗಿದ್ದು, ನನಗೆ ಬೆಂಬಲವಾಗಿ ನಿಂತ ಸಾಹಿತ್ಯಾಸಕ್ತರು, ಗುರುಗಳು ಹಾಗೂ ಕುಟುಂಬದವರ ಪ್ರೋತ್ಸಾಹವೇ ನನ್ನ ಬರವಣಿಗೆಗೆ ಶಕ್ತಿ ಎಂದು ಕೃತಜ್ಞತೆ ಸಲ್ಲಿಸಿದರು.ಸಾಂಸ್ಕೃತಿಕ ಕಾರ್ಯಕ್ರಮ ಗೀತಾ ವೈಭವವನ್ನು ಕುಮಾರಿ ಮಹಿಮಾ ಎಚ್.ಜಿ., ಕುಮಾರಿ ಇಂಚರ ಭಾರದ್ವಾಜ್ ಹಾಗೂ ಪರಿಣಿತ ಯೋಗ ಪ್ರದರ್ಶನವು ಶ್ರೇಯ, ಹರಿಪ್ರಿಯಾ, ಬಿ.ಎಸ್. ಶಿಲ್ಪ, ಹರ್ಷಿತ, ಚಿಂತನ ಹೊಯ್ಸಳ ಇವರಿಂದ ಪ್ರದರ್ಶನಗೊಂಡಿತು.
ಮುಖ್ಯ ಅತಿಥಿಗಳಾಗಿ ಗೀತಾ ವಿ.ಆರ್., ಎಚ್. ಆರ್. ಮಂಜುನಾಥ್ ಭಾಗವಹಿಸಿದ್ದರು.೨೦೨೫ನೇ ಸಾಲಿನ ಪೂಚಂತೇ ಸಾಹಿತ್ಯ ಪುರಸ್ಕಾರವನ್ನು ವಿವಿಧ ಸಾಹಿತಿಗಳಿಗೆ ಪ್ರದಾನ ಮಾಡಲಾಯಿತು. ನಿಧಿ ಕಥೆಗಳ ಕುಡಿಕೆ- ಕೌಶಿಕ್ ರತ್ನ, ಆತ್ಮದ ಕನ್ನಡಿ- ಚೆನ್ನಬಸಯ್ಯ ವಿ. ಪೂಚೇರ, ಪವಿತ್ರ ಪ್ರೀತಿ- ಪ್ರಾಪ್ತಿ, ಉಳುವಂಗಡ ಕಾವೇರಿ- ಉದಯ, ಹಲೋ ಟೀಚರ್- ಅನುಸೂಯ ಯತೀಶ್, ಭರವಸೆಯ ಹೆಜ್ಜೆಗಳು- ಪ್ರಜ್ವಲ್ ಶಣೈ ಪುರಸ್ಕಾರ ಪಡೆದವರಾಗಿದ್ದಾರೆ. ಗಣ್ಯ ಸಾಹಿತಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.